ಕಲ್ಲಂಗಡಿ ತಿನ್ನೋ ಮುನ್ನ ಎಚ್ಚರ ಎಚ್ಚರ! – ಕಲ್ಲಂಗಡಿ ಸೇವಿಸಿ ಒಂದೇ ಕುಟುಂಬದ ನಾಲ್ವರು ಸಾವು

ಈ ಜನ ಬೆಸಿಗೆಯ ಬಿಸಿಲಿನಿಂದ ತಪ್ಪಿಸಿಕೊಳ್ಳಲು ಕಲ್ಲಂಗಡಿಯ ಮೊರೆ ಹೋಗುತ್ತಿದ್ದಾರೆ. ಆದ್ರೆ ಅದೇ ಕಲ್ಲಂಗಡಿ ಒಂದು ಕುಟುಂಬದ ಜೀವ ತೆಗೆದಿದೆ. ಹೌದು, ದಕ್ಷಿಣ ಮುಂಬೈನಲ್ಲಿರುವ ತಮ್ಮ ಮನೆಯಲ್ಲಿ ನಡೆದ ಕುಟುಂಬ ಸಭೆಯ ನಂತರ ಕಲ್ಲಂಗಡಿ ಸೇವಿಸಿದ ದಂಪತಿ ಮತ್ತು ಅವರ ಇಬ್ಬರು ಅಪ್ರಾಪ್ತ ಪುತ್ರಿಯರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಏಪ್ರಿಲ್ 25 ರಂದು ಜೆಜೆ ಮಾರ್ಗ್ ನಿವಾಸದಲ್ಲಿ ನಡೆದ ಕುಟುಂಬ ಔತಣಕೂಟದ ನಂತರ ಅಬ್ದುಲ್ಲಾ (40), ಅವರ ಪತ್ನಿ ನಸ್ರೀನ್ (35), ಮತ್ತು ಪುತ್ರಿಯರಾದ ಜೈನಾಬ್ (13) ಮತ್ತು ಆಯೇಷಾ (16) ಅನಾರೋಗ್ಯಕ್ಕೆ ಒಳಗಾದರು ಎಂದು ತಿಳಿದು ಬಂದಿದೆ.
ಕುಟುಂಬವು ಇತರ ಐದು ಅತಿಥಿಗಳೊಂದಿಗೆ ‘ಚಿಕನ್ ಪುಲಾವ್’ ತಿಂದಿದ್ದಾರೆ. ಬಳಿಕ ಮನೆಗೆ ತೆರಳಿ ಕಲ್ಲಂಗಡಿ ಸೇವಿಸಿದ್ದಾರೆ ಎಂದು ಹೇಳಲಾಗಿದೆ. ಬಳಿಕ ಅವರಿಗೆ ವಾಂತಿ ಮತ್ತು ತಲೆತಿರುಗುವಿಕೆ ಪ್ರಾರಂಭವಾಗಿದೆ. ದಂಪತಿ ಮತ್ತು ಮಕ್ಕಳನ್ನು ಮೊದಲು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆದರೆ ಅವರ ಸ್ಥಿತಿ ಹದಗೆಟ್ಟಾಗ, ಅವರನ್ನು ಜೆಜೆ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು, ಅಲ್ಲಿ ಎಲ್ಲರೂ ಭಾನುವಾರ ಸಾವನ್ನಪ್ಪಿದರು. ಕುಟುಂಬದ ಮುಖ್ಯಸ್ಥ ಅಬ್ದುಲ್ಲಾ ಭಾನುವಾರ ರಾತ್ರಿ 10.30 ರ ಸುಮಾರಿಗೆ ಕೊನೆಯದಾಗಿ ನಿಧನರಾದರು.
ಇದನ್ನೂ ಓದಿ: ಫೀಲ್ಡಿಂಗ್ಗೆ ಅಡ್ಡಿಪಡಿಸಿದ್ದಕ್ಕೆ ಅಂಗ್ಕ್ರಿಶ್ ರಘುವಂಶಿ ಔಟ್- ಕೆಕೆಆರ್ ಆಟಗಾರನಿಗೆ ದಂಡದ ಜೊತೆಗೆ ಡಿಮೆರಿಟ್ ಪಾಯಿಂಟ್
ಮೇಲ್ನೋಟಕ್ಕೆ ಇದು ಕಲ್ಲಂಗಡಿಯಿಂದ ಆಹಾರ ವಿಷವಾಗಿ ಕಂಡುಬಂದಿರುವ ಪ್ರಕರಣವೆಂದು ತೋರುತ್ತದೆ, ಏಕೆಂದರೆ ‘ಪುಲಾವ್’ ಮಾತ್ರ ತಿಂದವರಿಗೆ ಯಾವುದೇ ಆರೋಗ್ಯ ಸಮಸ್ಯೆಗಳು ಎದುರಾಗಲಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಸಾವಿಗೆ ಕಾರಣವನ್ನು ದೃಢೀಕರಿಸಲು ಹಿಸ್ಟೋಪಾಥಾಲಜಿ ವರದಿಗಾಗಿ ಕಾಯಲಾಗುತ್ತಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ನೋಡಿರಿ

