ಎಷ್ಟೇ ಪೂಜೆ ಮಾಡಿದ್ರೂ ಫಲ ಸಿಗುತ್ತಿಲ್ಲವಾ? – ದೇವರಿಗೆ ಬೇಕಿರುವುದು ನಿಮ್ಮ ಸಮಯವಲ್ಲ, ನಿಮ್ಮ ನಿಷ್ಕಲ್ಮಶ ಮನಸ್ಸು

ಎಷ್ಟೇ ಪೂಜೆ ಮಾಡಿದ್ರೂ ಫಲ ಸಿಗುತ್ತಿಲ್ಲವಾ? – ದೇವರಿಗೆ ಬೇಕಿರುವುದು ನಿಮ್ಮ ಸಮಯವಲ್ಲ, ನಿಮ್ಮ ನಿಷ್ಕಲ್ಮಶ ಮನಸ್ಸು

ದೇವರಿಗೆ ಪೂಜೆ ಮಾಡುವುದು ಕೇವಲ ಒಂದು ಕ್ರಿಯೆಯಲ್ಲ, ಅದೊಂದು ಶಕ್ತಿ. ಆ ಶಕ್ತಿ ಲಭಿಸಬೇಕಾದರೆ ತಿಳಿಯದೆ ಮಾಡುವ ಕೆಲವು ಸಣ್ಣ ತಪ್ಪುಗಳನ್ನು ತಿದ್ದಿಕೊಳ್ಳಬೇಕಾಗುತ್ತದೆ.  ದೀಪ ಹಚ್ಚುವಾಗ ಮನಸ್ಸು ಹಣದ ಸಮಸ್ಯೆ ಅಥವಾ ಆಫೀಸ್ ಕೆಲಸದ ಮೇಲೆ ಇರುತ್ತದೆ. ಮಂತ್ರ ಪಠಿಸುವಾಗ ಗಮನ ಫೋನ್ ನೋಟಿಫಿಕೇಶನ್ ಮೇಲಿರುತ್ತದೆ. ದೇಹ ದೇವಾಲಯದಲ್ಲಿದ್ದು, ಮನಸ್ಸು ಮನೆಯಲ್ಲಿದ್ದರೆ ಆ ಪೂಜೆ ದೇವರಿಗೆ ತಲುಪದು. ದೇವರಿಗೆ ಬೇಕಿರುವುದು ನಿಮ್ಮ ಸಮಯವಲ್ಲ, ನಿಮ್ಮ ನಿಷ್ಕಲ್ಮಶ ಮನಸ್ಸು.

ತ್ವರಿತ ಫಲಿತಾಂಶದ ನಿರೀಕ್ಷೆ:

ಇಂದು ಪೂಜೆ ಮಾಡಿ ನಾಳೆಯೇ ಪವಾಡ ಸಂಭವಿಸಲಿ ಎಂದು ಬಯಸುವುದು ಸರಿಯಲ್ಲ. ಬೀಜ ಬಿತ್ತಿದ ತಕ್ಷಣ ಮರವಾಗಿ ಹಣ್ಣು ಕೊಡುವುದಿಲ್ಲ, ಅದಕ್ಕೆ ತನ್ನದೇ ಆದ ಸಮಯ ಬೇಕು. ಭಕ್ತಿಯಲ್ಲಿ ತಾಳ್ಮೆ ಅತಿ ಮುಖ್ಯ. ನಂಬಿಕೆಯಿಂದ ಕಾಯುವುದೇ ನಿಜವಾದ ಪೂಜೆ.

ಇತ್ತೀಚಿನ ದಿನಗಳಲ್ಲಿ ಯೂಟ್ಯೂಬ್ ನೋಡಿಯೋ ಅಥವಾ ಯಾರೋ ಹೇಳಿದ್ದನ್ನು ಸರಿಯಾಗಿ ತಿಳಿಯದೆಯೋ ಪೂಜೆ ಮಾಡುವುದು ಹೆಚ್ಚಾಗಿದೆ. ಯಾವ ಮಂತ್ರವನ್ನು ಯಾವಾಗ ಹೇಳಬೇಕು, ಪೂಜಾ ವಿಧಿವಿಧಾನಗಳೇನು ಎಂಬ ಕನಿಷ್ಠ ಜ್ಞಾನವಿಲ್ಲದ ಪೂಜೆಯು ಗಮ್ಯಸ್ಥಾನವಿಲ್ಲದ ಪ್ರಯಾಣದಂತಾಗುತ್ತದೆ. ಪೂಜೆಯ ಹಿಂದಿನ ವೈಜ್ಞಾನಿಕ ಮತ್ತು ಆಧ್ಯಾತ್ಮಿಕ ಕಾರಣಗಳನ್ನು ತಿಳಿದು ಮಾಡುವುದು ಉತ್ತಮ.

ಪೂಜಾ ಕೋಣೆಯಲ್ಲಿ ಭಕ್ತಿ – ಹೊರಗೆ ಪಾಪ:

ಪೂಜಾ ಕೋಣೆಯಲ್ಲಿ ಕಣ್ಣು ಮುಚ್ಚಿ ಪ್ರಾರ್ಥಿಸಿ, ಹೊರಗೆ ಬಂದ ತಕ್ಷಣ ಇತರರಿಗೆ ಕೆಟ್ಟದ್ದನ್ನು ಬಯಸುವುದು, ಸುಳ್ಳು ಹೇಳುವುದು ಅಥವಾ ಕೋಪಗೊಳ್ಳುವುದು ಪೂಜೆಯ ಫಲವನ್ನು ಶೂನ್ಯವಾಗಿಸುತ್ತದೆ. ನಿಮ್ಮ ನಡವಳಿಕೆ ಬದಲಾಗದ ಹೊರತು ದೇವರ ಕೃಪೆ ಸಿಗುವುದು ಅಸಾಧ್ಯ.

ನಂಬಿಕೆಯ ಕೊರತೆ:

“ಈ ಪೂಜೆ ಮಾಡಿದರೆ ಕೆಲಸ ಆಗುತ್ತದೋ ಇಲ್ಲವೋ?” ಎಂಬ ಅನುಮಾನ ಮನಸ್ಸಿನಲ್ಲಿದ್ದರೆ, ಅಲ್ಲಿ ದೇವರ ಶಕ್ತಿ ಕೆಲಸ ಮಾಡುವುದಿಲ್ಲ. “ನಂಬಿದರೆ ಕಲ್ಲು ದೇವರು, ನಂಬದಿದ್ದರೆ ದೇವರು ಕಲ್ಲು”. ಪೂರ್ಣ ನಂಬಿಕೆಯಿಲ್ಲದ ಪೂಜೆ ಕೇವಲ ವ್ಯಾಯಾಮವಷ್ಟೇ.

ಪೂಜೆಯನ್ನು ಕೇವಲ ಅಭ್ಯಾಸ ಮಾಡಿಕೊಳ್ಳುವುದು:

ಬೆಳಿಗ್ಗೆ ಎದ್ದ ತಕ್ಷಣ ಸ್ನಾನ ಮಾಡಿ ಎರಡು ಅಗರಬತ್ತಿ ಹಚ್ಚುವುದು ಕೇವಲ ದೈನಂದಿನ ಕೆಲಸ  ಆಗಬಾರದು. ಅದು ಭಾವನೆಯಿಂದ ಕೂಡಿದ ಕ್ರಿಯೆಯಾಗಿರಬೇಕು. ಯಾವುದೇ ಭಾವನೆ ಅಥವಾ ಜೀವವಿಲ್ಲದ ಪೂಜೆ ಫಲ ನೀಡುವುದಿಲ್ಲ.

ಅಶುಚಿತ್ವ ಮತ್ತು ಅಸ್ತವ್ಯಸ್ತತೆ:

ಪೂಜಾ ಕೋಣೆಯು ಮನೆಯ ಅತ್ಯಂತ ಪವಿತ್ರ ಸ್ಥಳ. ಅಲ್ಲಿ ಧೂಳು, ಅಸ್ತವ್ಯಸ್ತತೆ ಅಥವಾ ಅಶುಚಿತ್ವವಿದ್ದರೆ ಸಕಾರಾತ್ಮಕ ಶಕ್ತಿಯು ಹರಿಯುವುದಿಲ್ಲ. ಸ್ವಚ್ಛತೆ ಇದ್ದಲ್ಲಿ ಮಾತ್ರ ದೈವಿಕ ಕಳೆ ನೆಲೆಸುತ್ತದೆ.

Kishor KV