ಇಂದು ಡಾ.ರಾಜ್ 97ನೇ ಜನ್ಮದಿನ – ಕಂಠೀರವ ಸ್ಟುಡಿಯೋದಲ್ಲಿ ಅಣ್ಣಾವ್ರ ಸಮಾಧಿಗೆ ರಾಘಣ್ಣ ಕುಟುಂಬ ಪೂಜೆ

ನಟಸಾರ್ವಭೌಮ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತ ವರನಟ, ಪದ್ಮಭೂಷಣ ಡಾ.ರಾಜ್‌ಕುಮಾರ್ ಅವರ ಜನ್ಮದಿನದ ಸವಿನೆನಪು. ಅಣ್ಣಾವ್ರ 97ನೇ ಹುಟ್ಟುಹಬ್ಬದ ಹಿನ್ನೆಲೆ ಬೆಂಗಳೂರಿನ ಕಂಠೀರವ ಸ್ಟುಡಿಯೋ ಆವರಣದಲ್ಲಿರುವ ರಾಜ್‌ಕುಮಾರ್ ಸ್ಮಾರಕಕ್ಕೆ ರಾಘವೇಂದ್ರ ರಾಜ್‌ಕುಮಾರ್ ಪೂಜೆ ಸಲ್ಲಿಸಿದರು. ನಟ ವಿನಯ್ ರಾಜ್‌ಕುಮಾರ್ ಜತೆಗಿದ್ದರು. ಶಾಸಕ ಗೋಪಾಲಯ್ಯ ಉಪಸ್ಥಿತರಿದ್ದರು.
ಇದನ್ನೂ ಓದಿ: ಇಂದು RCB Vs GTಹೈವೋಲ್ಟೇಜ್ ಮ್ಯಾಚ್! – ಚಿನ್ನಸ್ವಾಮಿ ಸ್ಟೇಡಿಯಂ ಸುತ್ತ ಹೈ ಅಲರ್ಟ್!
ಭಾರತೀಯ ಚಿತ್ರರಂಗದಲ್ಲೇ ಅತ್ಯುತ್ತಮ ನಾಯಕ ನಟನಾಗಿ ಮಾತ್ರವಲ್ಲದೇ ಅದ್ಭುತ ಗಾಯಕನಾಗಿಯೂ ಗುರುತಿಸಿಕೊಂಡಿದ್ದರು. ಜೊತೆಗೆ ಸಮಾಜ ಸೇವೆಗಳಿಂದಲೂ ದೊಡ್ಮನೆ ಎಂದೇ ಹೆಸರಾಯಿತು. ಅಭಿಮಾನಿಗಳನ್ನೇ ದೇವರೆಂದು ಕರೆದ ದೇವತಾ ಮನುಷ್ಯ ಖ್ಯಾತಿಯ ರಾಜ್ ಇಂದಿಗೂ ನಮ್ಮ ನಡುವೆ ಅಜರಾಮರ. ಇಂದು ಅಪ್ಪಾಜಿ ಅವರ ಹುಟ್ಟುಹಬ್ಬದ ಹಿನ್ನೆಲೆ ಬೆಂಗಳೂರಿನ ಕಂಠೀರವ ಸ್ಟುಡಿಯೋ ಆವರಣದಲ್ಲಿರುವ ರಾಜ್‌ಕುಮಾರ್ ಸ್ಮಾರಕಕ್ಕೆ ರಾಘವೇಂದ್ರ ರಾಜ್‌ಕುಮಾರ್ ಪೂಜೆ ಸಲ್ಲಿಸಿದರು.
ಇನ್ನು ಪೂಜೆ ಬಳಿಕ ರಾಘವೇಂದ್ರ ರಾಜ್‌ಕುಮಾರ್ ಮಾತನಾಡಿದ್ದು, ಅಪ್ಪಾಜಿ ಇದ್ದಾಗ ಎಷ್ಟು ಜನ ಅವರನ್ನು ಪ್ರೀತಿಸುತ್ತಿದ್ದರೋ ಈಗಲೂ ಅಷ್ಟೇ ಜನ ಪ್ರೀತಿಸುತ್ತಾರೆ. ಮನೆಗೆ ಬಂದು ಭೇಟಿ ಮಾಡಿ ಹೋಗ್ತಾರೆ. ಅಭಿಮಾನಿಗಳನ್ನು ಅಪ್ಪಾಜಿ ದೇವರು ಎಂದು ಕರೆದರು. ಅದರಂತೆ ಅಭಿಮಾನಿಗಳು ಇಂದಿಗೂ ಅಪ್ಪಾಜಿ ಮೇಲೆ ಅದೇ ಪ್ರೀತಿ ತೋರಿಸ್ತಾರೆ ಎಂದು ತಿಳಿಸಿದರು.
ಇನ್ನು ಶಿವರಾಜ್‌ಕುಮಾರ್ ಕೂಡ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ರು. ರಾಜ್‌ಕುಮಾರ್ ಹಾಗೂ ಮೊಮ್ಮಗನ ಎಐ ಫೋಟೋ ಹಂಚಿಕೊಂಡ ಮಗ ಶಿವಣ್ಣ, ಹ್ಯಾಪಿ ಬರ್ತ್ಡೇ ಅಜ್ಜ ಎಂದು ಬರೆದುಕೊಂಡಿದ್ದಾರೆ. ಸುಂದರ ಫೋಟೋ ಮೇಲೆ ಅಪ್ಪಾಜಿ ಹುಟ್ಟುಹಬ್ಬದ ಸವಿನೆನಪು ಎಂದು ಬರೆಯಲಾಗಿದೆ.
ಇನ್ನು ದೊಡ್ಮನೆ ಸೊಸೆ ಅಶ್ವಿನಿ ತಮ್ಮ ಅಫೀಶಿಯಲ್ ಸೋಷಿಯಲ್ ಮೀಡಿಯಾ ಪೇಜ್ನಲ್ಲಿ, ‘ಅಪ್ಪಾಜಿಯವರ ಹುಟ್ಟುಹಬ್ಬದ ಸವಿನೆನಪಿನಲ್ಲಿ…’ ಎಂದು ಬರೆದುಕೊಂಡಿದ್ದಾರೆ. ಪೋಸ್ಟರ್ ಮೇಲೆ ”ಅಪ್ಪಾಜಿಯವರ ಹುಟ್ಟುಹಬ್ಬದ ಸವಿನೆನಪಿನಲ್ಲಿ – ನಿಮ್ಮ ಹುಟ್ಟುಹಬ್ಬವು ನಿಮ್ಮ ವಿನಮ್ರತೆ, ನಿಮ್ಮ ಕಾರ್ಯ ಮತ್ತು ನೀವು ಪ್ರತಿನಿಧಿಸುವ ಒಳ್ಳೆಯತನವನ್ನು ನಮಗೆ ನೆನಪಿಸುತ್ತದೆ. ನಿಮ್ಮ ಆಶೀರ್ವಾದ ಪ್ರತಿದಿನವು ನಮಗೆ ದಾರಿದೀಪವಾಗಿವೆ” ಎಂದು ಬರೆಯಲಾಗಿದೆ.
ರಾಜ್‌ಕುಮಾರ್ ತಮ್ಮ ಅಮೋಘ ಅಭಿನಯದಿಂದ ಮಾತ್ರವಲ್ಲದೇ ಸಾಮಾಜಿಕ ಕಾರ್ಯಗಳ ಮೂಲಕವೂ ಸಾಕಷ್ಟು ಗಮನ ಸೆಳೆದಿದ್ದರು. ಕರುನಾಡಿನ ನೆಲ, ಜಲ, ಭಾಷೆಯ ವಿಷಯ ಬಂದಾಗ ದನಿ ಎತ್ತುತ್ತಿದ್ದ ಖ್ಯಾತ ನಟ ಇವರು. ರಾಜಕುಮಾರ್ ಹೋರಾಟಕ್ಕೆ ಧುಮುಕಿದರೆಂದ್ರೆ ಸರ್ಕಾರವೇ ನಡುಗಿ ಹೋಗುತ್ತಿತ್ತು. ಆ ಮಟ್ಟಿನ ಸ್ಟಾರ್ಪವರ್, ಗೌರವ, ಜನಪ್ರಿಯತೆ ಸಂಪಾದಿಸಿದ್ದರು.
ಸಂತ, ಸಾಧಕ, ರಾಜ, ಮಂತ್ರಿ, ಸಾಮಾನ್ಯ ಕೂಲಿ ಅಥವಾ ಚಾಲಕನೇ ಆಗಿರಲಿ.. ಯಾವುದೇ ಪಾತ್ರಕ್ಕೂ ಸೈ, ಯಾವುದೇ ಜಾನರ್ನ ಸಿನಿಮಾಗೂ ಜೈ. ಪಾತ್ರಗಳಿಗೆ ಜೀವ ತುಂಬುತ್ತಿದ್ದ ರೀತಿಯೇ ವಿಸ್ಮಯ. ಪ್ರತೀ ಸಿನಿಮಾಗಳೂ ಒಂದಲ್ಲ ಒಂದು ರೀತಿಯ ಸಂದೇಶ ಹೊತ್ತುಬಂದಿದೆ. ಹಾಗಾಗಿಯೇ, ನಟಸಾರ್ವಭೌಮನ ಸಿನಿಮಾಗಳು ಇಂದಿಗೂ ಅಷ್ಟೇ ಜನಪ್ರಿಯ. ಅವರ ನಟನೆ ಯುವ ಕಲಾವಿದರಿಗೂ ಸ್ಫೂರ್ತಿ.

ನೋಡಿರಿ

