ಮುಂಬೈನ ಚೆಂಡಾಡಿದ ಚೆನ್ನೈ ಕಿಂಗ್ಸ್ – ಪಾಂಡ್ಯ ಪಡೆಗೆ 5ನೇ ಸೋಲು!

ಮುಂಬೈನ ಚೆಂಡಾಡಿದ ಚೆನ್ನೈ ಕಿಂಗ್ಸ್ – ಪಾಂಡ್ಯ ಪಡೆಗೆ  5ನೇ ಸೋಲು!

ಸಂಜು ಸ್ಯಾಮ್ಸನ್‌ ಅವರ ಎರಡನೇ ಶತಕ ಹಾಗೂ ಅಕಿಲ್‌ ಹುಸೇನ್‌ ಅವರ ಸ್ಪಿನ್‌ ಮೋಡಿಯ ನೆರವಿನಿಂದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ, 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌  ಟೂರ್ನಿಯ 33ನೇ ಪಂದ್ಯದಲ್ಲಿ  ಮುಂಬೈ ಇಂಡಿಯನ್ಸ್‌ ಎದುರು 103 ರನ್‌ಗಳ ಭರ್ಜರಿ ಗೆಲುವು ಪಡೆಯಿತು. ಆ ಮೂಲಕ ತನ್ನ ಮೂರನೇ ಗೆಲುವಿನ ಮೂಲಕ ಋತುರಾಜ್‌ ಗಾಯಕ್ವಾಡ್‌ ಸಾರಥ್ಯದ ಸಿಎಸ್‌ಕೆ ಟೂರ್ನಿಯ ಅಂಕಪಟ್ಟಿಯಲ್ಲಿ ಐದನೇ ಸ್ಥಾನಕ್ಕೆ ಲಗ್ಗೆ ಇಟ್ಟಿತು. ಇನ್ನು ಬ್ಯಾಟಿಂಗ್‌ ವೈಫಲ್ಯದಿಂದಾಗಿ ಐದು ಬಾರಿ ಚಾಂಪಿಯನ್ಸ್‌ ಮುಂಬೈ ಐದನೇ ಸೋಲು ಅನುಭವಿಸಿತು.

 ವಾಂಖೆಡೆ ಕ್ರೀಡಾಂಗಣದಲ್ಲಿನ ಐದು ಬಾರಿ ಚಾಂಪಿಯನ್ಸ ಚೆನ್ನೈ ಸೂಪರ್‌ ಕಿಂಗ್ಸ್‌ ಹಾಗೂ ಅಷ್ಟೇ ಬಾರಿ ಚಾಂಪಿಯನ್ಸ್‌ ಮುಂಬೈ ಇಂಡಿಯನ್ಸ್‌ ನಡುವಣ ಪಂದ್ಯ ತೀವ್ರ ಪೈಪೋಟಿಯಿಂದ ಕೂಡಿರಬಹುದೆಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ಋತುರಾಜ್‌ ಗಾಯಕ್ವಾಡ್‌ ನಾಯಕತ್ವದ ಸಿಎಸ್‌ಕೆ, ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಎರಡೂ ವಿಭಾಗಗಳಲ್ಲಿ ಸಂಪೂರ್ಣ ಪ್ರಾಬಲ್ಯ ಸಾಧಿಸಿತು.

ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಸಿಎಸ್‌ಕೆ ತಂಡದ ಪರ ಬ್ಯಾಟಿಂಗ್‌ನಲ್ಲಿ ಸಂಜು ಸ್ಯಾಮ್ಸನ್‌ ಪ್ರಾಬಲ್ಯ ಸಾಧಿಸಿದರು. ಮುಂಬೈ ಬೌಲರ್‌ಗಳು ಕೂಡ ಅತ್ಯುತ್ತಮ ಬೌಲಿಂಗ್‌ ಪ್ರದರ್ಶನವನ್ನು ತೋರುವ ಮೂಲಕ ಸಿಎಸ್‌ಕೆ ತಂಡದಲ್ಲಿ ಸಂಜು ಸ್ಯಾಮ್ಸನ್‌ ಹೊರತುಪಡಿಸಿ ಇನ್ನುಳಿದ ಎಲ್ಲಾ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿ ಹಾಕಿದ್ದರು. ಆದರೆ, ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಆಡಿದ ಸಂಜು ಸ್ಯಾಮ್ಸನ್‌ ಅವರನ್ನು ಔಟ್‌ ಮಾಡಲು ಮುಂಬೈ ಬೌಲರ್‌ಗಳಿಂದ ಸಾಧ್ಯವಾಗಲಿಲ್ಲ.

ಇದನ್ನೂ ಓದಿ: RCBಯಲ್ಲಿ ಬೆಥೆಲ್ ಟೈಂ ವೇಸ್ಟ್? – ಲೀಗ್ ಅರ್ಧದಲ್ಲೇ ಬಿಟ್ಟು ಹೋಗ್ತಾರಾ?

ಋತುರಾಜ್‌ ಗಾಯಕ್ವಾಡ್‌ (22), ಡೆವಾಲ್ಡ್‌ ಬ್ರೆವಿಸ್‌ (21) ಅವರು ಸ್ವಲ್ಪ ಹೊತ್ತು ಸಂಜು ಸ್ಯಾಮ್ಸನ್‌ಗೆ ಸಾಥ್‌ ನೀಡಿದ್ದರು. ಇನ್ನುಳಿದಂತೆ ಶಿವಂ ದುವೆ, ಸರ್ಫರಾಝ್‌ ಖಾನ್‌ ಬಹುಬೇಗ ವಿಕೆಟ್‌ ಒಪ್ಪಿಸಿದರು. ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಬ್ಯಾಟ್‌ ಮಾಡಿದ ಸಂಜು, 54 ಎಸೆತಗಳಲ್ಲಿ 6 ಸಿಕ್ಸರ್‌ ಹಾಗೂ 10 ಬೌಂಡರಿಗಳೊಂದಿಗೆ ಅಜೇಯ 101 ರನ್‌ ಸಿಡಿಸಿದರು. ಇದು ಇವರ ಈ ಸೀಸನ್‌ನ ಎರಡನೇ ಹಾಗೂ ಒಟ್ಟಾರೆ 7ನೇ ಐಪಿಎಲ್‌ ಶತಕವಾಗಿದೆ. ಆ ಮೂಲಕ ಸಿಎಸ್‌ಕೆ ತನ್ನ ಪಾಲಿನ 20 ಓವರ್‌ಗಳಿಗೆ 6 ವಿಕೆಟ್‌ ನಷ್ಟಕ್ಕೆ 207 ರನ್‌ ಕಲೆ ಹಾಕಿತು.

208 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಮುಂಬೈ ಇಂಡಿಯನ್ಸ್‌, ಬ್ಯಾಟಿಂಗ್‌ ಸ್ನೇಹಿ ತವರು ಪಿಚ್‌ನಲ್ಲಿ ಸುಲಭವಾಗಿ ಜಯ ಸಾಧಿಸಬಹುದೆಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ಮೊದಲನೇ ಓವರ್‌ನಲ್ಲಿಯೇ ಸ್ಪಿನ್ನರ್‌ ಅಕಿಲ್‌ ಹುಸೇನ್‌, ದಾನೀಶ್‌ ಮಾಲೆವಾರ್‌ ಅವರನ್ನು ಔಟ್‌ ಮಾಡಿದರು. ನಂತರ ಎರಡನೇ ಓವರ್‌ನಲ್ಲಿ ಕ್ವಿಂಟನ್‌ ಡಿ ಕಾಕ್‌ ಅವರನ್ನು ಮುಖೇಶ್‌ ಚೌಧರಿ ಔಟ್‌ ಮಾಡಿದರು. ನಂತರ ಮೂರನೇ ಓವರ್‌ನಲ್ಲಿ ನಮನ್‌ ಧೀರ್‌ ಅವರನ್ನು ಅಕೀಲ್‌ ಶೂನ್ಯಕ್ಕೆ ಔಟ್‌ ಮಾಡಿದರು. ಆ ಮೂಲಕ ಮುಂಬೈ ಪವರ್‌ಪ್ಲೇನಲ್ಲಿ ಮೂರು ವಿಕೆಟ್‌ ಕಳೆದುಕೊಂಡು 29 ರನ್‌ಗಳಿಗೆ ಸೀಮಿತವಾಗಿತ್ತು. ಇದು ಪಂದ್ಯದ ಪಾಲಿಗೆ ಟರ್ನಿಂಗ್‌ ಪಾಯಿಂಟ್‌ ಆಯಿತು.

Kishor KV