ಬೆಂಗಳೂರಿನ ಜನರೇ ಎಚ್ಚರ ಎಚ್ಚರ – ಇಂದೂ ಕೂಡ ಬರಲಿದೆ ಆಲಿಕಲ್ಲು ಸಹಿತ ಮಳೆ!

ಬೆಂಗಳೂರಿನ ಜನರೇ ಎಚ್ಚರ ಎಚ್ಚರ – ಇಂದೂ ಕೂಡ ಬರಲಿದೆ ಆಲಿಕಲ್ಲು ಸಹಿತ ಮಳೆ!

ಬುಧವಾರ ಬೆಂಗಳೂರಿನಾದ್ಯಂತ ಸುರಿದ ಆಲಿಕಲ್ಲು ಮಳೆಗೆ 10 ಮಂದಿ ಬಲಿಯಾಗಿದ್ದು, ನಾನಾ ಅವಾಂತರ ಸೃಷ್ಟಿಯಾಗಿದೆ. ಈ ಬೆನ್ನಲ್ಲೇ ಇಂದೂ ಸಹ ಬೆಂಗಳೂರಲ್ಲಿ   ವರುಣ ಆರ್ಭಟಿಸಲಿದ್ದಾನೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.  ಗುಡುಗು ಸಹಿತ ಆಲಿಕಲ್ಲು ಮಳೆಯಾಗುವ ಸಾಧ್ಯತೆಯಿದ್ದು, ಮೇ 1ರವರೆಗೂ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ  ತಿಳಿಸಿದೆ.

ಬೇಸಿಗೆಗೆ ಬೆಂದಿದ್ದ ಬೆಂಗಳೂರಿಗರಿಗೆ ಬುಧವಾರ ಮಳೆರಾಯ ತಂಪೆರೆದಿದ್ದಾನೆ. ಹಲವು ಅವಘಡಗಳ ಜೊತೆ ಭೀಕರ ಮಳೆ 10 ಜನರ ಪ್ರಾಣವನ್ನೂ ಕಸಿದಿದೆ. ಬೌರಿಂಗ್ ಆಸ್ಪತ್ರೆಯಲ್ಲಿ ಗೋಡೆ ಕುಸಿದು 7 ಜನ ಮೃತಪಟ್ಟಿದ್ದು, ಇನ್ನೂ ಮೂವರು ಪ್ರತ್ಯೇಕ ಘಟನೆಗಳಲ್ಲಿ ಜೀವ ಕಳೆದುಕೊಂಡಿದ್ದಾರೆ.

ಇದನ್ನೂ ಓದಿ: ಪ್ರೀ ವೆಡ್ಡಿಂಗ್‌ ಶೂಟ್‌ಗೆ ಹೊರಟ ವರನ ಬಾಳಲ್ಲಿ ವಿಧಿಯಾಟ! – ಭೀಕರ ಅಪಘಾತಕ್ಕೆ ಯುವಕ ಬಲಿ!

ಬುಧವಾರ ಸುರಿದ ಒಂದೇ ಒಂದು ಧಾರಾಕಾರ ಮಳೆಗೆ ಬೆಂಗಳೂರಿನ ಮರಗಳು ಧರೆಗುರಳಿ ಟ್ರಾಫಿಕ್ ಜಾಮ್ ಉಂಟಾಗಿತ್ತು. 170ಕ್ಕೂ ಅಧಿಕ ಮರಗಳು ಧರೆಗುರುಳಿದ್ದು, 408 ಮರದ ಕೊಂಬೆಗಳು ಮುರಿದು ಬಿದ್ದಿವೆ. 5 ಪಾಲಿಕೆಗಳ ವ್ಯಾಪ್ತಿಯಲ್ಲಿ 68 ಕಡೆ ಜಲಾವೃತವಾಗಿದೆ. 25 ವರ್ಷಗಳ ಬಳಿಕ ಏಪ್ರಿಲ್‌ನಲ್ಲಿ ದಾಖಲೆಯ ಮಳೆಯಾಗಿದೆ.

ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ಬಾಲಕಿ ಜೀವ ಕಸಿದ ಮಳೆ 

ಮಳೆಯಿಂದ ಬೌರಿಂಗ್ ಆಸ್ಪತ್ರೆಯ ಗೋಡೆ ಕುಸಿದ  ಬೆನ್ನಲ್ಲೇ ಮನಕಲಕುವ ವಿಷಯವೊಂದು ಬಹಿರಂಗಗೊಂಡಿದ್ದು, ಮೃತ ಬಾಲಕಿ ಮುಸಾವಿರ್ ಬೇಗಂ ಹುಟ್ಟುಹಬ್ಬ ಆಚರಿಸಿಕೊಳ್ಳುವ ಸಂಭ್ರಮದಲ್ಲಿದ್ದಳು ಎಂಬುದು ಗೊತ್ತಾಗಿದೆ. ತನ್ನ ಬರ್ತ್​​ ಡೇಗಾಗಿ ಬಟ್ಟೆ ಖರೀದಿಗೆ ಕುಟುಂಬಸ್ಥರ ಜೊತೆಗೆ ಬಂದಿದ್ದ ಈಕೆ ಅವಘಡದಲ್ಲಿ ದಾರುಣವಾಗಿ ಮೃತಪಟ್ಟಿರೋದು ಕುಟುಂಬಸ್ಥರನ್ನು ಕಣ್ಣೀರಲ್ಲಿ ಕೈತೊಳೆಯುವಂತೆ ಮಾಡಿದೆ.

ಮೇ 3ರಂದು ತನ್ನ ಹುಟ್ಟುಹಬ್ಬದ ಹಿನ್ನೆಲೆ ಬಟ್ಟೆ ಸೇರಿ ವಿವಿಧ ವಸ್ತುಗಳ ಖರೀದಿಗೆಂದು ತಾಯಿ ಮುಬೀನ್ ತಾಜ್ ಮತ್ತು ಅತ್ತೆ ತಬ್ರೀನ್ ತಾಜ್ ಅವರೊಂದಿಗೆ ಮುಸಾವಿರ್ ಶಿವಾಜಿ ನಗರಕ್ಕೆ ಬಂದಿದ್ದಳು. ಈ ವೇಳೆ ಮಳೆ ಆರಂಭವಾಗಿದ್ದು, ಹೊಸ ಬಟ್ಟೆಗಳನ್ನು ಆಯ್ಕೆ ಮಾಡುತ್ತಾ ಖರೀದಿಯಲ್ಲಿ ತೊಡಗಿದ್ದ ಮುಸಾವಿರ್, ಬೋರಿಂಗ್ ಆಸ್ಪತ್ರೆ ಸಮೀಪ ಗೋಡೆ ಕುಸಿದಾಗ ಅದರ ಅವಶೇಷಗಳಡಿ ಸಿಲುಕಿ ಒದ್ದಾಡಿ ಪ್ರಾಣಬಿಟ್ಟಿದ್ದಾಳೆ. ಕುಟುಂಬಸ್ಥರು ಎಷ್ಟೇ ಪ್ರಯತ್ನಿಸಿದರೂ ಆಕೆಯ ಜೀವ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎನ್ನಲಾಗಿದೆ. ದುರ್ದೈವ ಎಂದರೆ ಮುಬೀನ್ ಮತ್ತು ಚಂದ್ ಪಾಶಾ ದಂಪತಿಗೆ ಮುಸಾವಿರ್ ಏಕೈಕ ಪುತ್ರಿ ಎಂಬುದು ಗೊತ್ತಾಗಿದೆ.

Kishor KV