ಸುಖ, ನೆಮ್ಮದಿ, ಸಂತೋಷ ಬೇಕಾ? – ನಮ್ಮ ರಾಜ್ಯದಲ್ಲಿರೋ ಈ ಎರಡು ದೇಗುಲಕ್ಕೆ ಒಮ್ಮೆ ಭೇಟಿ ನೀಡಿ

ನಮ್ಮ ದೇಶದಲ್ಲಿ ಪ್ರತಿಯೊಂದು ದೇವಾಲಯಕ್ಕೂ ತನ್ನದೇ ಆದ ವಿಶಿಷ್ಟ ಹಿನ್ನೆಲೆ ಇದೆ. ಕೆಲವು ದೇವಸ್ಥಾನಗಳಲ್ಲಿ ಕೈ ಮುಗಿದರೆ ಅಥವಾ ದೇವರಲ್ಲಿ ಪ್ರಾರ್ಥಿಸಿಕೊಂಡರೆ ಇಷ್ಟಾರ್ಥಗಳು ಈಡೇರುತ್ತವೆ. ಅಂತಹ ವಿಶಿಷ್ಟ ಪವಾಡ ಅಡಗಿರುವ ದೇವಾಲಯಗಳು ಇವೆ. ನಮ್ಮ ರಾಜ್ಯದಲ್ಲಿಯೇ ಅಂತಹ ದೇವಸ್ಥಾನವಿದೆ. ಆ ದೇವಸ್ಥಾನಗಳು ಯಾವುದು ಅನ್ನೋದ್ದನ್ನ ನೋಡೋಣ.
ಶ್ರೀ ಕಾರ್ಯಸಿದ್ಧಿ ಆಂಜನೇಯ ಸ್ವಾಮಿ ದೇವಾಲಯ
ಬೆಂಗಳೂರಿನ ಗಿರಿನಗರದ ಶ್ರೀ ಕಾರ್ಯಸಿದ್ಧಿ ಆಂಜನೇಯ ಸ್ವಾಮಿ ದೇವಾಲಯವು ಭಕ್ತರ ನೆಚ್ಚಿನ ತಾಣವಾಗಿದೆ. ಯಾವುದೇ ಕೆಲಸವು ಕೈಗೂಡದೆ ಅಡೆತಡೆಗಳು ಉಂಟಾಗುತ್ತಿದ್ದರೆ, ಇಲ್ಲಿನ ಆಂಜನೇಯನಿಗೆ ಮೊರೆ ಹೋದರೆ ಆ ಕೆಲಸವು “ಸಿದ್ದಿ”ಯಾಗುತ್ತದೆ ಎಂಬುದು ಸತ್ಯ.
ಈ ದೇವಾಲಯದಲ್ಲಿ ಒಂದು ವಿಶೇಷವಾದ ಪೂಜಾ ಕ್ರಮವಿದೆ. ಭಕ್ತರು ಒಂದು ತೆಂಗಿನಕಾಯಿಯನ್ನು ತೆಗೆದುಕೊಂಡು, ತಮ್ಮ ಮನದ ಇಚ್ಛೆಯನ್ನು ಸಂಕಲ್ಪ ಮಾಡಿ ಆಂಜನೇಯನ ಸನ್ನಿಧಿಯಲ್ಲಿ ಕಟ್ಟುತ್ತಾರೆ. ಇದನ್ನು “ಪೂರ್ಣಫಲ ಸಮರ್ಪಣೆ” ಎನ್ನಲಾಗುತ್ತದೆ.
ಅವಧೂತ ದತ್ತ ಪೀಠದ ಗಣಪತಿ ಸಚ್ಚಿದಾನಂದ ಸ್ವಾಮೀಜಿಗಳಿಂದ ನಿರ್ಮಿಸಲ್ಪಟ್ಟ ಈ ಸುಂದರ ದೇಗುಲವು ಭಕ್ತರ ಪಾಲಿನ ಕಲ್ಪವೃಕ್ಷವಿದ್ದಂತೆ. ಇಲ್ಲಿ ಹನುಮಾನ್ ಚಾಲೀಸಾ ಪಠಣ ಮತ್ತು ವಿಶೇಷ ಪೂಜೆಗಳಿಂದಾಗಿ ಈ ದೇವಸ್ಥಾನ ಪ್ರಸಿದ್ಧಿ ಪಡೆದಿದೆ. ಪ್ರಾಣದೇವರ ಅನುಗ್ರಹದಿಂದ ಭಕ್ತರ ಕೆಲಸಗಳು ಶೀಘ್ರವಾಗಿ ನೆರವೇರುತ್ತವೆ ಎಂಬ ಅಖಂಡ ವಿಶ್ವಾಸ ಇಲ್ಲಿನ ಪ್ರತಿ ಭಕ್ತನಲ್ಲೂ ಇದೆ.
ನಿಮಿಷಾಂಬಾ ದೇವಿ ದೇವಾಲಯ
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಕಾವೇರಿ ನದಿ ತೀರದಲ್ಲಿರುವ ಶ್ರೀ ನಿಮಿಷಾಂಬಾ ದೇವಾಲಯವು ಅತೀ ಶಕ್ತಿಶಾಲಿ ದೇವಿಯ ಸನ್ನಿಧಿ. ಹೆಸರೇ ಸೂಚಿಸುವಂತೆ ಇಲ್ಲಿನ ದೇವಿಯು ಭಕ್ತರ ಕಷ್ಟಗಳನ್ನು ಕೇವಲ ಒಂದು “ನಿಮಿಷ”ದಲ್ಲಿ ಪರಿಹರಿಸುತ್ತಾಳೆ ಎಂಬುದು ಇಲ್ಲಿನ ವಿಶೇಷ.
ಸುಮಾರು 400 ವರ್ಷಗಳಿಗಿಂತಲೂ ಹಳೆಯದಾದ ಈ ದೇವಸ್ಥಾನವು ಮುಮ್ಮಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಪುನರುಜ್ಜೀವನಗೊಂಡಿತು ಎಂದು ಹೇಳಲಾಗುತ್ತದೆ. ಇಲ್ಲಿ ಶ್ರೀಚಕ್ರದ ಪೂಜೆ ನಡೆಯುತ್ತದೆ. ಪಾರ್ವತಿ ದೇವಿಯ ಅವತಾರವಾದ ನಿಮಿಷಾಂಬೆಯು ತಾಯಿ ರೂಪದಲ್ಲಿ ನೆಲೆಸಿದ್ದಾಳೆ. ದೇವಿಯ ಎದುರು ನಿಂತು ಭಕ್ತಿಯಿಂದ ಪ್ರಾರ್ಥಿಸಿದರೆ ಎಂತಹ ಸಂಕಷ್ಟಗಳೂ ದೂವಾಗುತ್ತವೆ ಎಂಬ ಬಲವಾದ ನಂಬಿಕೆಯಿದೆ.
ಮದುವೆ ತಡವಾಗುತ್ತಿರುವವರು, ಸಂತಾನ ಭಾಗ್ಯ ಇಲ್ಲದವರು ಮತ್ತು ಆರ್ಥಿಕ ಸಂಕಷ್ಟದಿಂದ ಬಳಲುತ್ತಿರುವವರು ಇಲ್ಲಿಗೆ ಬಂದು ದೇವಿಗೆ ಸೀರೆ ಮತ್ತು ಬಳೆಗಳನ್ನು ಸಮರ್ಪಿಸಿ ಪೂಜೆ ಸಲ್ಲಿಸುತ್ತಾರೆ. ಕಾವೇರಿ ನದಿಯ ಸುಂದರ ಪರಿಸರದಲ್ಲಿ ನೆಲೆಸಿರುವ ಈ ದೇವಿಯು ಭಕ್ತರ ಪಾಲಿಗೆ ಅಭಯ ಹಸ್ತದ ತಾಯಿಯಾಗಿದ್ದಾಳೆ.

ನೋಡಿರಿ

