ಪ್ರೀ ವೆಡ್ಡಿಂಗ್ ಶೂಟ್‌ಗೆ ಹೊರಟ ವರನ ಬಾಳಲ್ಲಿ ವಿಧಿಯಾಟ! – ಭೀಕರ ಅಪಘಾತಕ್ಕೆ ಯುವಕ ಬಲಿ!

ಆತ ಮದುವೆಯಾಗುವ ಸಂಭ್ರಮದಲ್ಲಿದ್ದ. ಮದುವೆ ದಿನಾಂಕ ಹತ್ತಿರವಾಗ್ತಿದ್ದಂತೆ ಎಲ್ಲಾ ತಯಾರಿ ಮಾಡಿಕೊಂಡಿದ್ದ. ಇಂದು ಪ್ರೀ ವೆಡ್ಡಿಂಗ್ ಶೂಟ್ ಮಾಡಿಸಲು ಹೊರಟ್ಟಿದ್ದ. ಆದ್ರೀಗ ವರನ ಬಾಳಲ್ಲಿ ವಿಧಿಯಾಟವಾಡಿದೆ. ಹಸೆಮಣೆ ಏರಲು ಸಜ್ಜಾಗಿದ್ದ ಯುವಕ ಈಗ ಮಸಣ ಸೇರಿದ್ದಾನೆ. ಪ್ರೀ ವೆಡ್ಡಿಂಗ್ ಶೂಟ್‌ಗೆ ಹೊರಟ ವರ ಅಪಘಾತದಲ್ಲಿ ದುರಂತ ಅಂತ್ಯ ಕಂಡಿದ್ದಾನೆ.
ಇದನ್ನೂ ಓದಿ: ಡಿವೈಡರ್ ಹಾರಿ SUV ಕಾರಿಗೆಗೆ ಪಿಕಪ್ ಡಿಕ್ಕಿ – 15 ಮಂದಿ ಸ್ಥಳದಲ್ಲೇ ಸಾವು.. 30ಕ್ಕೂ ಹೆಚು ಮಂದಿಗೆ ಗಾಯ!
ಈ ಹೃದಯ ವಿದ್ರಾವಕ ಘಟನೆ ಹಾಸನದ ಸಕಲೇಶಪುರ ತಾಲ್ಲೂಕಿನ ಮೂಗಲಿ ಗ್ರಾಮದದಲ್ಲಿ ಇಂದು ಬೆಳಿಗ್ಗೆ ಸಂಭವಿಸಿದೆ. ಕೆಲವೇ ದಿನಗಳಲ್ಲಿ ಹಸೆಮಣೆ ಏರಬೇಕಿದ್ದ ವರ ಭೀಕರ ರಸ್ತೆ ಅಪಘಾತಕ್ಕೆ ಬಲಿಯಾಗಿದ್ದಾನೆ. ಅಪಘಾತದಲ್ಲಿ ಮೃತಪಟ್ಟ ದುರ್ದೈವಿ ಯುವಕನನ್ನು ಮನು.ಎಲ್.ಎನ್. (29) ಎಂದು ಗುರುತಿಸಲಾಗಿದೆ. ಇವರು ಬೇಲೂರು ತಾಲ್ಲೂಕಿನ, ಲಕ್ಕುಂದ ಗ್ರಾಮದ, ದರ್ಬಾರ್ ಪೇಟೆ ನಿವಾಸಿಯಾಗಿದ್ದರು.
ಅಷ್ಟಕ್ಕೂ ಆಗಿದ್ದೇನು?
ಮೇ 10 ರಂದು ಆಲೂರು ತಾಲೂಕು ತೊಗರನಹಳ್ಳಿ ಗ್ರಾಮದ ಕಾಂಚನ ಜೊತೆ ಮನು ಅವರ ಮದುವೆ ನಿಶ್ಚಯವಾಗಿತ್ತು. ಆಲೂರು ಬೈರಾಪುರ ರಸ್ತೆಯಲ್ಲಿರುವ ಶ್ರೀ ವೀರಶೈವ ಕಲ್ಯಾಣ ಮಂಟಪದಲ್ಲಿ ಮದುವೆ ನಿಗದಿಯಾಗಿತ್ತು. ಮದುವೆಗೆ ಎರಡೂ ಕುಟುಂಬಗಳಲ್ಲಿ ಭರದಿಂದ ಸಿದ್ಧತೆಗಳು ನಡೆಯುತ್ತಿದ್ದವು. ಈ ನಡುವೆ ಇಂದು ಬೆಳಿಗ್ಗೆ ಮನು ಅವರು ಪ್ರೀವೆಡ್ಡಿಂಗ್ ಶೂಟಿಂಗ್‌ಗಾಗಿ ವಧುವನ್ನು ಕರೆತರಲು ತಮ್ಮ ವಿಟಾರಾ ಬ್ರೆಝಾ ಕಾರಿನಲ್ಲಿ ಒಬ್ಬರೇ ಹೊರಟಿದ್ದರು. ಕಾರು ಸಕಲೇಶಪುರ ತಾಲ್ಲೂಕಿನ ಮೂಗಲಿ ಗ್ರಾಮದ ಬಳಿ ತಲುಪಿದಾಗ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಜೋರಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸ ಎಷ್ಟಿತ್ತೆಂದರೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಮನು ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಇನ್ನೇನು ಕೆಲವೇ ದಿನಗಳಲ್ಲಿ ಮಗನ ಮದುವೆ ಮಾಡಿ ಸಂಭ್ರಮಿಸಬೇಕಿದ್ದ ಪೋಷಕರು, ಮಗನ ಹಠಾತ್ ಸಾವು ಕೇಳಿ ಆಘಾತಕ್ಕೊಳಗಾಗಿದ್ದಾರೆ. ಮಗನನ್ನು ಕಳೆದುಕೊಂಡ ಪೋಷಕರು ಮತ್ತು ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲಿ ಈಗ ಸ್ಮಶಾನ ಮೌನ ಆವರಿಸಿದೆ. ಘಟನಾ ಸ್ಥಳಕ್ಕೆ ಸಕಲೇಶಪುರ ಗ್ರಾಮಾಂತರ ಠಾಣೆಯ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ನೋಡಿರಿ

