ವಾಣಿಜ್ಯ ಸಿಲಿಂಡರ್‌ ಬೆಲೆ ಏರಿಕೆ ಎಫೆಕ್ಟ್!‌ – ಸಿಲಿಕಾನ್‌ ಸಿಟಿ ಹೋಟೆಲ್‌ಗಳಲ್ಲಿ ಊಟ, ತಿಂಡಿ ದರ ಹೆಚ್ಚಳ!

ವಾಣಿಜ್ಯ ಸಿಲಿಂಡರ್‌ ಬೆಲೆ ಏರಿಕೆ ಎಫೆಕ್ಟ್!‌ – ಸಿಲಿಕಾನ್‌ ಸಿಟಿ ಹೋಟೆಲ್‌ಗಳಲ್ಲಿ ಊಟ, ತಿಂಡಿ ದರ ಹೆಚ್ಚಳ!

ಇದು ದುಬಾರಿ ದುನಿಯಾ. ಅಗತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಇದೀಗ ಮಧ್ಯಪ್ರಾಚ್ಯ ಯುದ್ದದ ಎಫೆಕ್ಟ್‌ನಿಂದಾಗಿ ತೈಲ ಮಾರುಕಟ್ಟೆಯಲ್ಲಿನ ಏರಿಳಿತದಿಂದಾಗಿ ಎಲ್‌ಪಿಜಿ ಸಿಲಿಂಡರ್ ಸರಿಯಾದ ಪ್ರಮಾಣದಲ್ಲಿ ಪೂರೈಕೆಯಾಗುತ್ತಿಲ್ಲ. ಹೀಗಾಗಿ ವಾಣಿಜ್ಯ ಸಿಲಿಂಡರ್‌ ದರದಲ್ಲಿ ಭಾರಿ ಏರಿಕೆಯಾಗಿದೆ. ಈ ಬೆನ್ನಲ್ಲೇ ಹೊಟೆಲ್‌ ಮಾಲೀಕರು ಬೆಲೆ ಏರಿಕೆ ಮಾಡಲು ಮುಂದಾಗಿದ್ದಾರೆ. ಬೆಂಗಳೂರಿನ ಹೋಟೆಲ್‌ಗಳಲ್ಲಿ ಊಟ ತಿಂಡಿ ದರ ಹೆಚ್ಚಳವಾಗಿದೆ.

ಇದನ್ನೂ ಓದಿ: 17 ಮಂದಿ ಪ್ರಯಾಣಿಸುತ್ತಿದ್ದ ಪಲ್ಲಕ್ಕಿ ಬಸ್‌ನಲ್ಲಿ ಅಗ್ನಿ ಅವಘಡ – ಬೆಂಕಿ ಕೆನ್ನಾಲಿಗೆ ಕೆಎಸ್‌ಆರ್‌ಟಿಸಿ ಬಸ್‌ ಸುಟ್ಟು ಭಸ್ಮ!  

ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 993 ರೂ. ಏರಿಕೆಯಾಗಿದ್ದು, 19 ಕೆಜಿ ತೂಕದ ಸಿಲಿಂಡರ್ ದರ ಈಗ 3,154 ರೂ. ತಲುಪಿದೆ. ಇದರ ನೇರ ಪರಿಣಾಮ ಹೋಟೆಲ್ ಆಹಾರ ಪದಾರ್ಥಗಳ ಮೇಲೆ ಬೀರಿದೆ. ಇಂಧನ ಬೆಲೆಯ ಈ ಬೃಹತ್ ಏರಿಕೆಯಿಂದ ಕಂಗಾಲಾಗಿರುವ ಹೋಟೆಲ್ ಮಾಲೀಕರು, ಅನಿವಾರ್ಯವಾಗಿ ತಿಂಡಿ, ಊಟ ಹಾಗೂ ಕಾಫಿ-ಟೀ ದರಗಳನ್ನು ಶೇ. 20ರಷ್ಟು ಹೆಚ್ಚಿಸಲು ಮುಂದಾಗಿದ್ದಾರೆ.

ಈಗಾಗಲೇ ಬೆಂಗಳೂರಿನ ಗಾಂಧಿನಗರದ ಪ್ರಮುಖ ಹೋಟೆಲ್‌ಗಳಲ್ಲಿ ಒಂದಾದ ‘ರಸಪಾಕ’ದಲ್ಲಿ ಈಗಾಗಲೇ ದರ ಏರಿಕೆ ಜಾರಿಗೆ ಬಂದಿದೆ. ಊಟದ ಬೆಲೆ 100 ರೂ. ನಿಂದ 120 ರೂ. ಗೆ ಏರಿಕೆ ಮಾಡಲಾಗಿದೆ. ದೋಸೆ ಬೆಲೆ 75 ರೂ. ನಿಂದ 85 ರೂ, ಪೂರಿ ಬೆಲೆ 60 ರೂ. ನಿಂದ 75 ರೂ., ಟೀ ಬೆಲೆ 20 ರೂ. ನಿಂದ 25 ರೂಪಾಯಿಗೆ ಏರಿಕೆ ಮಾಡಲಾಗಿದೆ.

ಊಟ, ತಿಂಡಿ ದರ ಏರಿಕೆ ಮಾಡಿವ ಬಗ್ಗೆ ಪ್ರತಿಕ್ರಿಯಿಸಿರುವ ಬೆಂಗಳೂರು ನಗರ ಹೋಟೆಲ್ ಮಾಲೀಕರ ಸಂಘದ ಗೌರವಾಧ್ಯಕ್ಷ ಪಿ.ಸಿ. ರಾವ್, ಬೆಲೆ ಏರಿಕೆ ಮಾಡುವುದು ಆಯಾ ಹೋಟೆಲ್ ಮಾಲೀಕರಿಗೆ ಬಿಟ್ಟ ವಿಚಾರ ಎಂದು ತಿಳಿಸಿದ್ದಾರೆ.

ಒಟ್ಟಿನಲ್ಲಿ ಯುದ್ಧದ ಎಫೆಕ್ಟ್ ಈಗ ಬೆಂಗಳೂರಿಗರ ತಟ್ಟೆಯ ಮೇಲೆ ಪ್ರಭಾವ ಬೀರಿದೆ. ಇದೀಗ ಕೆಲಸದ ನಿಮಿತ್ತ ಹೊರಗಡೆ ಬಂದಾಗ ಹೋಟೆಲ್ ಆಹಾರವೇ ನಮಗೆ ಆಧಾರ. ಹೀಗೆ ಪದೇ ಪದೇ ಬೆಲೆ ಏರಿಸುತ್ತಿದ್ದರೆ ಸಾಮಾನ್ಯ ಗ್ರಾಹಕರ ಜೇಬಿಗೆ ದೊಡ್ಡ ಕತ್ತರಿ ಬೀಳಲಿದೆ ಎಂದು ಗ್ರಾಹಕರು ಬೇಸರ ವ್ಯಕ್ತಪಡಿಸಿದ್ದಾರೆ.

Shwetha M