ಮೋದಿ, ಅಮಿತ್ ಶಾ ರಣತಂತ್ರಕ್ಕೆ ದೀದಿ ಕೋಟೆ ಛಿದ್ರ – ಪಶ್ಚಿಮ ಬಂಗಾಳದಲ್ಲಿ ಇನ್ನೇನಿದ್ರೂ ಬಿಜೆಪಿಯದ್ದೇ ರಾಜ್ಯಭಾರ!

ಮೋದಿ, ಅಮಿತ್ ಶಾ ರಣತಂತ್ರಕ್ಕೆ ದೀದಿ ಕೋಟೆ ಛಿದ್ರ – ಪಶ್ಚಿಮ ಬಂಗಾಳದಲ್ಲಿ ಇನ್ನೇನಿದ್ರೂ ಬಿಜೆಪಿಯದ್ದೇ ರಾಜ್ಯಭಾರ!

ಪಶ್ಚಿಮ ಬಂಗಾಳ. ಮಮತಾ ಬ್ಯಾನರ್ಜಿಯವರ ಭದ್ರಕೋಟೆ. ಕಳೆದ 15 ವರ್ಷಗಳಿಂದ ಬಂಗಾಳದ ಮಹಾರಾಣಿಯಾಗಿ ಮೆರೆದ ದೀದಿಗೆ ಈ ಸಲ ಗರ್ವಭಂಗವಾಗಿದೆ. ಬಿಜೆಪಿಯ ಅಲೆಯಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷ ಕೊಚ್ಚಿ ಹೋಗಿದೆ. ಶೇ 93ರಷ್ಟು ದಾಖಲೆ ಮತದಾನ ಕಂಡಿದ್ದ ಪಶ್ಚಿಮ ಬಂಗಾಳದಲ್ಲಿ ಕಮಲ ನಳನಳಿಸಿದೆ. ಪ್ರಧಾನಿ ಮೋದಿಯವರ ಮಾತಿನ ಬಾಣಗಳು ಹಾಗೇ ಅಮಿತ್ ಶಾ ಅವ್ರ ಚಾಣಕ್ಯನ ತಂತ್ರಗಳು ಫಲ ಕೊಟ್ಟಿದೆ. ಇತಿಹಾಸದ ಪುಟದಲ್ಲಿ ದಾಖಲಾಗುವಂಥ ಫಲಿತಾಂಶ ಹೊರಬಿದ್ದಿದ್ದು ರಾಷ್ಟ್ರಮಟ್ಟದಲ್ಲೇ ಇದು ಅತಿದೊಡ್ಡ ಬದಲಾವಣೆಗೆ ಮುನ್ನುಡಿ ಬರೆದಿದೆ.

ಇದನ್ನೂ ಓದಿ : ಮುಂಬೈ ಮತ್ತು ಲಕ್ನೋ ಮಧ್ಯೆ ಮಾಡು ಇಲ್ಲವೆ ಮಡಿ ಪಂದ್ಯ – ಸೋತವರು ಟೂರ್ನಿಯಿಂದಲೇ ಔಟ್

ಅಸ್ಸಾಂ, ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು ಮತ್ತು ಪುದುಚೇರಿ ಸೇರಿ ಒಟ್ಟು ಐದು ರಾಜ್ಯಗಳ ಚುನಾವಣಾ ಫಲಿತಾಂಶದಲ್ಲಿ ಅಬ್ಬರಿಗಳೇ ತುಂಬಿದೆ. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪಕ್ಷ ಆಡಳಿತ ವಿರೋಧಿ ಅಲೆಯಲ್ಲಿ ಮಕಾಡೆ ಮಲಗಿದೆ. 100ರ ಗಡಿಯನ್ನೂ ದಾಟದೆ ಮುಖಭಂಗ ಅನುಭವಿಸಿದೆ. ಆದರೆ  ವಿರೋಧ ಪಕ್ಷ ಬಿಜೆಪಿ ಇದೇ ಮೊದಲ ಬಾರಿಗೆ ದಾಖಲೆಯ ಮಟ್ಟದಲ್ಲಿ ಗೆದ್ದು ಅಧಿಕಾರದ ಗದ್ದುಗೆ ಏರೋದು ಕನ್ಫರ್ಮ್ ಆಗಿದೆ. ಕಾಂಗ್ರೆಸ್ ಪಕ್ಷ ಮಾತ್ರ ಇದ್ದೂ ಇಲ್ಲದಂತಾಗಿದೆ. 294 ಸಂಖ್ಯಾಬಲವಿರುವ ಪಶ್ಚಿಮ ಬಂಗಾಳ ವಿಧಾನಸಭೆಗೆ 148 ಮ್ಯಾಜಿಕ್ ನಂಬರ್. ಆಡಳಿತಾರೂಢ ಟಿಎಂಸಿ ಈ ರಾಜ್ಯದಲ್ಲಿ ಮ್ಯಾಜಿಕ್ ನಂಬರ್ ಹತ್ತಿರಕ್ಕೂ ಬಂದಿಲ್ಲ. ಆದ್ರೆ ಬಿಜೆಪಿ ಮ್ಯಾಜಿಕ್ ನಂಬರ್ ಗಳನ್ನೂ ಮೀರಿ ಮುನ್ನಡೆ ಸಾಧಿಸಿರೋದ್ರಿಂದ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತವಾಗಿದೆ.

ಬಿಜೆಪಿಯಿಂದ ಮುಖ್ಯಮಂತ್ರಿಯಾಗ್ತಾರಾ ಸುವೆಂದು ಅಧಿಕಾರಿ?

ಪಶ್ಚಿಮ ಬಂಗಾಳದಲ್ಲಿ ದೀದಿ ಕೋಟೆಯನ್ನ ಛಿದ್ರ ಮಾಡಿರುವ ಬಿಜೆಪಿಯಲ್ಲಿ ಈಗ ಮುಂದಿನ ಮುಖ್ಯಮಂತ್ರಿ ಯಾರು ಅನ್ನೋ ಚರ್ಚೆ ಜೋರಾಗಿದೆ. ಈ ರೇಸ್ ನಲ್ಲಿ ಸುವೆಂದು ಅಧಿಕಾರಿ ಮುಂಚೂಣಿಯಲ್ಲಿದ್ದಾರೆ. ಒಂದು ಕಾಲದಲ್ಲಿ ಮಮತಾ ಬ್ಯಾನರ್ಜಿಯ ಬಲಗೈ ಬಂಟನಂತಿದ್ದ ಸುವೆಂದು ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಟಿಎಂಸಿಗೆ ಗುಡ್‌ಬೈ ಹೇಳಿ ಬಿಜೆಪಿಗೆ ಬಂದಿದ್ದು ಇತಿಹಾಸ. ಹಾಲಿ ನಂದಿಗ್ರಾಮದ ಶಾಸಕರಾಗಿದ್ದ ಅವರು ವಿಧಾನಸಭೆಯ ಪ್ರತಿಪಕ್ಷದ ನಾಯಕರಾಗಿ ಟಿಎಂಸಿ ವಿರುದ್ಧ ಹೋರಾಟ ನಡೆಸಿ ಬಂಗಾಳದಲ್ಲಿ ಕಮಲ ಅರಳಲು ಅತಿದೊಡ್ಡ ಪಾತ್ರ ವಹಿಸಿದ್ರು. 2007ರ ನಂದಿಗ್ರಾಮ ಹೋರಾಟದಲ್ಲಿ ಅಂದು ಮಮತಾ ಬ್ಯಾನರ್ಜಿ ಪರವಾಗಿ ನಿಂತು ರಾಜ್ಯದಲ್ಲಿ ಕಮ್ಯೂನಿಸ್ಟ್‌ ಸರ್ಕಾರವನ್ನು ಕೆಡವಿ ಮೊದಲ ಬಾರಿಗೆ ಟಿಎಂಸಿ ಅಧಿಕಾರಕ್ಕೆ ಬರುವಲ್ಲಿ ಇವರ ಪಾತ್ರ ಬಹಳ ದೊಡ್ಡದಿತ್ತು. ಆದರೆ ಪಕ್ಷದಲ್ಲಿ ತಮ ಸಹೋದರ ಸಂಬಂಧಿ ಅಭಿಷೇಕ್‌ ಬ್ಯಾನರ್ಜಿಗೆ ಬರಬರುತ್ತಾ ಹೆಚ್ಚಿನ ಮನ್ನಣೆ ದೊರೆತ್ತಿದ್ದರಿಂದ ಸುವೆಂದು ಅಧಿಕಾರಿ ಬಿಜೆಪಿಯತ್ತ ಮುಖ ಮಾಡಿದರು. 2021 ರ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ವಿರುದ್ಧ ನಂದಿಗ್ರಾಮದಲ್ಲಿ ಸ್ಪರ್ಧಿಸಿ ಸೋಲಿನ ರುಚಿ ತೋರಿಸಿದ್ದರು. 5 ವರ್ಷಗಳ ಕಾಲ ವಿರೋಧಪಕ್ಷದ ನಾಯಕರಾಗಿದ್ದ ಅವರು ಸಹಜವಾಗಿ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯಾಗಿದ್ದಾರೆ.

Shantha Kumari