ಆರ್‌ಸಿಬಿ ವಿರುದ್ಧ ಬೆಂಗಳೂರಿನಲ್ಲಿನ ಸೋಲಿನ ಸೇಡ ತೀರಿಸಿಕೊಂಡ GT

ಆರ್‌ಸಿಬಿ ವಿರುದ್ಧ ಬೆಂಗಳೂರಿನಲ್ಲಿನ ಸೋಲಿನ ಸೇಡ ತೀರಿಸಿಕೊಂಡ  GT

ಬೌಲಿಂಗ್‌ ಹಾಗೂ ಬ್ಯಾಟಿಂಗ್‌ ಎರಡೂ ವಿಭಾಗಗಳಲ್ಲಿ ಸಂಘಟಿತ ಪ್ರದರ್ಶನವನ್ನು ತೋರಿದ ಗುಜರಾತ್‌ ಟೈಟನ್ಸ್‌ ತಂಡ, 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ವಿರುದ್ಧ 4 ವಿಕೆಟ್‌ಗಳ ಗೆಲುವು ಪಡೆಯಿತು. ಆ ಮೂಲಕ ಆರ್‌ಸಿಬಿ ವಿರುದ್ಧ ಬೆಂಗಳೂರಿನಲ್ಲಿನ ಸೋಲಿನ ಸೇಡನ್ನು ಜಿಟಿ ತೀರಿಸಿಕೊಂಡಿತು. ಈ ಪಂದ್ಯದ ಸೋಲಿನ ಹೊರತಾಗಿಯೂ ಆರ್‌ಸಿಬಿ ಪಾಯಿಂಟ್ಸ್‌ ಟೇಬಲ್‌ನಲ್ಲಿ ಎರಡನೇ ಸ್ಥಾನದಲ್ಲಿಯೇ ಉಳಿದಿದೆ. ಇನ್ನು ಈ ಗೆಲುವಿನ ಹೊರತಾಗಿಯೂ ಶುಭಮನ್‌ ಗಿಲ್‌ ನಾಯಕತ್ವದ ಗುಜರಾತ್‌ ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿ ಉಳಿಯಿತು.

ಗುರುವಾರ ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಆರ್‌ಸಿಬಿ ನೀಡಿದ್ದ 156 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಗುಜರಾತ್‌ ಟೈಟನ್ಸ್‌ ತಂಡದ ಪರ ಆರಂಭದಲ್ಲಿ ಶುಭಮನ್‌ ಗಿಲ್‌ ಹಾಗೂ ಜೋಸ್‌ ಬಟ್ಲರ್‌ ಅಬ್ಬರಿಸಿದರು. ಸಾಯಿ ಸುದರ್ಶನ್‌ ಬೇಗ ವಿಕೆಟ್‌ ಒಪ್ಪಿಸಿದರೂ ಗಿಲ್‌ 18 ಎಸೆತಗಳಲ್ಲಿ43 ರನ್‌ ಸಿಡಿಸಿದರೆ, ಜೋಸ್‌ ಬಟ್ಲರ್‌ 19 ಎಸೆತಗಳಲ್ಲಿ 39 ರನ್‌ ಸಿಡಿಸಿದರು. ಆ ಮೂಲಕ ಜಿಟಿ ಮೊತ್ತವನ್ನು 100ರ ಸನಿಹ ತಂದಿದ್ದರು. ಆದರೆ, ಭುವನೇಶ್ವರ್‌ ಕುಮಾರ್‌ ಈ ಇಬ್ಬರನ್ನೂ ಔಟ್‌ ಮಾಡುವ ಮೂಲಕ ಆರ್‌ಸಿಬಿಗೆ ಕಮ್‌ಬ್ಯಾಕ್‌ ತಂದುಕೊಟ್ಟರು.

ಇದನ್ನೂ ಓದಿ: ಪ್ಲಾಸ್ಟಿಕ್‌ ಬಾಟಲ್‌ನಲ್ಲಿ ಮಗುವಿಗೆ ಹಾಲು ಕುಡಿಸುತ್ತೀರಾ? – ಎಚ್ಚರ.. ಈ ಸಮಸ್ಯೆ ಕಾಡಬಹುದು!

ನಂತರ ರೊಮ್ಯಾರಿಯೊ ಶೆಫರ್ಡ್‌ ಅವರು ಶಾರುಖ್‌ ಖಾನ್‌ ಹಾಗೂ ವಾಷಿಂಗ್ಟನ್‌ ಸುಂದರ್‌ ಅವರನ್ನು ಔಟ್‌ ಮಾಡಿ ಎದುರಾಳಿ ತಂಡದ ಮೇಲೆ ಒತ್ತಡ ಹಾಕಿದರು. ಆದರೆ, ರಾಹುಲ್‌ ತೇವಾಟಿಯಾ 27* ರನ್‌ ಗಳಿಸುವ ಮೂಲಕ 15.5 ಓವರ್‌ಗಳಿಗೆ 6 ವಿಕೆಟ್‌ ನಷ್ಟಕ್ಕೆ 158 ರನ್‌ ಗಳಿಸಿ ಗುಜರಾತ್‌ ಟೈಟನ್ಸ್‌ ತಂಡವನ್ನು ಗೆಲ್ಲಿಸಿದರು. ಜೇಸನ್‌ ಹೋಲ್ಡರ್‌ 12 ರನ್‌ ಹಾಗೂ ರಶೀದ್‌ ಖಾನ್‌ ಕೊನೆಯಲ್ಲಿ 7 ರನ್‌ ಗಳಿಸಿದರು. ಆರ್‌ಸಿಬಿ ಪರ ಭುವನೇಶ್ವರ್‌ ಕುಮಾರ್‌ ಮೂರು ವಿಕೆಟ್‌ ಹಾಗೂ ರೊಮ್ಯಾರಿಯೊ ಶೆಫರ್ಡ್‌ ಎರಡು ವಿಕೆಟ್‌ ಕಿತ್ತರು.

Kishor KV