ಮುಂಬೈ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಓಕೆ – ಸೂರ್ಯ, ತಿಲಕ್ ಯಾಕೆ? – ಮುಂಬೈ ಮ್ಯಾನೇಜ್ಮೆಂಟ್ ಖಡಕ್ ಎಚ್ಚರಿಕೆ

ಐದು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿರುವ ಮುಂಬೈ ಇಂಡಿಯನ್ಸ್ ತಂಡದ ಈಗಿನ ಸ್ಥಿತಿ ನೋಡಿದರೆ ಫ್ಯಾನ್ಸ್ ಅಯ್ಯೋ ಅನ್ನುತ್ತಿದ್ದಾರೆ. ಅದರಲ್ಲೂ ಈ ಸೀಸನ್ನಲ್ಲಿ ಮುಂಬೈ ತಂಡದ ಪ್ರದರ್ಶನ ಅಷ್ಟಕಷ್ಟೇ. ಇದಕ್ಕೆಲ್ಲಾ ಹಾರ್ದಿಕ್ ಪಾಂಡ್ಯ ನಾಯಕತ್ವ ಕಾರಣ ಅಂತಾ ಕೆಲವು ದೂರಿದರೆ, ಮುಂಬೈ ಮ್ಯಾನೇಜ್ಮೆಂಟ್ ಇಬ್ಬರು ಆಟಗಾರರ ಮೇಲೆ ಕಿಡಿಕಾರಿದೆ.
ಇದನ್ನೂ ಓದಿ:ಸತತ ಸೋಲು ತಪ್ಪಿಸುತ್ತಾ RCB – LSG ಪಂದ್ಯಕ್ಕಿರೋ ಸವಾಲುಗಳೇನು?
ಸ್ಟಾರ್ ಆಟಗಾರರ ದಂಡೇ ಇದೆ. ಅರ್ಧ ಟೀಮ್ ಇಂಡಿಯಾ ಆಟಗಾರರೇ ತುಂಬಿದ್ದಾರೆ. ಆದರೂ ಕೂಡಾ ಮುಂಬೈ ಇಂಡಿಯನ್ಸ್ ಐಪಿಎಲ್ನ ಈ ಸೀಸನ್ನಲ್ಲಿ ಕಳಪೆ ಪ್ರದರ್ಶನ ತೋರುತ್ತಿದೆ. ಇದಕ್ಕೆ ಕಾರಣ ಹಾರ್ದಿಕ್ ಪಾಂಡ್ಯ ಅವರ ನಾಯಕತ್ವ ಎಂಬ ಮಾತು ಕೂಡಾ ಕೇಳಿಬರುತ್ತಿದೆ. ಚಾಂಪಿಯನ್ ಪಟ್ಟಕ್ಕೇರುವ ನೆಚ್ಚಿನ ತಂಡವಾಗಿ ಕಣಕ್ಕಿಳಿದಿದ್ದ ಮುಂಬೈ, ಈ ಸೀಸನ್ನಲ್ಲಿ ಆಡಿರುವ 10 ಪಂದ್ಯಗಳಲ್ಲಿ ಕೇವಲ 3 ಜಯ ದಾಖಲಿಸಿದೆ. ಇಷ್ಟಾದರೂ ಮುಂಬೈ ಮ್ಯಾನೇಜ್ಮೆಂಟ್ ಮಾತ್ರ ಹಾರ್ದಿಕ್ ಪಾಂಡ್ಯ ಅವರ ಮೇಲೆ ನಂಬಿಕೆಯಿಟ್ಟಿದೆ. ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ ಕಳಪೆ ಪ್ರದರ್ಶನ ನೀಡುತ್ತಿದ್ದರೂ, ಅವರನ್ನು ಬದಲಿಸುವ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಅಲ್ಲದೆ ಪಾಂಡ್ಯ ಅವರನ್ನೇ ನಾಯಕನಾಗಿ ಮುಂದುವರಿಸಲು ಎಂಐ ಮ್ಯಾನೇಜ್ಮೆಂಟ್ ನಿರ್ಧರಿಸಿದೆ.
ಹಾರ್ದಿಕ್ ಪಾಂಡ್ಯ ಅವರ ವೈಯಕ್ತಿಕ ಪ್ರದರ್ಶನ ಮತ್ತು ನಾಯಕತ್ವದ ನಿರ್ಧಾರಗಳು ಟೀಕೆಗೆ ಗುರಿಯಾಗಿದ್ದರೂ, ಫ್ರಾಂಚೈಸಿಯು ಈ ಹಂತದಲ್ಲಿ ನಾಯಕತ್ವ ಬದಲಾವಣೆಗೆ ಮುಂದಾಗುತ್ತಿಲ್ಲ. ಹಾರ್ದಿಕ್ ಪಾಂಡ್ಯ ಅವರ ಬೆನ್ನುನೋವಿನ ಸಮಸ್ಯೆಯ ನಡುವೆಯೂ ಅವರ ಮೇಲೆಯೇ ಭರವಸೆ ಇಡಲಾಗಿದೆ. ಆದರೆ, ಸ್ಟಾರ್ ಬ್ಯಾಟರ್ಗಳಾದ ಸೂರ್ಯಕುಮಾರ್ ಯಾದವ್ ಮತ್ತು ತಿಲಕ್ ವರ್ಮಾ ಅವರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ. ಈ ಬಾರಿ ನಿರೀಕ್ಷಿತ ಮಟ್ಟದಲ್ಲಿ ರನ್ ಗಳಿಸಲು ವಿಫಲರಾಗಿರುವ ಸೂರ್ಯಕುಮಾರ್ ಅವರಿಗೆ ಮುಂಬೈ ಇಂಡಿಯನ್ಸ್ ಮ್ಯಾನೇಜ್ಮೆಂಟ್ ಕಡೆಯಿಂದ ಎಚ್ಚರಿಕೆ ಸಿಕ್ಕಿದೆ. ಏಕೆಂದರೆ ಈ ಬಾರಿ ಪ್ರತಿ ಪಂದ್ಯದಲ್ಲೂ ಕಣಕ್ಕಿಳಿದಿರುವ ಅವರು ಕೇವಲ 19.50 ರ ಸರಾಸರಿಯಲ್ಲಿ ರನ್ ಗಳಿಸಿದ್ದಾರೆ. ಪಾಂಡ್ಯ ಅನುಪಸ್ಥಿತಿಯಲ್ಲಿ ಅವರು ತಂಡವನ್ನು ಮುನ್ನಡೆಸಿದ್ದರೂ, ಬ್ಯಾಟಿಂಗ್ನಲ್ಲಿ ಲಯ ಕಂಡುಕೊಳ್ಳಲು ಪರದಾಡುತ್ತಿದ್ದಾರೆ.
ಯುವ ಪ್ರತಿಭಾವಂತ ಎಡಗೈ ದಾಂಡಿಗ ತಿಲಕ್ ವರ್ಮಾ ಈ ಬಾರಿ ಮುಂಬೈ ಇಂಡಿಯನ್ಸ್ ಪರ ಶತಕ ಸಿಡಿಸಿದ್ದರು. ಈ ಶತಕದ ಹೊರತಾಗಿಯೂ ಅವರು ಕಳೆದ 10 ಪಂದ್ಯಗಳಿಂದ ಕಲೆಹಾಕಿರುವ ಒಟ್ಟು ಸ್ಕೋರ್ ಕೇವಲ 204 ರನ್ಗಳು. ಹೀಗಾಗಿಯೇ ತಿಲಕ್ ವರ್ಮಾ ಕೂಡ ಮುಂಬೈ ಇಂಡಿಯನ್ಸ್ ಮ್ಯಾನೇಜ್ಮೆಂಟ್ನ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇತ್ತ ಪ್ಲೇಯಿಂಗ್ ಇಲೆವೆನ್ನ ಖಾಯಂ ಸದಸ್ಯರಾಗಿರುವ ಸೂರ್ಯಕುಮಾರ್ ಯಾದವ್ ಹಾಗೂ ತಿಲಕ್ ವರ್ಮಾರ ಕಳಪೆ ಪ್ರದರ್ಶನವು ಮುಂಬೈ ಇಂಡಿಯನ್ಸ್ ಪಾಲಿಗೆ ಹೊರೆಯಾಗಿ ಮಾರ್ಪಟ್ಟಿದೆ. ಹೀಗಾಗಿಯೇ ಇದೀಗ ಇಬ್ಬರು ಆಟಗಾರರಿಗೆ ಎಚ್ಚರಿಕೆ ನೀಡಲಾಗಿದೆ.

ನೋಡಿರಿ

