RCB ಕಿಂಗ್ ಹಿಂದಿಕ್ಕಿದ ವೈಭವ್ | ಹಣದ ಅಮಲಲ್ಲಿ ಆಟ ಮರೆತ ಪೂರನ್! | CSK Vs DC.. ಕೋಚ್ ಕೋಲ್ಡ್ ವಾರ್!

IPL 2026 ಅದ್ದೂರಿಯಾಗಿ ನಡೆಯುತ್ತಿದೆ. ವೈಭವ್ ಸೂರ್ಯವಂಶಿ ಕಿಂಗ್ ಕೊಹ್ಲಿಯನ್ನ ಹಿಂದಿಕ್ಕಿ ಆರೆಂಜ್ ಕ್ಯಾಪ್ ತನ್ನದಾಗಿಸಿಕೊಂಡಿದ್ದಾರೆ. ಮತ್ತೊಂದ್ಕಡೆ ಲಕ್ನೋ ಸೂಪರ್ ಸ್ಟಾರ್ ಎನಿಸಿಕೊಂಡ ಪೂರನ್ ಅವರ ಕಳಪೆ ಫಾರ್ಮ್ಗೆ ಹಣದ ಅಮಲೇ ಕಾರಣ ಎಂಬ ಟೀಕೆಗಳು ಕೇಳಿಬಂದಿವೆ. ಐಪಿಎಲ್ ಅಂಗಳದ ರೋಚಕ ಸುದ್ದಿಗಳ ಹೈಲೆಟ್ಸ್ ಇಲ್ಲಿದೆ.
ಇದನ್ನೂ ಓದಿ: ಸೋತ ಮೇಲೆ ನೋವು ತೋಡಿಕೊಂಡ ಹಾರ್ದಿಕ್ ಪಾಂಡ್ಯ – ಮುಂಬೈ ಫ್ಯಾನ್ಸ್ ಕಣ್ಣೀರು..!
- ರಾಜಸ್ಥಾನ್ ರಾಯಲ್ಸ್ ತಂಡದ ಯಂಗ್ ಗನ್ ವೈಭವ್ ಸೂರ್ಯವಂಶಿ ಇದೀಗ ಆರ್ಸಿಬಿ ಕಿಂಗ್ ವಿರಾಟ್ ಕೊಹ್ಲಿನ ಹಿಂದಿಕ್ಕಿ ಆರೆಂಜ್ ಕ್ಯಾಪ್ ಪಡೆದಿದ್ದಾರೆ. ಪಂಜಾಬ್ ಕಿಂಗ್ಸ್ ವಿರುದ್ಧ ಕೇವಲ 16 ಎಸೆತಗಳಲ್ಲಿ 43 ರನ್ ಗಳಿಸುವ ಮೂಲಕ ಸೂರ್ಯವಂಶಿ ಆರೆಂಜ್ ಕ್ಯಾಪ್ ತನ್ನದಾಗಿಸಿಕೊಂಡರು. ಜೊತೆಗೆ ಈ ಸೀಸನ್ನಲ್ಲಿ 400 ರನ್ ಗಳಿಸಿದ ಮೊದಲ ಆಟಗಾರ ಕೂಡಾ ಹೌದು.
- ಆರೆಂಜ್ ಕ್ಯಾಪ್ ಧರಿಸಿದ ವೈಭವ್ ಸೂರ್ಯವಂಶಿ ಮತ್ತೊಂದು ದಾಖಲೆ ಬರೆದಿದ್ದಾರೆ. ಸೂರ್ಯವಂಶಿ ಈ ಬಾರಿಯ ಐಪಿಎಲ್ನಲ್ಲಿ ಕೇವಲ 167 ಎಸೆತಗಳಲ್ಲಿ 400 ರನ್ ಕಲೆಹಾಕಿದ್ದಾರೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲೇ ಸೀಸನ್ವೊಂದರಲ್ಲಿ ಅತೀ ವೇಗವಾಗಿ 400 ರನ್ ಗಳಿಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ರಸೆಲ್ ಹೆಸರಿನಲ್ಲಿತ್ತು. 2019 ರಲ್ಲಿ ಕೊಲ್ಕತ್ತಾ ನೈಟ್ ರೈಡರ್ಡ್ ಪರ ಕಣಕ್ಕಿಳಿದಿದ್ದ ಆ್ಯಂಡ್ರೆ ರಸೆಲ್ ಕೇವಲ 188 ಎಸೆತಗಳಲ್ಲಿ 400 ರನ್ ಕಲೆಹಾಕಿದ್ದರು.
- ಐಪಿಎಲ್ನಲ್ಲಿ 30 ಲಕ್ಷದೊಂದಿಗೆ ವೃತ್ತಿ ಜೀವನ ಆರಂಭಿಸಿದ್ದ ಲಕ್ನೋ ಸೂಪರ್ ಜೈಂಟ್ಸ್ ಆಟಗಾರ ನಿಕೋಲಸ್ ಪೂರನ್ ಈಗ 20 ಕೋಟಿಗೂ ಹೆಚ್ಚು ಹಣ ಪಡೆಯುತ್ತಿದ್ದಾರೆ. ಲಕ್ನೋ ಸೂಪರ್ ಸ್ಟಾರ್ ಎನಿಸಿಕೊಂಡ ಪೂರನ್ ಈಗ ಲಕ್ನೋ ಪರ ಬ್ಯಾಟ್ ಬೀಸುತ್ತಿಲ್ಲ. ಪೂರನ್ ಈ ಕಳಪೆ ಫಾರ್ಮ್ಗೆ ಹಣದ ಅಮಲೇ ಕಾರಣ ಎಂಬ ಟೀಕೆಗಳು ಕೇಳಿಬಂದಿವೆ. ವೆಸ್ಟ್ ಇಂಡೀಸ್ ತಂಡದ ಮಾಜಿ ಆಟಗಾರ ನಿಕೋಲಸ್ ಪೂರನ್ ಈ ಸೀಸನ್ನಲ್ಲಿ ಕಳಪೆ ಫಾರ್ಮ್ನಲ್ಲಿರುವುದರಿಂದ ವ್ಯಾಪಕ ಟೀಕೆಗಳು ಕೇಳಿಬಂದಿವೆ.
- ಪಂಜಾಬ್ ಕಿಂಗ್ಸ್ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿದ ಮೇಲೆ ಆರ್ ಆರ್ ಕ್ಯಾಪ್ಟನ್ ರಿಯಾನ್ ಪರಾಗ್ ಕೆಲವೊಂದು ವಿಚಾರಗಳನ್ನು ಹೇಳಿಕೊಂಡಿದ್ದಾರೆ. ನಮ್ಮ ತಂಡ ಸೋತಾಗ ಕೆಲವರು ಕಟುವಾಗಿ ಟೀಕಿಸಿದ್ದಾರೆ. ಆದರೆ ಇಂತಹ ಟೀಕೆಗಳ ಬಗ್ಗೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ಹೊರಗಿನ ಟೀಕೆಗಳ ಬಗ್ಗೆ ನಮಗೆ ಚಿಂತೆಯಿಲ್ಲ, ಯಾರು ಏನೇ ಹೇಳಿದರೂ ನಮ್ಮ ಪ್ರದರ್ಶನ ನಾವು ನೀಡುತ್ತೇವೆ. ಅಂತಹ ಟೀಕೆಗಳಿಗೆ ಕ್ಯಾರೇ ಮಾಡಲ್ಲ ಎಂದು ರಿಯಾನ್ ಪರಾಗ್ ಹೇಳಿದ್ದಾರೆ.
- ಐಪಿಎಲ್ ಪಂದ್ಯಗಳು ನಿಗದಿತ ಸಮಯಕ್ಕಿಂತ ಜಾಸ್ತಿ ಹೊತ್ತು ತಡವಾಗುತ್ತಿರುವುದಕ್ಕೆ ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆಟಗಾರರು ಮತ್ತು ತಂಡಗಳು ನೀಡಲಾಗುವ ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿಕೊಳ್ಳುತ್ತಿವೆ ಎಂದು ಗವಾಸ್ಕರ್ ಕಿಡಿಕಾರಿದ್ದಾರೆ. ಹೀಗಾಗಿ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರುವಂತೆ BCCIಗೆ ವಿಶೇಷ ಪತ್ರ ಬರೆದಿದ್ದಾರೆ.
- ಆರ್ಸಿಬಿ ಸ್ಟಾರ್ ಕ್ರಿಕೆಟರ್ ವಿರಾಟ್ ಕೊಹ್ಲಿ ಅವರ ಸ್ಟ್ರೈಕ್ರೇಟ್ ಈಗ ಏರಿಕೆಯಾಗಿದೆ. ಈ ಬಗ್ಗೆ ಮಾಜಿ ಕ್ರಿಕೆಟರ್, ಕಾಮೆಂಟೇಟರ್ ಸಂಜಯ್ ಮಂಜ್ರೇಕರ್ ಅಚ್ಚರಿಯ ವಿಚಾರ ರಿವೀಲ್ ಮಾಡಿದ್ದಾರೆ. ಹಿಂದೆ ವಿರಾಟ್ ಕೊಹ್ಲಿ ತಮ್ಮ ತಂಡದ ಆಟಗಾರರನ್ನು ನಂಬುತ್ತಿರಲಿಲ್ಲ ಮತ್ತು ಇಡೀ ಇನ್ನಿಂಗ್ಸ್ ನ್ನ ಸ್ವತಃ ತಾವೇ ಆಡಲು ಬಯಸುತ್ತಿದ್ದರು. ಆದ್ದರಿಂದ ಕೊಹ್ಲಿ ಅವರ ಸ್ಟ್ರೈಕ್ ರೇಟ್ ತುಂಬಾ ಕಡಿಮೆ ಇರುತ್ತಿತ್ತು. ಆದರೆ ಇದೀಗ ತಂಡದಲ್ಲಿ ಬ್ಯಾಟಿಂಗ್ ಬಲ ಜಾಸ್ತಿಯಿದೆ. ಇದು ಕೊಹ್ಲಿ ಅವರ ಸ್ಟ್ರೈಕ್ ರೇಟ್ ಏರಿಕೆಗೆ ಕಾರಣವಾಗಿದೆ ಎಂದು ಮಂಜ್ರೇಕರ್ ಹೇಳಿದ್ದಾರೆ.
- ಟೀಮ್ ಇಂಡಿಯಾದ ಮಾಜಿ ನಾಯಕ ಕೃಷ್ಣಮಾಚಾರಿ ಶ್ರೀಕಾಂತ್ ಅವರು ಡಿಸಿ ಮುಖ್ಯ ಕೋಚ್ ಹೇಮಾಂಗ್ ಬದಾನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿಎಸ್ಕೆ ಕೋಚ್ ಫ್ಲೆಮಿಂಗ್ ಬಗ್ಗೆ ಡಿಸಿ ಹೆಡ್ ಕೋಚ್ ಬದನಿ ಟೀಕೆ ಮಾಡಿದ್ದರು. ಧೋನಿ ಇಲ್ಲದೆ ಫ್ಲೆಮಿಂಗ್ ಕೋಚ್ ಆಗಿ ಯಶಸ್ವಿಯಾಗಲು ಸಾಧ್ಯವಿಲ್ಲ. ಐಪಿಎಲ್ ಹೊರತುಪಡಿಸಿ ಬೇರೆ ಯಾವ ಟೂರ್ನಿಯಲ್ಲೂ ಕೋಚ್ ಆಗಿ ಸಕ್ಸಸ್ ಆಗಿಲ್ಲ ಎಂದು ಫ್ಲೆಮಿಂಗ್ ಕೋಚಿಂಗ್ ಸಾಧನೆಯನ್ನು ಹೀಯಾಳಿಸಿದ್ದರು. ಇದೀಗ ಡಿಸಿ ಕೂಡಾ ಸತತ ಸೋಲುತ್ತಿದೆ. ಹೀಗಾಗಿ ಶ್ರೀಕಾಂತ್ ಅವರು ಬದಾನಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
- ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಲುಂಗಿ ಎನ್ಗಿಡಿ ಗಾಯಗೊಂಡು ಪ್ರಜ್ಞಾಹೀನರಾಗಿದ್ದರು. ನಿಜ ಹೇಳಬೇಕಂದರೆ ಅವರ ಸ್ಥಿತಿ ಗಂಭೀರವಾಗಿತ್ತು. ಆ ನಿರ್ಣಾಯಕ ಕ್ಷಣದಲ್ಲಿ ದೆಹಲಿ ಪೊಲೀಸ್ ಅಧಿಕಾರಿ ಮತ್ತು ಮಾಜಿ ಕ್ರಿಕೆಟಿಗ ಎಸಿಪಿ ಸಂಜಯ್ ಸಿಂಗ್ ಅವರು ಆಟಗಾರನ ಜೀವ ಉಳಿಸಲು ಸಹಾಯ ಮಾಡಿದ್ದಾರೆ. ಎನ್ಗಿಡಿ ಅವರಿಗೆ ಬೇಗ ಚಿಕಿತ್ಸೆಯ ಅವಶ್ಯಕತೆಯಿತ್ತು. ಹೀಗಾಗಿ ಎಸಿಪಿ ಸಂಜಯ್ ಸಿಂಗ್ ಅವರು ಟ್ರಾಫಿಕ್ ಜವಾಬ್ದಾರಿ ವಹಿಸಿಕೊಂಡು, 8 ಕಿಲೋಮೀಟರ್ ಮಾರ್ಗದಲ್ಲಿ ಹಸಿರು ಕಾರಿಡಾರ್ ಮಾಡಿಸಿದ್ದರು. ಇಂದ್ರಿಂದಾಗಿ ಲುಂಗಿ ಎನ್ಗಿಡಿಗೆ ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗುವಂತಾಯ್ತು.
- RCB ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಏಪ್ರಿಲ್ 30ರಂದು ಮುಖಾಮುಖಿಯಾಗಲಿವೆ. ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಪಂದ್ಯ ನಡೆಯಲಿದೆ. ಇದೀಗ ದೆಹಲಿಯಿಂದ ಅಹಮದಾಬಾದ್ಗೆ ಪ್ರಯಾಣಿಸಿದ ಆರ್ಸಿಬಿ ಬಳಗದಲ್ಲಿ ಫಿಲ್ ಸಾಲ್ಟ್ ಕಾಣಿಸಿಕೊಂಡಿಲ್ಲ. ಹೀಗಾಗಿ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಫಿಲ್ ಸಾಲ್ಟ್ ಆಡಲ್ಲ. ಫಿಲ್ ಸಾಲ್ಟ್ ಬದಲು ಬೆಥಲ್ ಆರಂಭಿಕ ಆಟಗಾರನಾಗಿ ಕಣಕ್ಕಿಳಿಯಲಿದ್ದಾರೆ.

ನೋಡಿರಿ

