ಪ್ರತೀಕಾರದ ಪಂದ್ಯದಲ್ಲಿ ಚೆನ್ನೈ, ಡಿಸಿ ಮುಖಾಮುಖಿ – ಡೆಲ್ಲಿ ಪರ ಕಣಕ್ಕಿಳಿಯಲಿದ್ದಾರೆ ಲುಂಗಿ ಎನ್‌ಗಿಡಿ

ಪ್ರತೀಕಾರದ ಪಂದ್ಯದಲ್ಲಿ ಚೆನ್ನೈ, ಡಿಸಿ ಮುಖಾಮುಖಿ – ಡೆಲ್ಲಿ ಪರ ಕಣಕ್ಕಿಳಿಯಲಿದ್ದಾರೆ ಲುಂಗಿ ಎನ್‌ಗಿಡಿ

ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಡುವಿನ ಮುಖಾಮುಖಿಗೆ ಕ್ಷಣಗಣನೆ ಶುರುವಾಗಿದೆ. ಇದೀಗ ಡಿಸಿ ತಂಡಕ್ಕೆ ಗುಡ್‌ನ್ಯೂಸ್ ಸಿಕ್ಕಿದೆ. ವೇಗದ ಬೌಲರ್ ಲುಂಗಿ ಎನ್‌ಗಿಡಿ ಸಂಪೂರ್ಣ ಫಿಟ್ ಆಗಿ ತಂಡಕ್ಕೆ ಮರಳಿದ್ದಾರೆ.

ಇದನ್ನೂ ಓದಿ:CSK ಪರ ತಲಾ ಆಡೋದೇ ಇಲ್ವಾ? – ದೆಹಲಿ ವಿರುದ್ಧದ ಪಂದ್ಯದಲ್ಲೂ ಧೋನಿ OUT

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಪ್ರತೀಕಾರದ ಪಂದ್ಯವಾಡಲಿದೆ. ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಉಭಯ ತಂಡಗಳ ನಡುವೆ ಸೆಣಸಾಟ ನಡೆಯಲಿದೆ. ಡೆಲ್ಲಿ ತಂಡ ಪ್ಲೇಆಫ್ ಪ್ರವೇಶ ಮಾಡಬೇಕೆಂದರೆ ಈ ಪಂದ್ಯವನ್ನು ಗೆಲ್ಲಲೇಬೇಕಿದೆ. ಈ ನಿರ್ಣಾಯಕ ಪಂದ್ಯಕ್ಕೂ ಮುನ್ನ, ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಗುಡ್‌ನ್ಯೂಸ್ ಸಿಕ್ಕಿದೆ. ಪ್ರಮುಖ ವೇಗದ ಬೌಲರ್ ಲುಂಗಿ ಎನ್‌ಗಿಡಿ ಸಂಪೂರ್ಣ ಫಿಟ್‌ನೆಸ್ ಪಡೆದುಕೊಂಡಿದ್ದಾರೆ. ಸಿಎಸ್‌ಕೆ ವಿರುದ್ಧ ಪಂದ್ಯಕ್ಕೆ ಲುಂಗಿ ಎನ್‌ಗಿಡಿ ಆಡುವ ಬಗ್ಗೆ ಡೆಲ್ಲಿ ಬೌಲಿಂಗ್ ಕೋಚ್ ಮುನಾಫ್ ಪಟೇಲ್ ದೃಢಪಡಿಸಿದ್ದಾರೆ.

ಏಪ್ರಿಲ್ 25 ರಂದು ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಪ್ರಿಯಾಂಶ್ ಆರ್ಯ ಕ್ಯಾಚ್ ಹಿಡಿಯಲು ಪ್ರಯತ್ನಿಸುವಾಗ ಎನ್‌ಗಿಡಿ ಗಂಭೀರವಾಗಿ ಗಾಯಗೊಂಡರು. ನಂತರ ಅವರನ್ನು ತಕ್ಷಣವೇ ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ಯಬೇಕಾಯಿತು. ಚಿಕಿತ್ಸೆಯ ಸಮಯದಲ್ಲಿ ಎನ್‌ಗಿಡಿಗೆ ಯಾವುದೇ ಗಂಭೀರ ಗಾಯಗಳಾಗಿಲ್ಲ ಎಂದು ತಿಳಿದುಬಂದಿತ್ತು. ಹೀಗಾಗಿ ಅವರನ್ನು ಶೀಘ್ರದಲ್ಲೇ ಆಸ್ಪತ್ರೆಯಿಂದ ಡಿಸಾರ್ಜ್ ಮಾಡಲಾಯಿತು. ಡಿಸಾರ್ಜ್ ಬಳಿಕ ವೈದ್ಯರು ಎನ್‌ಗಿಡಿಗೆ ಕೆಲವು ದಿನಗಳ ವಿಶ್ರಾಂತಿ ಪಡೆಯಲು ಸಲಹೆ ನೀಡಿದರು. ಇದರಿಂದಾಗಿ, ಅವರು ಕಳೆದ ಎರಡು ಪಂದ್ಯಗಳಲ್ಲಿ ಡೆಲ್ಲಿಯ ಆಡುವ ಹನ್ನೊಂದರ ಬಳಗದ ಭಾಗವಾಗಿರಲಿಲ್ಲ. ಈಗ ಚೆನ್ನೈ ವಿರುದ್ಧದ ಪಂದ್ಯಕ್ಕೂ ಮುನ್ನ ಮುನಾಫ್ ಪಟೇಲ್ ಅವರು ಎನ್‌ಗಿಡಿ ಆಡುವ ಬಗ್ಗೆ ಮಾಹಿತಿ ನೀಡಿದ್ದಾರೆ. ಎನ್‌ಗಿಡಿ ಕನ್ಕ್ಯುಶನ್ ಪ್ರೋಟೋಕಾಲ್ ಅಡಿಯಲ್ಲಿ ಆರು ದಿನಗಳ ವಿಶ್ರಾಂತಿ ಅವಧಿಯನ್ನು ಪೂರ್ಣಗೊಳಿಸಿದ್ದಾರೆ.

Sulekha