ಸ್ಟಾಲಿನ್ ಗೆ ಸೋಲು.. ಸಚಿವರಿಗೂ ಮಣ್ಣು ಮುಕ್ಕಿಸಿದ ಮತದಾರರು – ತಮಿಳುನಾಡಿನಲ್ಲಿ ದಳಪತಿ ವಿಜಯ್ ದರ್ಬಾರ್!

ಸ್ಟಾಲಿನ್ ಗೆ ಸೋಲು.. ಸಚಿವರಿಗೂ ಮಣ್ಣು ಮುಕ್ಕಿಸಿದ ಮತದಾರರು – ತಮಿಳುನಾಡಿನಲ್ಲಿ ದಳಪತಿ ವಿಜಯ್ ದರ್ಬಾರ್!

ಪಂಚರಾಜ್ಯ ಚುನಾವಣೆ ಫಲಿತಾಂಶ ಹೊರಬಿದ್ದ ಮೇಲೆ ಅತೀ ಹೆಚ್ಚು ಕುತೂಹಲ ಮೂಡಿಸಿರೋ ರಾಜ್ಯ ಅಂದ್ರೆ ಅದು ತಮಿಳುನಾಡು. ಸಿನಿಮಾಗಳಲ್ಲಿ ಹೀರೋ ಆಗಿ ಜನಮನ ಗೆದ್ದಿದ್ದ ನಟ ವಿಜಯ್ ದಳಪತಿ ಎಂಟ್ರಿಗೆ ತಮಿಳುನಾಡಿನ ರಾಜಕೀಯ ಲೆಕ್ಕಾಚಾರಗಳೇ ಬುಡಮೇಲಾಗಿವೆ. ಹಾಲಿ ಸಿಎಂ ಸ್ಟಾಲಿನ್ ಕೂಡ ಸೋತು ಸುಣ್ಣವಾಗಿದ್ದಾರೆ. ಸಚಿವರು ಕೂಡ ಮತದಾರರ ಎದುರು ಮಂಡಿಯೂರಿದ್ದಾರೆ.

ಇದನ್ನೂ ಓದಿ : ತಮಿಳುನಾಡಿನಲ್ಲಿ ವಿಜಯ ಪರ್ವ – ಕಾಲಿವುಡ್ ನಟರಿಂದ ವಿಜಯ್ ದಳಪತಿಗೆ ಶುಭಾಶಯ

ತಮಿಳುನಾಡಿನಲ್ಲಿ ಈಗ ಪರ್ವಕಾಲ. ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷವು ಅತಿ ದೊಡ್ಡ ರಾಜಕೀಯ ಪಕ್ಷವಾಗಿ ಹೊರ ಹೊಮ್ಮಿದೆ. ಇದು ತಮಿಳುನಾಡಿನ ರಾಜಕೀಯದಲ್ಲಿ ಹೊಸ ಅಧ್ಯಾಯಕ್ಕೆ ದಾರಿಯಾಗಿದೆ. ಮೊದಲ ಬಾರಿಗೆ ಚುನಾವಣೆಗೆ ಕಣಕ್ಕಿಳಿದಿರುವ ಈ ಪಕ್ಷದ ಸಾಧನೆ ರಾಷ್ಟ್ರ ಮಟ್ಟದಲ್ಲಿ ಸಂಚಲನ ಮೂಡಿಸಿದೆ. ದ್ರಾವಿಡ ರಾಜಕೀಯದ ಎರಡು ಪ್ರಮುಖ ಪಕ್ಷಗಳಾದ ಡಿಎಂಕೆ ಮತ್ತು ಎಐಎಡಿಎಂಕೆ ದೀರ್ಘಕಾಲ ಆಡಳಿತ ನಡೆಸಿದರೂ, ಆಡಳಿತ ವಿರೋಧಿ ಅಲೆ ಎದ್ದಿತ್ತು. ಪರಿಣಾಮ ಟಿವಿಕೆ ಪಕ್ಷಕ್ಕೆ ಲಾಭವಾಗಿದೆ. 234 ವಿಧಾನಸಭಾ ಕ್ಷೇತ್ರಗಳಿರುವ ತಮಿಳುನಾಡಿನಲ್ಲಿ 118 ಸ್ಥಾನಗಳು ಸ್ಪಷ್ಟ ಬಹುಮತಕ್ಕೆ ಇರುವಂಥ ಮ್ಯಾಜಿಕ್ ನಂಬರ್. ಆದರೆ ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ಸಿಗದಿದ್ರೂ ಟಿವಿಕೆ ಪಕ್ಷ ಹತ್ತಿರದಲ್ಲೇ ಇದೆ.  ಯಾವುದೇ ಪಕ್ಷ 118 ಸ್ಥಾನಗಳನ್ನು ಪಡೆಯದಿದ್ದರೆ, ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಪಕ್ಷವು ರಾಜ್ಯಪಾಲರಿಂದ ಸರ್ಕಾರ ರಚಿಸುವ ಹಕ್ಕನ್ನು ಪಡೆಯಬಹುದು. ರಾಜ್ಯಪಾಲರು ಏಕೈಕ ಅತಿದೊಡ್ಡ ಪಕ್ಷವನ್ನು ಸರ್ಕಾರ ರಚಿಸಲು ಆಹ್ವಾನಿಸುತ್ತಾರೆ. ಅದರ ಆಧಾರದ ಮೇಲೆ, ಸರ್ಕಾರ ರಚಿಸಿದ ನಂತರ, ಆ ಪಕ್ಷವು ಕನಿಷ್ಠ 15 ದಿನಗಳಲ್ಲಿ ಅಥವಾ ರಾಜ್ಯಪಾಲರು ನಿರ್ಧರಿಸಿದ ಅವಧಿಯೊಳಗೆ ತನ್ನ ಬಹುಮತವನ್ನು ಸಾಬೀತುಪಡಿಸಬೇಕು. ಒಂದು ವೇಳೆ ಬಹುಮತ ಸಾಬೀತುಪಡಿಸಲು ವಿಫಲವಾದರೆ, ರಾಜ್ಯಪಾಲರು ಸರ್ಕಾರವನ್ನು ಉರುಳಿಸಿ ಮುಂದಿನ ಎರಡನೇ ದೊಡ್ಡ ಪಕ್ಷವನ್ನು ಸರ್ಕಾರ ರಚಿಸಲು ಆಹ್ವಾನಿಸುತ್ತಾರೆ. ಆ ಪಕ್ಷವು ತನ್ನ ಬಹುಮತವನ್ನು ಸಾಬೀತುಪಡಿಸಿದರೆ, ಅದು ಸರ್ಕಾರ ರಚಿಸಬಹುದು. ಯಾವುದೇ ಪಕ್ಷವು ಸರ್ಕಾರ ರಚಿಸಲು ಸಾಧ್ಯವಾಗದ ಪರಿಸ್ಥಿತಿ ಎದುರಾದರೆ, ಸಂವಿಧಾನದ 356 ನೇ ವಿಧಿಯ ಅಡಿಯಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ವಿಧಿಸಲಾಗುತ್ತದೆ. ನಂತರ, ಮರು ಚುನಾವಣೆ ನಡೆಯಲಿದೆ.

ತಮಿಳುನಾಡು ಮೊದಲಿನಿಂದಲೂ ಚಿತ್ರನಟರಿಗೆ ಮಣೆ ಹಾಕುತ್ತಲೇ ಬಂದಿರುವ ರಾಜ್ಯ. ಎಂ.ಜಿ.ಆರ್ ಮತ್ತು ಜಯಲಲಿತಾ ಅವರ ನಂತರ ಸಿನಿಮಾ ರಂಗದಿಂದ ಬಂದು ಇಷ್ಟು ದೊಡ್ಡ ಮಟ್ಟದ ಯಶಸ್ಸು ಕಂಡ ನಟ ಎಂಬ ಹೆಗ್ಗಳಿಕೆಗೆ ವಿಜಯ್ ಪಾತ್ರರಾಗಿದ್ದಾರೆ. ಹಿರಿಯ ಸ್ಟಾರ್ ಹಾಗೂ ಜನಪ್ರಿಯ ನಟ ಕಮಲಹಾಸನ್ ಅವರು ಕೆಲ ವರ್ಷಗಳಿಂದ ರಾಜಕೀಯ ಮಾಡುತ್ತಿದ್ದಾರಾದರೂ ಅವರಿಗೆ ಸಿಕ್ಕ ಯಶಸ್ಸು ಸೀಮಿತ. ಕ್ಯಾಪ್ಟನ್ ವಿಜಯಕಾಂತ್ ಅವರಿಗೂ ಸಿಕ್ಕ ಯಶಸ್ಸು ಅಷ್ಟಕಷ್ಟೇ. ಸೂಪರ್ ಸ್ಟಾರ್ ರಜನೀಕಾಂತ್ ಅವರೂ ರಾಜಕೀಯಕ್ಕೆ ಅಡಿ ಇಡುವ ಆಲೋಚನೆಯಲ್ಲಿ ಇದ್ದರಾದರೂ ಅದು ಸಾಧ್ಯವಾಗಲಿಲ್ಲ. ಹೀಗಾಗಿ, ದಳಪತಿ ವಿಜಯ್ ಅವರ ಆರಂಭದ ಹೆಜ್ಜೆಯಲ್ಲೇ ಯಶಸ್ಸು ಸಿಕ್ಕಿದೆ.

ಇನ್ನು ಹಾಲಿ ಸಿಎಂ ಡಿಎಂಕೆ ನಾಯಕ ಎಂಕೆ ಸ್ಟ್ಯಾಲಿನ್ ತಮ್ಮ ಭದ್ರಕೋಟೆ ಕೊಳತ್ತೂರಿನಲ್ಲಿ ಸ್ಪರ್ಧಿಸಿರುವ ಎಂಕೆ ಸ್ಟ್ಯಾಲಿನ್, ಟಿವಿಕೆ ಅಭ್ಯರ್ಥಿ ವಿಎಸ್ ಬಾಬು ವಿರುದ್ಧ ಹೀನಾಯವಾಗಿ ಸೋತಿದ್ದಾರೆ. ಸಿಎಂ ಎಂಕೆ ಸ್ಟ್ಯಾಲಿನ್ ವಿರುದ್ಧ ವಿಎಸ್ ಬಾಬು 8 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಮುಖ್ಯಮಂತ್ರಿಯನ್ನು ಸೋಲಿಸಿದ ವಿಎಸ್ ಬಾಬು ಡಿಎಂಕೆ ಮಾಜಿ ನಾಯಕನಾಗಿದ್ದು, ಇತ್ತೀಚೆಗಷ್ಟೇ ಟಿವಿಕೆ ಸೇರ್ಪಡೆಯಾಗಿದ್ದರು. ಇದಷ್ಟೇ ಅಲ್ಲದೇ ಸಿಎಂ ಎಂಕೆ ಸ್ಟ್ಯಾಲಿನ್ ಸೇರಿದಂತೆ 14 ಡಿಎಂಕೆ ಸಚಿವರು ತಾವು ಸ್ಪರ್ಧಿಸಿದ್ದ ಕ್ಷೇತ್ರಗಳಲ್ಲಿ ತೀವ್ರ ಹಿನ್ನಡೆ ಎದುರಿಸಿದ್ದಾರೆ.

Shantha Kumari