ಕೈಲಾಸ ಯಾತ್ರೆಗೆ ನೋಂದಣಿ ಆರಂಭ – 60 ವರ್ಷಗಳ ಬಳಿಕ ಸಂಭವಿಸಲಿದೆ ದೈವಿಕ ಸಂಯೋಗ!

ಕೈಲಾಸ ಯಾತ್ರೆಗೆ ನೋಂದಣಿ ಆರಂಭ – 60 ವರ್ಷಗಳ ಬಳಿಕ ಸಂಭವಿಸಲಿದೆ ದೈವಿಕ ಸಂಯೋಗ!

ಕೈಲಾಸ ಪರ್ವತವು ಶಿವನ ವಾಸಸ್ಥಾನವಾಗಿದ್ದು, ಅದನ್ನು ಪ್ರದಕ್ಷಿಣೆ ಹಾಕಿ ಮಾನಸ ಸರೋವರದಲ್ಲಿ ಸ್ನಾನ ಮಾಡುವುದರಿಂದ ಮೋಕ್ಷ ಸಿಗುತ್ತದೆ ಎಂಬ ನಂಬಿಕೆ ಹಿಂದೂಗಳಲ್ಲಿದೆ. ಉತ್ತರಾಖಂಡದ ಪಿಥೋರಗಢ ಜಿಲ್ಲೆಯಲ್ಲಿ 17,000 ಅಡಿ ಎತ್ತರದಲ್ಲಿರುವ ಕೈಲಾಸ ಮಾನಸ ಸರೋವರಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ಇದೀಗ ಕೈಲಾಸ ಯಾತ್ರೆಗೆ ತೆರಳಲು ಪ್ಲ್ಯಾನ್‌ ಮಾಡಿದ್ದವರಿಗೆ ಗುಡ್‌ನ್ಯೂಸ್‌ ಸಿಕ್ಕಿದೆ. 2026ರ ಸಾಲಿನ ಕೈಲಾಸ ಮಾನಸ ಸರೋವರ ಯಾತ್ರೆಗೆ ಅಧಿಕೃತವಾಗಿ ನೋಂದಣಿ ಪ್ರಕ್ರಿಯೆ ಆರಂಭವಾಗಲಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಸದ್ಯಕ್ಕೆ ಸಿಎಂ ಬದಲಾವಣೆ ಇಲ್ಲ! – ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

ಶಿವನ ವಾಸಸ್ಥಾನವೆಂದೇ ನಂಬಲಾದ ಪವಿತ್ರ ಕೈಲಾಸ ಪರ್ವತದ ದರ್ಶನ ಪಡೆಯಲು ಬಯಸುವ ಭಕ್ತರಿಗೆ ಒಂದು ಮಹತ್ವದ ಸುದ್ದಿ ಇಲ್ಲಿದೆ. ಈ ವರ್ಷದ ಯಾತ್ರೆಯು ಕೇವಲ ಧಾರ್ಮಿಕ ಪ್ರಯಾಣವಷ್ಟೇ ಅಲ್ಲದೆ, ಜ್ಯೋತಿಷ್ಯ ಶಾಸ್ತ್ರದ ದೃಷ್ಟಿಯಿಂದಲೂ ಅತ್ಯಂತ ವಿಶೇಷವೆನಿಸಿದೆ. ಇದೀಗ ಯಾತ್ರೆ ಕೈಗೊಳ್ಳಲು ಅಧಿಕೃತವಾಗಿ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ.

ಈ ಬಾರಿಯ ಯಾತ್ರೆಯು 60 ವರ್ಷಗಳಿಗೊಮ್ಮೆ ಬರುವ ಅಪರೂಪದ ಟಿಬೆಟಿಯನ್ ಮತ್ತು ಹಿಮಾಲಯನ್ ಜ್ಯೋತಿಷ್ಯದ ಸಂಯೋಜನೆಯಲ್ಲಿ ನಡೆಯುತ್ತಿದೆ. ಇದನ್ನು ‘ಅಗ್ನಿ ಕುದುರೆ ವರ್ಷ’ ಎಂದು ಕರೆಯಲಾಗುತ್ತಿದ್ದು, ಈ ಅವಧಿಯಲ್ಲಿ ಕೈಲಾಸ ದರ್ಶನ ಮಾಡುವುದು ಹಿಂದೂ, ಜೈನ ಮತ್ತು ಬೌದ್ಧ ಧರ್ಮಗಳಲ್ಲಿ ‘ಮೋಕ್ಷದ ಬಾಗಿಲು’ ತೆರೆದಂತೆ ಎಂದು ನಂಬಲಾಗಿದೆ. ಈ ದೈವಿಕ ಸಂಯೋಗದ ಕಾರಣದಿಂದಾಗಿ ಈ ವರ್ಷ ಭಾರತ ಮಾತ್ರವಲ್ಲದೆ ಪ್ರಪಂಚದಾದ್ಯಂತದ ಯಾತ್ರಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.

ಯಾತ್ರೆಯ ಪ್ರಮುಖ ವಿವರಗಳು

ಯಾತ್ರೆಯ ಮೊದಲ ಬ್ಯಾಚ್ ಜೂನ್ ಮೊದಲ ವಾರದಲ್ಲಿ ಹೊರಡಲಿದೆ. ಈ ಬಾರಿ ಉತ್ತರಾಖಂಡ ಮಾರ್ಗದ ಮೂಲಕ 500 ಯಾತ್ರಿಕರಿಗೆ ಅವಕಾಶ ಕಲ್ಪಿಸಲು ಸರ್ಕಾರ ಯೋಜಿಸಿದೆ. ಹಿಮಾಲಯದ ಕಠಿಣ ಹವಾಮಾನವನ್ನು ಗಮನದಲ್ಲಿಟ್ಟುಕೊಂಡು ವಿದೇಶಾಂಗ ಸಚಿವಾಲಯವು (MEA) ಭಕ್ತರ ಸುರಕ್ಷತೆಗೆ ವಿಶೇಷ ಆದ್ಯತೆ ನೀಡಿದೆ.

ಯಾತ್ರೆಗೆ ಇರುವ ಎರಡು ಪ್ರಮುಖ ಮಾರ್ಗಗಳು

ವಿದೇಶಾಂಗ ಸಚಿವಾಲಯವು ಪ್ರತಿ ವರ್ಷ ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಎರಡು ವಿಭಿನ್ನ ಮಾರ್ಗಗಳ ಮೂಲಕ ಯಾತ್ರೆಯನ್ನು ಆಯೋಜಿಸುತ್ತದೆ:

ಲಿಪುಲೇಖ್ ಪಾಸ್ (ಉತ್ತರಾಖಂಡ): ಇದು ಅತ್ಯಂತ ಜನಪ್ರಿಯ ಮಾರ್ಗವಾಗಿದೆ. ದೆಹಲಿಯಿಂದ ಪ್ರಾರಂಭವಾಗಿ ತನಕ್‌ಪುರ, ಪಿಥೋರಗಢ ಮತ್ತು ಧಾರ್ಚುಲಾ ಮೂಲಕ ಲಿಪುಲೇಖ್ ಪಾಸ್ ತಲುಪುತ್ತದೆ. ಈ ಮಾರ್ಗವು ಈಗ ವಾಹನ ಸಂಚಾರಕ್ಕೆ ಹೆಚ್ಚು ಅನುಕೂಲಕರವಾಗಿದ್ದು, ಕೈಲಾಸ ಪರ್ವತದ ಪವಿತ್ರ ಪ್ರದಕ್ಷಿಣೆಯನ್ನು ಒಳಗೊಂಡಿದೆ.

ನಾಥು ಲಾ ಪಾಸ್ (ಸಿಕ್ಕಿಂ): ಈ ಮಾರ್ಗವು ದೆಹಲಿಯಿಂದ ಗ್ಯಾಂಗ್ಟಾಕ್ ಮೂಲಕ ಸಾಗುತ್ತದೆ. ಲಿಪುಲೇಖ್ ಮಾರ್ಗಕ್ಕೆ ಹೋಲಿಸಿದರೆ ಇಲ್ಲಿ ಪಾದಯಾತ್ರೆ (Trekking) ಕಡಿಮೆ ಮತ್ತು ಪ್ರಯಾಣ ಹೆಚ್ಚು ಆರಾಮದಾಯಕವಾಗಿರುತ್ತದೆ.

ಅರ್ಹತೆ ಮತ್ತು ಅಗತ್ಯ ದಾಖಲೆಗಳು

ಯಾತ್ರೆಯಲ್ಲಿ ಭಾಗವಹಿಸಲು ಆಸಕ್ತಿ ಇರುವವರು ಈ ಕೆಳಗಿನ ಸಿದ್ಧತೆಗಳನ್ನು ಮಾಡಿಕೊಳ್ಳುವುದು ಕಡ್ಡಾಯ:

ವಿದೇಶಾಂಗ ಸಚಿವಾಲಯದ (MEA) ಅಧಿಕೃತ ಪೋರ್ಟಲ್ ಮೂಲಕ ಆನ್‌ಲೈನ್ ಅರ್ಜಿ ಸಲ್ಲಿಸಬೇಕು.

ಮಾನ್ಯತೆ ಇರುವ ಭಾರತೀಯ ಪಾಸ್‌ಪೋರ್ಟ್ ಅಥವಾ OCI ಕಾರ್ಡ್ ಮತ್ತು ಸರ್ಕಾರಿ ಗುರುತಿನ ಚೀಟಿ.

ಹೆಚ್ಚಿನ ಎತ್ತರದಲ್ಲಿ ಪ್ರಯಾಣಿಸಬೇಕಿರುವುದರಿಂದ ನವೀಕರಿಸಿದ ವೈದ್ಯಕೀಯ ಫಿಟ್‌ನೆಸ್ ಪ್ರಮಾಣಪತ್ರ ಅತ್ಯಗತ್ಯ.

ಯಾತ್ರಾರ್ಥಿಗಳಿಗೆ ಪ್ರಮುಖ ಸೂಚನೆಗಳು

ಕೈಲಾಸ ಮಾನಸ ಸರೋವರವು ಸಮುದ್ರ ಮಟ್ಟದಿಂದ ಅತೀ ಎತ್ತರದಲ್ಲಿರುವುದರಿಂದ ಆಮ್ಲಜನಕದ ಮಟ್ಟ ಕಡಿಮೆ ಇರುತ್ತದೆ. ಹೀಗಾಗಿ, ಪ್ರಯಾಣಕ್ಕೆ ಕೆಲವು ದಿನಗಳ ಮೊದಲು ದೇಹವನ್ನು ಅಲ್ಲಿನ ವಾತಾವರಣಕ್ಕೆ ಒಗ್ಗಿಸಿಕೊಳ್ಳುವುದು (Acclimatization) ಬಹಳ ಮುಖ್ಯ. ಸಾಮಾನ್ಯವಾಗಿ ಈ ಇಡೀ ಯಾತ್ರೆಯು ಪೂರ್ಣಗೊಳ್ಳಲು ಹವಾಮಾನಕ್ಕೆ ಅನುಗುಣವಾಗಿ 15 ರಿಂದ 20 ದಿನಗಳು ಬೇಕಾಗುತ್ತವೆ.

Shwetha M