ಕರಾವಳಿಯಲ್ಲಿ ಮೀನಿನ ಬರಗಾಲ – ಮೀನುಗಾರರಿಗೆ ನಷ್ಟದ ಜೊತೆ ಬದುಕುವ ದಾರಿಯೇ ಬಂದ್..!

ಕರಾವಳಿಯಲ್ಲಿ ಮೀನಿನ ಬರಗಾಲ – ಮೀನುಗಾರರಿಗೆ ನಷ್ಟದ ಜೊತೆ ಬದುಕುವ ದಾರಿಯೇ ಬಂದ್..!

ಕರಾವಳಿಯಲ್ಲಿ ಮೀನುಗಾರಿಕೆ ನಂಬಿ ಅದೆಷ್ಟೋ ಕುಟುಂಬಗಳು ಬದುಕು ಸಾಗಿಸುತ್ತಿವೆ. ಜೊತೆಗೆ ಮೀನು ಕರಾವಳಿಗರ ಅಚ್ಚುಮೆಚ್ಚಿನ ಆಹಾರವೂ ಹೌದು. ಇದೀಗ ಮೀನುಪ್ರಿಯರಿಗೂ ಬೇಸರದ ಸುದ್ದಿ. ಜೊತೆಗೆ ಮೀನುಗಾರಿಕೆಯನ್ನೇ ನಂಬಿಕೊಂಡು ಬದುಕು ಸಾಗಿಸುವವರಿಗೂ ಬೇಸರದ ಸುದ್ದಿಯಿದೆ.

ಇದನ್ನೂ ಓದಿ:ತಿರುಪತಿ ದೇಗುಲದಲ್ಲಿ ಅತ್ಯಾಧುನಿಕ ತಂತ್ರಜ್ಞಾನ! – ಇನ್ಮುಂದೆ ತಿಮ್ಮಪ್ಪನ ದರ್ಶನ ಸುಲಭ!

ಸಮುದ್ರದಲ್ಲಿ ಬಿಸಿ ಜಾಸ್ತಿಯಾಗಿದೆ. ಇದರ ಪರಿಣಾಮ ಮತ್ಸ್ಯ ಕ್ಷಾಮ ಉಂಟಾಗಿದೆ. ಮೀನುಗಳೇ ಸಿಗದೇ ಶೇ.90 ಬೋಟ್ ಮೀನುಗಾರಿಕೆ ನಿಲ್ಲಿಸಿವೆ. ಇದೊಂಥರಾ ಕರಾವಳಿಯಲ್ಲಿ ಬಂದಿರುವ ಮೀನಿನ ಬರಗಾಲ. ಇದಕ್ಕೆ ಕಾರಣ ಕೆಂಡದಂತಾ ಬಿಸಿಲು. ಬೆಂಕಿಯಂತಾ ಬಿಸಿಲಿನ ತಾಪಕ್ಕೆ ಸಮುದ್ರವೂ ಸುಡುತ್ತಿದೆ. ನೀರು ಬಿಸಿ ಬಿಸಿಯಾಗಿ ಮೀನುಗಳಿಗೆ ಬದುಕಲು ಕಷ್ಟವಾಗುತ್ತಿದೆ. ಹಲವು ದಶಕಗಳ ಬಳಿಕ ಕರಾವಳಿಯಲ್ಲಿ ಭೀಕರ ‘ಮತ್ಸ್ಯ ಕ್ಷಾಮ’ ಉಂಟಾಗಿದ್ದು, ಮಂಗಳೂರು ಧಕ್ಕೆಯಲ್ಲಿ ಶೇ. 90ರಷ್ಟು ಬೋಟ್‍ಗಳು ಮೀನುಗಾರಿಕೆ ನಿಲ್ಲಿಸಿ ಲಂಗರು ಹಾಕಿವೆ.

ಸಾಮಾನ್ಯವಾಗಿ ಮಾರ್ಚ್‍ನಿಂದ ಮೇ ತಿಂಗಳು ಮೀನುಗಾರಿಕೆಗೆ ಸುಗ್ಗಿಯ ಕಾಲ. ಆದರೆ ಈ ಬಾರಿ ಗ್ಲೋಬಲ್ ವಾರ್ಮಿಂಗ್ ಪ್ರಭಾವದಿಂದ ಸಮುದ್ರದ ಮೇಲ್ಪದರದ ನೀರು ಕುದಿಯುವಷ್ಟು ಬಿಸಿಯಾಗಿದೆ. ಈ ತಾಪ ತಾಳಲಾರದೆ ಮೀನುಗಳು ಸಮುದ್ರದ ತೀರ ಬಿಟ್ಟು ಅತ್ಯಂತ ಆಳದ ಕಲ್ಲು ಬಂಡೆಗಳ ನಡುವೆ ಅವಿತು ಕುಳಿತಿವೆ. ಮೀನುಗಾರರ ಬಲೆಗಳು ಅಷ್ಟು ಆಳಕ್ಕೆ ತಲುಪದ ಕಾರಣ, ಸಾವಿರಾರು ಬೋಟ್‍ಗಳು ಬರಿಗೈಲಿ ದಡ ಸೇರುತ್ತಿವೆ.  ಆಳ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳುವ ಪ್ರತಿಯೊಂದು ಬೋಟ್‍ಗೆ ಡೀಸೆಲ್, ಕೂಲಿ ಸೇರಿದಂತೆ ಸುಮಾರು 7 ಲಕ್ಷ ರೂಪಾಯಿ ಖರ್ಚಾಗುತ್ತದೆ. ಆದರೆ ಮೀನುಗಳೇ ಸಿಗದ ಕಾರಣ ಹಾಕಿದ ಬಂಡವಾಳವೂ ವಾಪಸ್ ಬರುತ್ತಿಲ್ಲ. ಇದರಿಂದ ಕಂಗಾಲಾದ ಮೀನುಗಾರರು ಲಕ್ಷ ಲಕ್ಷ ನಷ್ಟ ಅನುಭವಿಸುತ್ತಿದ್ದಾರೆ. ಜೂನ್ ಮತ್ತು ಜುಲೈ ತಿಂಗಳಲ್ಲಿ ಮೀನುಗಳ ಸಂತಾನೋತ್ಪತ್ತಿಗಾಗಿ ಸರ್ಕಾರ ಮೀನುಗಾರಿಕೆ ನಿಷೇಧಿಸುತ್ತದೆ. ಆದರೆ ಈ ಬಾರಿ ಪ್ರಕೃತಿಯ ವಿಕೋಪದಿಂದಾಗಿ ಮೇ ತಿಂಗಳಲ್ಲೇ ಮೀನುಗಾರಿಕೆ ಸ್ತಬ್ಧಗೊಂಡಿದೆ. ಇದರಿಂದ ಕರಾವಳಿ ಮಂದಿಗೆ ಅಚ್ಚುಮೆಚ್ಚಿನ ಮೀನಿನ ಆಹಾರ ಸಿಗುತ್ತಿಲ್ಲ. ಜೊತೆಗೆ ಮೀನುಗಾರಿಕೆಯನ್ನೇ ನಂಬಿಕೊಂಡವರ ಬದುಕು ಕೂಡಾ ಕಷ್ಟವಾಗಿದೆ.

Sulekha