ಮದವೇರಿದ ಆನೆ ಅಟ್ಟಹಾಸಕ್ಕೆ ಓರ್ವ ಬಲಿ, ಮಾವುತನಿಗೆ ಗಂಭೀರ ಗಾಯ! – ರಣರಂಗವಾಯ್ತು ದೇವಸ್ಥಾನದ ಆವರಣ!

ಕೇರಳದ ದೇವಸ್ಥಾನವೊಂದರಲ್ಲಿ ಮದವೇರಿದ ಆನೆ ಅಟ್ಟಹಾಸ ಮೆರೆದಿದೆ. ಆನೆಯ ತುಳಿತಕ್ಕೆ ಲಾರಿ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಲವರು ಗಾಯಗೊಂಡಿದ್ದು, ಮಾವುತನ ಸ್ಥಿತಿ ಗಂಭೀರವಾಗಿದೆ.
ಇದನ್ನೂ ಓದಿ: ಪತ್ನಿಗೆ ಹಲವರ ಜೊತೆ ಅನೈತಿಕ ಸಂಬಂಧ! – 19 ಪುಟ ಡೆತ್ನೋಟ್ ಬರೆದಿಟ್ಟು ಟೆಕ್ಕಿ ಆತ್ಮಹತ್ಯೆ
ಎರ್ನಾಕುಳಂ ಜಿಲ್ಲೆಯ ಅಂಕಮಾಲಿಯ ಕಿದಂಗೂರ್ ಮಹಾವಿಷ್ಣು ದೇವಸ್ಥಾನದ ಆವರಣದಲ್ಲಿ ಈ ಘಟನೆ ನಡೆದಿದೆ. ಅಕ್ಕಪಕ್ಕದ ದೇವಸ್ಥಾನಗಳ ಉತ್ಸವದಲ್ಲಿ ಪಾಲ್ಗೊಳ್ಳಲು ಮಯ್ಯನಾಡ್ ಪಾರ್ಥಸಾರಥಿ ಹೆಸರಿನ ಆನೆಯನ್ನು ಕರೆತರಲಾಗಿತ್ತು. ಇಂದು ಬೆಳಿಗ್ಗೆ ಸುಮಾರು 9:30ರ ಸುಮಾರಿಗೆ ಆನೆಯನ್ನು ಸ್ನಾನ ಮಾಡಿಸಲು ಕಿದಂಗೂರ್ ದೇವಸ್ಥಾನಕ್ಕೆ ಕರೆತಂದಾಗ, ಇದ್ದಕ್ಕಿದ್ದಂತೆ ಆನೆಗೆ ಮದವೇರಿ ಗಲಾಟೆ ಮಾಡಲು ಆರಂಭಿಸಿದೆ.
ಆನೆಯನ್ನು ಲಾರಿಯಲ್ಲಿ ಕರೆತಂದಿದ್ದ ಕೊಲ್ಲಂ ನಿವಾಸಿ ವಿಷ್ಣು ಎಂಬುವವರು ಆನೆಯನ್ನು ಶಾಂತಗೊಳಿಸಲು ಪ್ರಯತ್ನಿಸುತ್ತಿದ್ದಾಗ ಆನೆ ಅವರ ಮೇಲೆರಗಿ ತುಳಿದು ಸಾಯಿಸಿದೆ. ಆನೆಯ ಎರಡನೇ ಮಾವುತ ಪ್ರದೀಪ್ ಅವರಿಗೂ ತೀವ್ರ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ಅಂಕಮಾಲಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಇನ್ನು ಆನೆ ದೇವಸ್ಥಾನದ ಆವರಣದಲ್ಲಿದ್ದ ಕಾರು ಮತ್ತು ದ್ವಿಚಕ್ರ ವಾಹನಗಳನ್ನು ಪುಡಿಪುಡಿ ಮಾಡಿದೆ. ಆನೆಯ ಆಕ್ರೋಶ ಕಂಡು ಭಕ್ತರು ಹಾಗೂ ಸ್ಥಳೀಯರು ಪ್ರಾಣಭಯದಿಂದ ಚಲ್ಲಾಪಿಲ್ಲಿಯಾಗಿ ಓಡಿದ್ದಾರೆ. ಈ ವೇಳೆ ಹಲವರು ಗಾಯಗೊಂಡಿದ್ದಾರೆ. ಘಟನಾ ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆಯ ತ್ವರಿತ ಪ್ರತಿಕ್ರಿಯಾ ತಂಡ ಮತ್ತು ಪಶುವೈದ್ಯರು ಸತತ ಕಾರ್ಯಾಚರಣೆ ನಡೆಸಿದರು. ಮಧ್ಯಾಹ್ನ 12:30ರ ಸುಮಾರಿಗೆ ಆನೆಗೆ ಅರಿವಳಿಕೆ ಮದ್ದು ನೀಡುವ ಮೂಲಕ ಕೊನೆಗೂ ಅದನ್ನು ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ.

ನೋಡಿರಿ

