ಆ್ಯಂಬುಲೆನ್ಸ್ ಗಳಿಗೆ “108” ಸಮಸ್ಯೆ – ಸೇವೆ ಸ್ಥಗಿತ ಮಾಡುತ್ತಾ ಆರೋಗ್ಯ ಇಲಾಖೆ?
ಬೆಂಗಳೂರು: 108 ಆ್ಯಂಬುಲೆನ್ಸ್ ಸೇವೆ ಈಗ ಸಮಸ್ಯೆಗಳ ಗೂಡಾಗಿದೆ. ಕಳೆದ ಎರಡ್ಮೂರು ತಿಂಗಳ ಹಿಂದೆ ನೌಕರರು ಸಂಬಳ ವಿಚಾರಕ್ಕೆ ಮುಷ್ಕರ ನಡೆಸಿ 108 ಸೇವೆಯಲ್ಲಾಗುತ್ತಿರುವ ಅನ್ಯಾಯವನ್ನು ತೆರೆದಿಟ್ಟು ಸೇವೆ ಸ್ಥಗಿತಕ್ಕೆ ಮುಂದಾಗಿದ್ದರು. ಈ ಘಟನೆ ಬಳಿಕ ಈಗ ಮತ್ತೊಂದು ವಿಚಾರ ಬಯಲಾಗಿದ್ದು ಸಾರ್ವಜನಿಕರನ್ನು ಮತ್ತಷ್ಟು ಆತಂಕಗೊಳ್ಳುವಂತೆ ಮಾಡಿದೆ.
ಇದನ್ನೂ ಓದಿ: ಸಿಂ‘ಹಾಸನ’ ಗುದ್ದಾಟದಲ್ಲಿ ದೊಡ್ಡಗೌಡ್ರ ಗುಟುರು – ಹೆಚ್ಡಿಕೆ, ಭವಾನಿ ಗಪ್ಚುಪ್.. ಯಾರಿಗೆ ಟಿಕೆಟ್?
ಬೆಂಗಳೂರಿನಲ್ಲಿ ಒಟ್ಟು 709 ಆ್ಯಂಬುಲೆನ್ಸ್ ಗಳು ಕಾರ್ಯನಿರ್ವಹಿಸುತ್ತಿವೆ. ಇದರಲ್ಲಿ 340 ಆ್ಯಂಬುಲೆನ್ಸ್ ಗಳು ಸಂಪೂರ್ಣವಾಗಿ ಹಾಳಾಗಿವೆ ಅನ್ನುವ ವಿಚಾರ ಬಯಲಾಗಿದೆ. ಆ್ಯಂಬುಲೆನ್ಸ್ ಗಳಲ್ಲಿ ಇಂಜಿನ್ ಸಮಸ್ಯೆ, ಬೋರ್ ಸಮಸ್ಯೆ ಮತ್ತು ಟೆಕ್ನಿಕಲ್ ಸಮಸ್ಯೆ ಕಂಡುಬಂದಿದೆ. ಹೀಗಾಗಿ ದುರಾವಸ್ಥೆಗೆ ತಲುಪಿರೋ 340 ಆ್ಯಂಬುಲೆನ್ಸ್ ಗಳನ್ನು ಸ್ಥಗಿತಗೊಳಿಸಲು ಆರೋಗ್ಯ ಇಲಾಖೆ ಮುಂದಾಗಿದೆ.
2008 ರಿಂದ ಜಿವಿಕೆ ಸಂಸ್ಥೆ ಆ್ಯಂಬುಲೆನ್ಸ್ ಸೇವೆ ನೀಡುತ್ತಾ ಬಂದಿದೆ. ಆದರೆ ಜಿವಿಕೆ ಸಂಸ್ಥೆಯ ಕಾರ್ಯ ವೈಖರಿ ಬಗ್ಗೆ ಅಪಸ್ವರ ಎದ್ದಿದ್ದು, ಸಂಸ್ಥೆಯ ಕಾರ್ಯ ವೈಖರಿ ಚೆನ್ನಾಗಿಲ್ಲ ಎಂದು ಸ್ವತಃ ಆ್ಯಂಬುಲೆನ್ಸ್ ನೌಕರರೇ ದೂರುತ್ತಿದ್ದಾರೆ. ಅಲ್ಲದೇ ಜಿವಿಕೆ ಟೆಂಡರ್ ಅವಧಿ ಫೆ. 6ಕ್ಕೆ ಮುಕ್ತಾಯ ಆಗುತ್ತಿದೆ. ಈ ಹಿನ್ನೆಲೆ ಹೊಸದಾಗಿ ಟೆಂಡರ್ ಕರೆದರೂ ಆ್ಯಂಬುಲೆನ್ಸ್ ಸೇವೆ ನೀಡಲು ಯಾವ ಕಂಪನಿಗಳು ಮುಂದೆ ಬರುತ್ತಿಲ್ಲ. ಕಂಪನಿಗಳು ಮುಂದೆ ಬರದೇ ಇದ್ದರೆ ಸರ್ಕಾರದ ಗಮನಕ್ಕೆ ತಂದು ಆ್ಯಂಬುಲೆನ್ಸ್ ಗಳಲ್ಲಿ ಇರುವ ಸಮಸ್ಯೆಯನ್ನು ಸರಿಪಡಿಸುತ್ತೇವೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.