ಪಂಜಾಬ್ ವಿರುದ್ದ ಸೇಡು ತೀರಿಸಿಕೊಂಡ ಸನ್‌ರೈಸರ್ಸ್ ಹೈದ್ರಾಬಾದ್ – ಕೊನೇವರೆಗೂ ಹೋರಾಡಿ ಶತಕ ಸಿಡಿಸಿದ ಕೊನೊಲಿ

ಪಂಜಾಬ್ ವಿರುದ್ದ ಸೇಡು ತೀರಿಸಿಕೊಂಡ ಸನ್‌ರೈಸರ್ಸ್ ಹೈದ್ರಾಬಾದ್ – ಕೊನೇವರೆಗೂ ಹೋರಾಡಿ ಶತಕ ಸಿಡಿಸಿದ ಕೊನೊಲಿ

ಪಂಜಾಬ್ ಕಿಂಗ್ಸ್ ಪ್ರತೀಕಾರದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದ್ರಾಬಾದ್ ವಿರುದ್ಧ ಸೋತಿದೆ. ಜೊತೆಗೆ ಪಾಯಿಂಟ್ಸ್ ಟೇಬಲ್ ಪಟ್ಟಿಯಲ್ಲಿರುವ ಅಗ್ರಸ್ಥಾನದಿಂದ ಜಾರಿಬಿದ್ದಿದೆ. ಇದೀಗ ಹೈದ್ರಾಬಾದ್ ತಂಡ ಮೊದಲ ಸ್ಥಾನ ಅಲಂಕರಿಸಿದೆ.

ಇದನ್ನೂ ಓದಿ:ಬೆಥೆಲ್ ಜಾಗಕ್ಕೆ ಬರ್ತಾರಾ ಕಾಕ್ಸ್? – RCBಗೆ ಬೇಕಿದೆ ಬ್ಯಾಟಿಂಗ್ ಖದರ್

ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ಪಂಜಾಬ್ ಕಿಂಗ್ಸ್ ವಿರುದ್ಧ 33 ರನ್​ಗಳಿಂದ ಗೆಲುವು ಸಾಧಿಸಿದೆ. ತವರಿನ ಮೈದಾನದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ ಭರ್ಜರಿ ಬ್ಯಾಟಿಂಗ್ ನಡೆಸಿ 235 ರನ್​ಗಳ ಬೃಹತ್ ಮೊತ್ತ ಕಲೆ ಹಾಕಿತ್ತು. 236 ರನ್​ಗಳ ಬೃಹತ್ ಗುರಿ ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 202 ರನ್​ಗಳಿಸಿ ಸೋಲೊಪ್ಪಿಕೊಂಡಿದೆ. ಪಂಜಾಬ್ ಈ ಸೋಲಿನೊಂದಿಗೆ ಲೀಗ್​​ನಲ್ಲಿ ಬಹಳ ದಿನಗಳ ನಂತರ ಅಗ್ರಸ್ಥಾನದಿಂದ 2ನೇ ಸ್ಥಾನಕ್ಕೆ ಕುಸಿದಿದೆ.

ಟಾಸ್​ ಸೋತು ಬ್ಯಾಟಿಂಗ್ ಮಾಡಿದ ಸನ್​ರೈಸರ್ಸ್ ಹೈದರಾಬಾದ್ ತಂಡ ಸ್ಫೋಟಕ ಆರಂಭ ಪಡೆದುಕೊಂಡಿತು. ಅಭಿಷೇಕ್ ಶರ್ಮಾ ಕೇವಲ 13 ಎಸೆತಗಳಲ್ಲಿ 2 ಬೌಂಡರಿ, 4 ಸಿಕ್ಸರ್​ಗಳ ಸಹಿತ 35 ರನ್ ಗಳಿಸಿ ಲಾಕಿ ಫರ್ಗ್ಯುಸನ್​ ಬೌಲಿಂಗ್​ನಲ್ಲಿ ಶ್ರೇಯಸ್​ ಅಯ್ಯರ್​ಗೆ ಕ್ಯಾಚ್ ನೀಡಿ ಔಟ್ ಆದರು. ನಂತರ ಟ್ರಾವಿಸ್ ಜೊತೆಗೂಡಿದ ಇಶಾನ್ ಕಿಶನ್ 2ನೇ ವಿಕೆಟ್ ಜೊತೆಯಾಟದಲ್ಲಿ 30 ರನ್ ಸೇರಿಸಿದರು. ಹೆಡ್ 19 ಎಸೆತಗಳಲ್ಲಿ ತಲಾ 3 ಬೌಂಡರಿ, 3 ಸಿಕ್ಸರ್​ಗಳ ಸಹಿತ 38 ರನ್​ಗಳಿಸಿ ಚಹಲ್​ ಬೌಲಿಂಗ್​​ನಲ್ಲಿ ಮಾರ್ಕೊ ಯಾನ್ಸನ್​ಗೆ ಕ್ಯಾಚ್ ನೀಡಿ ಔಟ್ ಆದರು. 4ನೇ ಕ್ರಮಾಂಕದಲ್ಲಿ ಬಂದ ವಿಧ್ವಂಸಕ ಬ್ಯಾಟರ್ ಹೆನ್ರಿಕ್ ಕ್ಲಾಸೆನ್ 3ನೇ ವಿಕೆಟ್​ಗೆ ಇಶಾನ್ ಕಿಶನ್​ ಜೊತೆಗೂಡಿ 88 ರನ್​ ಜೊತೆಯಾಟ ನಡೆಸಿದರು. ಇಶಾನ್ ಕಿಶನ್ ಕೇವಲ 32 ಎಸೆತಗಳಲ್ಲಿ 2 ಬೌಂಡರಿ, 4 ಸಿಕ್ಸರ್​ಗಳ ಸಹಿತ 55 ರನ್​ಗಳಿಸಿದರು. ಇದು ಅವರ ಈ ವರ್ಷದ ನಾಲ್ಕನೇ ಅರ್ಧಶತಕವಾಗಿದೆ. ಕಿಶನ್ ಅರ್ಷದೀಪ್ ಸಿಂಗ್​​ಗೆ ವಿಕೆಟ್ ಒಪ್ಪಿಸಿದರು. ಕೊನೆಯಲ್ಲಿ ಅಬ್ಬರಿಸಿದ ಹೆನ್ರಿಕ್ ಕ್ಲಾಸೆನ್ ಕೊನೆಯ ಎಸೆತದಲ್ಲಿ ಔಟ್ ಆಗುವ ಮುನ್ನ 43 ಎಸೆತಗಳಲ್ಲಿ 3 ಬೌಂಡರಿ, 4 ಸಿಕ್ಸರ್​ಗಳ ಸಹಿತ 69 ರನ್​ಗಳಿಸಿದರೆ, ನಿತೀಶ್ ಕುಮಾರ್ ರೆಡ್ಡಿ 13 ಎಸೆತಗಳಲ್ಲಿ ತಲಾ 2 ಬೌಂಡರಿ, 2 ಸಿಕ್ಸರ್​ಗಳ ಸಹಿತ ಅಜೇಯ 29 ರನ್​ಗಳಿಸಿದರು.

236 ರನ್​ಗಳ ಗುರಿ ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ ಕೇವಲ 4 ರನ್​ಗಳಾಗುವಷ್ಟರಲ್ಲಿ 2 ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು. ಪ್ರಭಸಿಮ್ರನ್ ಸಿಂಗ್ 3 ಹಾಗೂ ಪ್ರಿಯಾಂಶ್ ಆರ್ಯ ಕೇವಲ 1 ರನ್​ಗಳಿಸಿ ಔಟ್ ಆದರು. ನಾಯಕ ಶ್ರೇಯಸ್ ಅಯ್ಯರ್ (5) ಕೂಡ ಪವರ್​ ಪ್ಲೇನಲ್ಲೇ ವಿಕೆಟ್ ಒಪ್ಪಿಸಿ ಬೇಸರ ಮೂಡಿಸಿದರು. 23ಕ್ಕೆ3 ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿದ್ದ ಪಂಜಾಬ್‌ಗೆ ಕೊನೊಲಿ ಹಾಗೂ ಮಾರ್ಕಸ್ ಸ್ಟೋಯ್ನಿಸ್ ಚೇತರಿಕೆ ನೀಡಿದರು. ಈ ಜೋಡಿ 4ನೇ ವಿಕೆಟ್ ಜೊತೆಯಾಟದಲ್ಲಿ 40 ರನ್​ ಸೇರಿಸಿದರು. ಆದರೆ ಬೃಹತ್ ಮೊತ್ತದ ಚೇಸಿಂಗ್ ಒತ್ತಡಕ್ಕೆ ಸಿಲುಕಿದ ಸ್ಟೋಯ್ನಿಸ್​ 14 ಎಸೆತಗಳಲ್ಲಿ 3 ಬೌಂಡರಿ, 2 ಸಿಕ್ಸರ್​ಗಳ ಸಹಿತ 28 ರನ್​ಗಳಿಸಿ ಶಿವಾಂಗ್ ಕುಮಾರ್ ಬೌಲಿಂಗ್​ನಲ್ಲಿ ಇಶಾನ್ ಕಿಶನ್​ಗೆ ಕ್ಯಾಚ್ ನೀಡಿ ಔಟ್ ಆದರು. ಕಳೆದ ಪಂದ್ಯದಲ್ಲಿ ಮಿಂಚಿದ್ದ ಸುರ್ಯಾಂಶ್ ಶೆಡ್ಗೆ  17 ಎಸೆತಗಳಲ್ಲಿ 1 ಬೌಂಡರಿ, 2 ಸಿಕ್ಸರ್ ಸಹಿತ 25 ರನ್​ಗಳಿಸಿ ಪ್ಯಾಟ್ ಕಮಿನ್ಸ್​ಗೆ ವಿಕೆಟ್ ಒಪ್ಪಿಸಿದರು. ಶೆಡ್ಗೆ  5ನೇ ವಿಕೆಟ್ ಜೊತೆಯಾಟದಲ್ಲಿ 47 ರನ್​ಗಳ ಜೊತೆಯಾಟ ನೀಡಿದರು.  ನಂತರ ಬಂದ ಶಶಾಂಕ್ ಸಿಂಗ್ 4, ಮಾರ್ಕೊ ಯಾನ್ಸನ್ 19 ರನ್​ಗಳಿಸಿ ನಿರ್ಗಮಿಸಿದರು.  3ನೇ ಕ್ರಮಾಂಕದಲ್ಲಿ  ಬ್ಯಾಟಿಂಗ್​ಗೆ ಆಗಮಿಸಿದ್ದ ಕೂಪರ್ ಕೊನೊಲಿ 59 ಎಸೆತಗಳಲ್ಲಿ 7 ಬೌಂಡರಿ, 8 ಸಿಕ್ಸರ್​ಗಳ ಸಹಿತ ಅಜೇಯ 107 ರನ್​ಗಳಿಸಿ ಅಜೇಯರಾಗಿ ಉಳಿದುಕೊಂಡರು.

Sulekha