ಡಿಸಿಗೆ ಕೈ ಕೊಟ್ಟ ಆರಂಭಿಕ ದಾಂಡಿಗರು – ಸಿಎಸ್ಕೆಗೆ ಸುಲಭ ಜಯ ತಂದುಕೊಟ್ಟ ಸಂಜು ಸ್ಯಾಮ್ಸನ್

ಡಿಸಿಗೆ ಕೈ ಕೊಟ್ಟ ಆರಂಭಿಕ ದಾಂಡಿಗರು – ಸಿಎಸ್ಕೆಗೆ ಸುಲಭ ಜಯ ತಂದುಕೊಟ್ಟ ಸಂಜು ಸ್ಯಾಮ್ಸನ್

ಡಿಸಿ ಮತ್ತು ಸಿಎಸ್‌ಕೆ ನಡುವಿನ ಮಹತ್ವದ ಪಂದ್ಯದಲ್ಲಿ ಚೆನ್ನೈ ತಂಡ ಗೆದ್ದು ಬೀಗಿದೆ. ಈ ಮೂಲಕ ಪ್ಲೇಆಫ್ ಕನಸನ್ನು ಇನ್ನೂ ಜೀವಂತವಿರಿಸಿಕೊಂಡಿದೆ. ಡಿಸಿ ಮಾತ್ರ ತನ್ನ ತವರಲ್ಲಿ ಮತ್ತೊಮ್ಮೆ ಮುಗ್ಗರಿಸಿದೆ.

ಇದನ್ನೂ ಓದಿ:ಸತತ ಸೋಲು ತಪ್ಪಿಸುತ್ತಾ RCB – LSG ಪಂದ್ಯಕ್ಕಿರೋ ಸವಾಲುಗಳೇನು?

ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 8 ವಿಕೆಟ್​ಗಳ ಗೆಲುವು ಕಂಡಿದೆ. ತವರಿನ ಮೈದಾನದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಅಕ್ಷರ್ ಪಟೇಲ್ ಪಡೆಯ ಆರಂಭಿಕರು ಸಂಪೂರ್ಣ ವಿಫಲರಾದರು. ನಿರ್ಣಾಯಕ ಪಂದ್ಯದಲ್ಲಿ ಮೊದಲ ಐವರು ಬ್ಯಾಟರ್ ಕನಿಷ್ಠ 20 ರನ್​ಗಳಿಸಲಾಗದೇ ವಿಕೆಟ್ ಕೈಚೆಲ್ಲಿದರು. ಪಾತುಮ್ ನಿಸ್ಸಾಂಕ 14 ಎಸೆತಗಳಲ್ಲಿ 19 ರನ್​ಗಳಿಸಿ 4ನೇ ಓವರ್​ನಲ್ಲಿ ಮುಕುಲ್ ಚೌಧರಿಗೆ ವಿಕೆಟ್ ಒಪ್ಪಿಸಿದರು. ನಂತರ ಇನ್​ಫಾರ್ಮ್​ ಬ್ಯಾಟರ್ ಕೆಎಲ್ ರಾಹುಲ್ 13 ಎಸೆತಗಳಲ್ಲಿ ಕೇವಲ 12 ರನ್​ಗಳಿಸಿ ಅಕಿಲ್ ಹೊಸೇನ್ ಬೌಲಿಂಗ್​ನಲ್ಲಿ ಗಾಯಕ್ವಾಡ್​ಗೆ ಕ್ಯಾಚ್ ನೀಡಿ ಔಟ್ ಆದರು. ನಂತರ ಬಂದ ಕರುಣ್ ನಾಯರ್ 13 ಎಸೆತಗಳಲ್ಲಿ 13 ಹಾಗೂ ನಿತೀಶ್ ರಾಣಾ 13 ಎಸೆತಗಳಲ್ಲಿ 15 ರನ್​ಗಳಿಸಿ ನೂರ್ ಅಹ್ಮದ್​ ಬೌಲಿಂಗ್​ನಲ್ಲಿ ವಿಕೆಟ್ ಒಪ್ಪಿಸಿದರು. ನಾಯಕ ಅಕ್ಷರ್ ಪಟೇಲ್ ಕೇವಲ 2 ರನ್​ಗಳಿಗೆ ಗುರ್ಜಪ್ನೀತ್ ಸಿಂಗ್ ಬೌಲಿಂಗ್​​ನಲ್ಲಿ ಅಕಿಲ್ ಹೊಸೇನ್​ಗೆ ಕ್ಯಾಚ್ ನೀಡಿ ಔಟ್​ ಆಗಿ ಮತ್ತೊಮ್ಮೆ ನಿರಾಶೆ ಮೂಡಿಸಿದರು ಒಂದು ಹಂತದಲ್ಲಿ ಡೆಲ್ಲಿ ತಂಡ 69 ರನ್​ಗಳಿಸುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತ್ತು. 120-130 ರನ್​ಗಳಿಸಿದರೆ ಹೆಚ್ಚು ಎನ್ನುವ ಸ್ಥಿತಿ ತಲುಪಿತ್ತು. ಆದರೆ ಟ್ರಿಸ್ಟಾನ್ ಸ್ಟಬ್ಸ್ ಹಾಗೂ ಸಮೀರ್ ರಿಜ್ವಿ 6ನೇ ವಿಕೆಟ್ ಜೊತೆಯಾಟದಲ್ಲಿ 65 ರನ್​ಗಳ ಅದ್ಭುತ ಜೊತೆಯಾಟ ನಡೆಸಿ 155 ರನ್​ಗಳ ಸವಾಲಿನ ಮೊತ್ತ ದಾಖಲಿಸಲು ನೆರವಾದರು. ಟ್ರಿಸ್ಟಾನ್ ಸ್ಟಬ್ಸ್ 31 ಎಸೆತಗಳಲ್ಲಿ 1 ಬೌಂಡರಿ, 2 ಸಿಕ್ಸರ್​ಗಳ ಸಹಿತ ಅಜೇಯ 38 ರನ್​ಗಳಿಸಿದರೆ, ರಿಜ್ವಿ 24 ಎಸೆತಗಳಲ್ಲಿ 4 ಸಿಕ್ಸರ್​ಗಳ ಸಹಿತ ಅಜೇಯ 40 ರನ್​ಗಳಿಸಿ ತಂಡದ ಮೊತ್ತವನ್ನ 150ರ ಗಡಿ ದಾಟಿಸಿದರು. ಅಶುತೋಷ್​ ಶರ್ಮಾ 5 ಎಸೆತಗಳಲ್ಲಿ 2 ಸಿಕ್ಸರ್ಗಳ ಸಹಿತ 14 ರನ್​ಗಳಿಸಿದರು. 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 155 ರನ್​ಗಳ ಸಾಧಾರಣ ಮೊತ್ತ ದಾಖಲಿಸುವಲ್ಲಿ ಡಿಸಿ ತಂಡ ಯಶಸ್ವಿಯಾಯಿತು.

156 ರನ್​ಗಳ ಗುರಿ ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ ಸಂಜು ಸ್ಯಾಮ್ಸನ್ ಅಬ್ಬರದ ಬ್ಯಾಟಿಂಗ್‌ ನೆರವಿನಿಂದ 17.3 ಓವರ್​ಗಳಲ್ಲಿ 2 ವಿಕೆಟ್ ಕಳೆದುಕೊಂಡು ಸುಲಭ ಜಯ ಸಾಧಿಸಿತು. ಸಿಎಸ್​ಕೆ ತಂಡ ಮೊದಲು ನಾಯಕ ರುತುರಾಜ್ ಗಾಯಕ್ವಾಡ್ ವಿಕೆಟ್ ಕಳೆದುಕೊಂಡಿತು. 13 ಎಸೆತಗಳಲ್ಲಿ ಕೇವಲ 6 ರನ್​ಗಳಿಸಿದ್ದ ಗಾಯಕ್ವಾಡ್  4ನೇ ಓವರ್​ನ 5ನೇ ಎಸೆತದಲ್ಲಿ ಲುಂಗಿ ಎನ್​ಗಿಡಿ ಬೌಲಿಂಗ್​ನಲ್ಲಿ ಸಮೀರ್ ರಿಜ್ವಿಗೆ ಕ್ಯಾಚ್ ನೀಡಿ ಔಟ್ ಆದರು. ನಂತರ ಬಂದ ಉರ್ವಿಲ್ ಪಟೇಲ್ ಸ್ಫೋಟಕ ಆಟಕ್ಕೆ ಮುಂದಾಗಿ 9 ಎಸೆತಗಳಲ್ಲಿ 2 ಸಿಕ್ಸರ್​ಗಳ ಸಹಿತ 17 ರನ್​ಗಳಿಸಿ ಅಕ್ಷರ್ ಪಟೇಲ್ ಬೌಲಿಂಗ್​​ನಲ್ಲಿ ಸ್ಟಂಪ್ ಔಟ್ ಆದರು. ಆದರೆ 3ನೇ ವಿಕೆಟ್‌ಗೆ ಒಂದುಗೂಡಿದ ಸಂಜು ಸ್ಯಾಮ್ಸನ್ ಹಾಗೂ ಕಾರ್ತಿಕ್ ಶರ್ಮಾ 114 ರನ್​ಗಳ ಜೊತೆಯಾಟ ನಡೆಸಿ ತಂಡವನ್ನ ಇನ್ನೂ  ಎಸೆತಗಳಿರುವಂತೆ ಗೆಲುವಿನ ಗಡಿ ದಾಟಿಸಿದರು. ಆರಂಭಿಕನಾಗಿ ಬಂದು ಕೊನೆಯವರೆಗೂ ಆಡಿದ ಸಂಜು ಸ್ಯಾಮ್ಸನ್ 52 ಎಸೆತಗಳಲ್ಲಿ 7 ಬೌಂಡರಿ, 6 ಸಿಕ್ಸರ್​ಗಳ ಸಹಿತ ಅಜೇಯ 87 ರನ್​ಗಳಿಸಿದರೆ, ಕಾರ್ತಿಕ್ ಶರ್ಮಾ 31 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್​ಗಳ ಸಹಿತ ಅಜೇಯ 41 ರನ್​ಗಳಿಸಿ ತಂಡವನ್ನ ಗೆಲುವಿನ ಗಡಿ ದಾಟಿಸಿದರು.

Sulekha