ಬೇಸಿಗೆಗಾಲ ಎಂದು ಅತಿಯಾಗಿ ಕಲ್ಲಂಗಡಿ ಹಣ್ಣು ಸೇವಿಸುತ್ತೀರಾ? – ಈ ಸಮಸ್ಯೆ ನಿಮ್ಮನ್ನು ಕಾಡಬಹುದು!

ಬೇಸಿಗೆಗಾಲ ಎಂದು ಅತಿಯಾಗಿ ಕಲ್ಲಂಗಡಿ ಹಣ್ಣು ಸೇವಿಸುತ್ತೀರಾ? – ಈ ಸಮಸ್ಯೆ ನಿಮ್ಮನ್ನು ಕಾಡಬಹುದು!

ಬೇಸಿಗೆ ಕಾಲ ಬಂತು. ಹೊರಗಡೆ ಬಿಸಿಲು ಹೆಚ್ಚಾಗಿದೆ. ಈ ಬಿಸಿಲಿನಿಂದ ಆರಾಮ ಪಡೆಯಲು ಎಲ್ಲರೂ ಮಾಡುವುದು ಕಲ್ಲಂಗಡಿ ಹಣ್ಣು ತಿನ್ನುವುದು. ರುಚಿಗೆ ಸಿಹಿಯಾಗಿ ಇರುವುದರಿಂದ, ಕಡಿಮೆ ಬೆಲೆಯಲ್ಲಿ ಸಿಗುವುದರಿಂದ ಇದನ್ನು ಹೆಚ್ಚಾಗಿ ಕೊಂಡುಕೊಳ್ಳುತ್ತಾರೆ. ನಿಜವಾಗಿ ಬೇಸಿಗೆಯಲ್ಲಿ ಕಲ್ಲಂಗಡಿ ತಿನ್ನುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ನಮ್ಮ ದೇಹವನ್ನು ತಂಪಾಗಿ ಇಡುವುದರ ಜೊತೆಗೆ ಹೈಡ್ರೇಟೆಡ್ ಆಗಿ ಇಡಲು ಸಹಾಯ ಮಾಡುತ್ತದೆ. ಏಕೆಂದರೆ ಇದರಲ್ಲಿ 92% ನೀರು ಇರುತ್ತದೆ. ಆದ್ರೆ ಊಟ ಮಾಡಿದ ನಂತರ ಕಲ್ಲಂಗಡಿ ತಿನ್ನಬಹುದಾ ಅನ್ನೋ ಗೊಂದಲ ಅನೇಕರಲ್ಲಿದೆ.

ಇದನ್ನೂ ಓದಿ: ಪ್ಲಾಸ್ಟಿಕ್‌ ಬಾಟಲ್‌ನಲ್ಲಿ ಮಗುವಿಗೆ ಹಾಲು ಕುಡಿಸುತ್ತೀರಾ? – ಎಚ್ಚರ.. ಈ ಸಮಸ್ಯೆ ಕಾಡಬಹುದು!

ಕಲ್ಲಂಗಡಿಯಲ್ಲಿ ಬಹಳಷ್ಟು ಪೋಷಕಾಂಶಗಳು ಕೂಡ ಇವೆ. ಇದರಲ್ಲಿ ವಿಟಮಿನ್ ಎ, ಬಿ6, ಸಿ, ಬಿ1, ಬಿ5, ಬಿ9 ಇವೆ. ಇವು ಕಣ್ಣಿನ ದೃಷ್ಟಿ, ರೋಗನಿರೋಧಕ ಶಕ್ತಿ, ಜೀರ್ಣಕ್ರಿಯೆ, ಮೆದುಳಿನ ಬೆಳವಣಿಗೆ, ಚರ್ಮದ ಆರೋಗ್ಯಕ್ಕೆ ಸಹಾಯ ಮಾಡುತ್ತವೆ. ಜೀರ್ಣಕ್ರಿಯೆಯನ್ನು ಉತ್ತಮಗೊಳಿಸಲು ಸಹಾಯ ಮಾಡುತ್ತವೆ. ಕಲ್ಲಂಗಡಿಯಲ್ಲಿ ಫೈಬರ್ ಕೂಡ ಹೆಚ್ಚಾಗಿರುತ್ತದೆ. ತೂಕ ಇಳಿಸಿಕೊಳ್ಳಬೇಕು ಅಂದುಕೊಳ್ಳುವವರಿಗೆ ಇದು ಒಳ್ಳೆಯ ಆಯ್ಕೆ. ಇದರಿಂದ ಬಹಳಷ್ಟು ಲಾಭಗಳಿದ್ದರೂ ಕೆಲವೊಮ್ಮೆ ಅನಾರೋಗ್ಯ ಕೂಡ ಉಂಟಾಗುವ ಸಾಧ್ಯತೆ ಇದೆ. ಈ ಹೊತ್ತಿನಲ್ಲಿ ಕಲ್ಲಂಗಡಿ ತಿನ್ನುವುದು ಡೇಂಜರ್‌ ಎಂದು ತಜ್ಞರು ಎಚ್ಚರಿಸಿದ್ದಾರೆ.

ಊಟ ಮಾಡಿದ ತಕ್ಷಣ ಕಲ್ಲಂಗಡಿ ಹಣ್ಣನ್ನು ತಿನ್ನುವುದು ಜೀರ್ಣಕ್ರಿಯೆಗೆ ಸಂಬಂಧಿಸಿದ ಹಲವಾರು ಸಮಸ್ಯೆಗಳನ್ನು ಉಂಟುಮಾಡಬಹುದು. ಆಯುರ್ವೇದದ ಪ್ರಕಾರ, ಕೆಲವು ಆಹಾರಗಳನ್ನು ಕಲ್ಲಂಗಡಿಯೊಂದಿಗೆ ಸೇರಿಸುವುದು ದೇಹದಲ್ಲಿ ವಿಷಕಾರಿ ಅಂಶಗಳನ್ನು ಉತ್ಪತ್ತಿ ಮಾಡುವ ಸಾಧ್ಯತೆ ಇರುತ್ತದೆ.

ಕಲ್ಲಂಗಡಿ ಹಣ್ಣು ಹೊಟ್ಟೆಯಲ್ಲಿ ತುಂಬಾ ಬೇಗ (ಸುಮಾರು 20-30೦ ನಿಮಿಷದಲ್ಲಿ) ಜೀರ್ಣವಾಗುತ್ತದೆ. ಆದರೆ ನಾವು ತಿಂದ ಊಟ (ಅನ್ನ, ರೊಟ್ಟಿ) ಜೀರ್ಣವಾಗಲು 2-3 ಗಂಟೆ ಬೇಕು. ಊಟದ ನಂತರ ಹಣ್ಣು ತಿಂದರೆ ಅದು ಊಟದ ಜೊತೆ ಸಿಕ್ಕಿಕೊಳ್ಳುತ್ತದೆ. ಇದರಿಂದ ಹೊಟ್ಟೆ ಉಬ್ಬರ ಮತ್ತು ಗ್ಯಾಸ್ ಉಂಟಾಗುತ್ತದೆ.

ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣು ದೇಹಕ್ಕೆ ತಂಪು ನೀಡುತ್ತದೆ. ಆದರೆ ನಾವು ಊಟ ಮಾಡಿದಾಗ ಆಹಾರವನ್ನು ಜೀರ್ಣಿಸಲು ನಮ್ಮ ಹೊಟ್ಟೆಯಲ್ಲಿ ಜಠರಾಗ್ನಿ (ಉಷ್ಣತೆ) ಹೆಚ್ಚಾಗಿರುತ್ತದೆ. ತಕ್ಷಣ ತಣ್ಣಗಿನ ಕಲ್ಲಂಗಡಿ ತಿಂದರೆ ಆ ಜೀರ್ಣ ಪ್ರಕ್ರಿಯೆ ನಿಧಾನವಾಗಿ ಅಜೀರ್ಣವಾಗುತ್ತದೆ. ಊಟದ ಜೊತೆಗೆ ಅಥವಾ ತಕ್ಷಣ ಕಲ್ಲಂಗಡಿ ತಿಂದರೆ ದೇಹವು ಆಹಾರದಲ್ಲಿನ ಪೋಷಕಾಂಶಗಳನ್ನು ಸರಿಯಾಗಿ ಹೀರಿಕೊಳ್ಳಲು ಸಾಧ್ಯವಾಗುವುದಿಲ್ಲ. ಕಲ್ಲಂಗಡಿ ತಿಂದ ತಕ್ಷಣ ಹಾಲು ಕುಡಿಯುವುದು ಅಥವಾ ಮೊಸರು ತಿನ್ನುವುದು ಜೀರ್ಣಕ್ರಿಯೆಗೆ ವಿರುದ್ಧವಾಗಿರುತ್ತದೆ.  ಸರಳವಾಗಿ ಹೇಳುವುದಾದರೆ ಊಟದ ನಂತರ ಕಲ್ಲಂಗಡಿ ತಿಂದರೆ ಅದು ದೇಹಕ್ಕೆ ಪೋಷಕಾಂಶ ಕೊಡುವ ಬದಲು ಹೊಟ್ಟೆಯಲ್ಲಿ ಗ್ಯಾಸ್ ಮತ್ತು ವಿಷಕಾರಿ ಅಂಶಗಳನ್ನು ತುಂಬುತ್ತದೆ.

ಅತಿಯಾದ ಸೇವನೆಯಿಂದ ಏನಾಗುತ್ತೆ?

ಕಲ್ಲಂಗಡಿಯಲ್ಲಿ ಅತಿಯಾದ ನೀರಿನಾಂಶವಿರುವುದರಿಂದ, ಊಟದ ನಂತರ ತಿಂದರೆ ಹೊಟ್ಟೆಯಲ್ಲಿರುವ ಜೀರ್ಣರಸಗಳು ತೆಳುವಾಗುತ್ತವೆ. ಇದರಿಂದ ಆಹಾರ ಸರಿಯಾಗಿ ಕರಗುವುದಿಲ್ಲ.

ಕಲ್ಲಂಗಡಿಯಲ್ಲಿರುವ ಸಾರ್ಬಿಟೋಲ್ (Sorbitol) ಮತ್ತು ಫ್ರಕ್ಟೋಸ್ ಅಂಶವು ಕೆಲವರಲ್ಲಿ ಗ್ಯಾಸ್, ಹೊಟ್ಟೆ ಉಬ್ಬರ ಮತ್ತು ಅತಿಸಾರಕ್ಕೆ ಕಾರಣವಾಗಬಹುದು. ಇದರ ಗ್ಲೈಸೆಮಿಕ್ ಇಂಡೆಕ್ಸ್ (GI) ಹೆಚ್ಚಿರುವುದರಿಂದ, ಮಧುಮೇಹ ಇರುವವರು ಅತಿಯಾಗಿ ಸೇವಿಸಿದರೆ ರಕ್ತದಲ್ಲಿ ಸಕ್ಕರೆ ಮಟ್ಟ ತಕ್ಷಣ ಏರಬಹುದು.

ಯಾವಾಗ ತಿನ್ನಬೇಕು?

ಊಟಕ್ಕೆ ಮುಂಚೆ: ಊಟಕ್ಕಿಂತ ಸುಮಾರು ಒಂದು ಗಂಟೆ ಮೊದಲು ಅಥವಾ ಖಾಲಿ ಹೊಟ್ಟೆಯಲ್ಲಿ ಕಲ್ಲಂಗಡಿ ತಿನ್ನುವುದು ಜೀರ್ಣಾಂಗ ವ್ಯವಸ್ಥೆಯನ್ನು ಸಿದ್ಧಪಡಿಸಲು ಸಹಾಯ ಮಾಡುತ್ತದೆ.

ರಾತ್ರಿ ಊಟದ ನಂತರ ಕಲ್ಲಂಗಡಿ ತಿಂದರೆ ಅದರಲ್ಲಿರುವ ಅಧಿಕ ನೀರಿನಾಂಶದಿಂದಾಗಿ ಪದೇ ಪದೇ ಮೂತ್ರ ವಿಸರ್ಜನೆ ಮಾಡಬೇಕಾಗಬಹುದು. ಇದರಿಂದ ನಿದ್ರೆಗೆ ತೊಂದರೆಯಾಗುತ್ತದೆ. ಅಲ್ಲದೆ ರಾತ್ರಿಯ ಜೀರ್ಣಕ್ರಿಯೆ ನಿಧಾನವಾಗಿರುವುದರಿಂದ ತೂಕ ಹೆಚ್ಚಾಗುವ ಸಾಧ್ಯತೆಯೂ ಇರುತ್ತದೆ.

ನೀರು ಯಾಕೆ ಕುಡಿಯಬಾರದು?

ಕಲ್ಲಂಗಡಿ ಹಣ್ಣನ್ನು ತಿಂದ ತಕ್ಷಣ ನೀರು ಕುಡಿಯುವುದು ಜೀರ್ಣಾಂಗ ವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಕಲ್ಲಂಗಡಿಯಲ್ಲಿ ಈಗಾಗಲೇ 92% ನೀರು ಇರುತ್ತದೆ. ಇದರ ಮೇಲೆ ಮತ್ತೆ ನೀರು ಕುಡಿದರೆ ಹೊಟ್ಟೆಯಲ್ಲಿರುವ ಜೀರ್ಣರಸಗಳು (Enzymes) ಮತ್ತು ಆಮ್ಲಗಳು ತುಂಬಾ ತೆಳುವಾಗುತ್ತವೆ. ಇದರಿಂದ ನೀವು ತಿಂದ ಹಣ್ಣು ಸರಿಯಾಗಿ ಜೀರ್ಣವಾಗದೇ ಹೊಟ್ಟೆಯಲ್ಲಿ ಅಸ್ವಸ್ಥತೆ ಉಂಟಾಗುತ್ತದೆ. ಈ ಕಾರಣಕ್ಕೆ ಕಲ್ಲಂಗಡಿ ತಿಂದ ನಂತರ ಕನಿಷ್ಠ 30 ರಿಂದ 45 ನಿಮಿಷಗಳ ಕಾಲ ನೀರು ಕುಡಿಯುವುದನ್ನು ತಪ್ಪಿಸಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ

ಫ್ರಿಡ್ಜ್‌ನಲ್ಲಿ ಇಡಬಹುದೇ?

ಫ್ರಿಡ್ಜ್‌ನಲ್ಲಿ ಇಟ್ಟರೆ ಇದು ಸುಮಾರು 1 ರಿಂದ 2 ವಾರಗಳ ಕಾಲ ತಾಜಾವಾಗಿರುತ್ತದೆ. ಆದರೆ ಇಡೀ ಹಣ್ಣನ್ನು ಫ್ರಿಡ್ಜ್‌ನಲ್ಲಿ ಇಡುವುದಕ್ಕಿಂತ ಸಾಮಾನ್ಯ ತಾಪಮಾನದಲ್ಲಿ ಇಡುವುದು ಉತ್ತಮ, ಏಕೆಂದರೆ ತಣ್ಣಗಾದಾಗ ಅದರಲ್ಲಿರುವ ಪೋಷಕಾಂಶಗಳು ಕಡಿಮೆಯಾಗುತ್ತದೆ. ಹಣ್ಣನ್ನು ಅರ್ಧಕ್ಕೆ ಕತ್ತರಿಸಿದ್ದರೆ, ಅದರ ಕೆಂಪು ಭಾಗಕ್ಕೆ ಪ್ಲಾಸ್ಟಿಕ್ ಪೇಪರ್ ಸುತ್ತಿ ಇಟ್ಟರೆ2 ರಿಂದ 3 ದಿನ ಬಾಳಿಕೆ ಬರುತ್ತದೆ. ಕತ್ತರಿಸಿದ ಹಣ್ಣನ್ನು ಹೆಚ್ಚು ದಿನ ಇಟ್ಟರೆ ಅದರ ಗರಿಗರಿತನ ಹೋಗಿ ಮೆತ್ತಗಾಗುತ್ತದೆ ಮತ್ತು ರುಚಿ ಬದಲಾಗಿ ಸಪ್ಪೆಯಾಗುತ್ತದೆ.

Shwetha M