ಸಿಲಿಕಾನ್ ಸಿಟಿಯಲ್ಲಿ ರಣ ಮಳೆಗೆ 10 ಮಂದಿ ಬಲಿ! – ಪ್ರಧಾನಿ ಮೋದಿ ಸಂತಾಪ.. ಮೃತರ ಕುಟುಂಬಕ್ಕೆ 2 ಲಕ್ಷ ರೂ ಪರಿಹಾರ

ಸಿಲಿಕಾನ್ ಸಿಟಿಯಲ್ಲಿ ಬುಧವಾರ ಸಂಜೆ ಭಾರಿ ಮಳೆ ಸುರಿದಿದೆ. ವರುಣನ ಆರ್ಭಟಕ್ಕೆ ಬೆಂಗಳೂರಿನಲ್ಲಿ ಸಾಕಷ್ಟು ಅವಾಂತರ ಸೃಷ್ಟಿಯಾಗಿದೆ. ರಣಭೀಕರ ಮಳೆಗೆ 10 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಒಂದೇ ಜಾಗದಲ್ಲಿ 7 ಜನ ಗೋಡೆ ಕುಸಿದು ಅಸುನೀಗಿದ್ರೆ, ಉಳಿದ ಮೂವರು ಪ್ರತ್ಯೇಕ ಘಟನೆಗಳಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.
ಇದನ್ನೂ ಓದಿ: ಈ ಹಣ್ಣು ತಿಂದ್ರೆ ಶುಗರ್ ನಿಯಂತ್ರಣದಲ್ಲಿರುತ್ತೆ! – ಆಹಾ.. ಅಂಜೂರದಿಂದ ಎಷ್ಟೊಂದು ಆರೋಗ್ಯ ಲಾಭ!
ನಿನ್ನೆ ಸಂಜೆ ಸುರಿದ ಮಳೆಯಿಂದಾಗಿ ಸಾಕಷ್ಟು ಅವಾಂತರ ಸೃಷ್ಟಿಯಾಗಿದೆ. ಭೀಕರ ಮಳೆಗೆ ಬೆಂಗಳೂರಿನ ಶಿವಾಜಿನಗರದ ಬೌರಿಂಗ್ ಆಸ್ಪತ್ರೆ ಶವಗಾರದ ಬಳಿ ಕಾಂಪೌಂಡ್ ಕುಸಿದು 7 ಜನ ಮೃತಪಟ್ಟಿದ್ದಾರೆ. ನಿನ್ನೆ ರಾತ್ರಿಯೇ ದುರಂತ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಸಿಎಂ ಸಿದ್ದರಾಮಯ್ಯ ಮೃತರ ಕುಟುಂಬದವರಿಗೆ 5 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದಾರೆ. ಇನ್ನು ಘಟನೆಯಲ್ಲಿ ಗಾಯಗೊಂಡಿರುವ 7 ಜನರಿಗೆ ಉಚಿತ ಚಿಕಿತ್ಸೆ ನೀಡುವಂತೆ ಸೂಚನೆ ನೀಡಿದ್ದಾರೆ.
ಇನ್ನು ಗೋಡೆ ಕುಸಿತವಾದ 100 ಮೀಟರ್ ದೂರದಲ್ಲಿ ಗಾಡಿ ಪಾರ್ಕ್ ಮಾಡುತ್ತಿದ್ದ 17 ವರ್ಷದ ಸೈಯದ್ ಸೂಫಿಯಾನ್, ಗೋಡೆ ಕುಸಿದ ಕಾರಣ ಬೆಸ್ಕಾಂ ವಿದ್ಯುತ್ ವೈಯರ್ ತಾಗಿ ಕರೆಂಟ್ ಶಾಕ್‌ನಿಂದ ಪ್ರಾಣ ಬಿಟ್ಟಿದ್ದಾನೆ. ಕೆಜಿ ಹಳ್ಳಿಯ ವೆಂಕಟೇಶ್ ಪುರಂ ನಿವಾಸಿ ಸೈಯದ್ ತನ್ನ ತಾಯಿ ಜೊತೆ ಬಟ್ಟೆ ಖರೀದಿಗೆ ಬಂದಿದ್ದ. ತಾಯಿ ಜೊತೆ ಬಂದಾತ ಪಾರ್ಕ್ ಮಾಡಲು ಹೋದಾಗ ಬೌರಿಂಗ್ ಆಸ್ಪತ್ರೆ ಶವಗಾರದ ಬಳಿ ಕಾಂಪೌಂಡ್ ಕುಸಿದಿದೆ. ಇದೇ ವೇಳೆ ದೂರದ ಬೆಸ್ಕಾಂ ಕಂಬಕ್ಕೆ ಹಾನಿಯಾಗಿ ವೈಯರ್ ಕಟ್ ಆಗಿದ್ದು, ಪಾರ್ಕ್ ಮಾಡುತ್ತಿದ್ದ ಸೈಯದ್‌ಗೆ ವಿದ್ಯುತ್ ತಂತಿ ತಗುಲಿ ಶಾಕ್‌ನಿಂದ ತಾಯಿ ಮುಂದೆಯೇ ಸೈಯದ್ ಪ್ರಾಣ ಬಿಟ್ಟಿದ್ದಾನೆ. ತನ್ನ ಕಣ್ಣ ಮುಂದೆಯೇ ನಡೆದ ದುರಂತ ಕಂಡ ತಾಯಿ ಕೂಡ ಮಗನ ಸಾವಿನಿಂದ ಶಾಕ್‌ಗೆ ಒಳಗಾಗಿ ಐಸಿಯು ಸೇರಿದ್ದಾರೆ.
ಇನ್ನೂ ಮಳೆಗೆ ಮತ್ತೊಂದು ಪ್ರಕರಣದಲ್ಲಿ ಗೋಡೋನ್ ಶೀಟ್‌ಗಳು ಬಿದ್ದು ವ್ಯಕ್ತಿ ದುರಂತ ಸಾವನ್ನಪ್ಪಿದ್ದಾರೆ. ಮೈಸೂರು ರಸ್ತೆ ಕಸ್ತೂರಿ ಬಾಯಿನಗರ ಅಶ್ವಥ್ ಕಟ್ಟೆ ರಸ್ತೆಯ ಮನೆಯಲ್ಲಿದ್ದ 35 ವರ್ಷದ ಮಂಜು ಮೇಲೆ ಸಿಮೆಂಟ್ ಶೀಟ್ ಬಿದ್ದಿದೆ. ಕುಟುಂಬದ ಜೊತೆ ಮನೆ ಒಳಗೆ ಇದ್ದ ವ್ಯಕ್ತಿ ಸಾವನ್ನಪ್ಪಿದ್ದು, ಬಿರುಗಾಳಿ ಮಳೆಗೆ ಗೋಡೌನ್ ಶೀಟ್‌ಗಳು ಹಾರಿ ಮನೆಗಳ ಮೇಲೆ ಬಿದ್ದು, ಹಲವು ಮನೆಗಳು, ಗೋಡೌನ್‌ಗಳಿಗೆ ಹಾನಿಯಾಗಿದೆ.
ಇನ್ನೂ ಜೆಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲೂ ಮಳೆಗೆ ವ್ಯಕ್ತಿಯೊಬ್ಬರು ಬಲಿಯಾಗಿದ್ದಾರೆ. ನಗರದ ಮಿನಿ ಫಾರೆಸ್ಟ್, 15ನೇ ಕ್ರಾಸ್ ಬಳಿ ಮಳೆಗೆ ಮತ್ತೊಂದು ಬಲಿಯಾಗಿದೆ. 35 ವರ್ಷದ ರಘು ಸಾವನ್ನಪ್ಪಿರುವ ದುರ್ದೈವಿ. ಸಾರಕ್ಕಿ ಬಸ್ ನಿಲ್ದಾಣದ ಬಳಿ ವಿದ್ಯುತ್ ಕಂಬದ ಬಳಿ ನಿಂತಿದ್ದಾಗ, ಜೆಡಿ ಮಾರಾ ಸ್ಲಂ ನಿವಾಸಿ ರಘು ವಿದ್ಯುತ್ ಸ್ಪರ್ಶಿಸಿ ಸಾವುನ್ನಪ್ಪಿದ್ದಾರೆ.
ಇನ್ನು ಶಿವಾಜಿನಗರದಲ್ಲಿ ಇಂದು ಸಂಜೆ ಸುರಿದ ಭಾರಿ ಮಳೆಗೆ ಬೌರಿಂಗ್ ಆಸ್ಪತ್ರೆಯ ಗೋಡೆ ಕುಸಿದು 7 ಮಂದಿ ಸಾವನ್ನಪ್ಪಿರುವ ದುರಂತ ಘಟನೆಗೆ ಪ್ರಧಾನಿ ನರೇಂದ್ರ ಮೋದಿ ದುಃಖ ವ್ಯಕ್ತಪಡಿಸಿದ್ದಾರೆ. 7 ಜನರ ಸಾವಿಗೆ ಪ್ರಧಾನಿ ಸಂತಾಪ ಸೂಚಿಸಿದ್ದಾರೆ. ಕರ್ನಾಟಕದ ಬೆಂಗಳೂರಿನಲ್ಲಿ ಗೋಡೆ ಕುಸಿದು ಸಂಭವಿಸಿದ ದುರ್ಘಟನೆ ದುರದೃಷ್ಟಕರ. ಮೃತರ ಕುಟುಂಬಗಳಿಗೆ ನನ್ನ ಸಂತಾಪಗಳು. ಗಾಯಾಳುಗಳು ಆದಷ್ಟು ಬೇಗ ಗುಣಮುಖರಾಗಲಿ ಎಂದು ಪ್ರಧಾನಿ ಮೋದಿ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಮೃತರ ಕುಟುಂಬಸ್ಥರಿಗೆ PMNRF ನಿಂದ ತಲಾ 2 ಲಕ್ಷ ರೂ. ಪರಿಹಾರ ನೀಡಲಾಗುವುದು. ಗಾಯಾಳುಗಳಿಗೆ 50,000 ರೂ. ನೀಡಲಾಗುವುದು ಪ್ರಧಾನಿಗಳು ತಿಳಿಸಿದ್ದಾರೆ.

ನೋಡಿರಿ

