ಪಹಲ್ಗಾಮ್‌ ದಾಳಿಗೆ ಒಂದು ವರ್ಷ – ಪಾಪಿಗಳ ಅಟ್ಟಹಾಸಕ್ಕೆ ಬಲಿಯಾದ ಮುಗ್ಧ ಜೀವಗಳನ್ನ ನೆನೆದು ಶಪಥಗೈದ ಮೋದಿ

ಪಹಲ್ಗಾಮ್‌ ದಾಳಿಗೆ ಒಂದು ವರ್ಷ – ಪಾಪಿಗಳ ಅಟ್ಟಹಾಸಕ್ಕೆ ಬಲಿಯಾದ ಮುಗ್ಧ ಜೀವಗಳನ್ನ ನೆನೆದು ಶಪಥಗೈದ ಮೋದಿ

ಜಮ್ಮು ಮತ್ತು ಕಾಶ್ಮೀರದ  ಅನಂತನಾಗ್ ಜಿಲ್ಲೆಯ ಪಹಲ್ಗಾಮ್‌ನ  ಬೈಸರನ್ ಕಣಿವೆಯಲ್ಲಿ ಆ ದುರಂತ  ಘಟನೆ ನಡೆದು ಇವತ್ತಿಗೆ ಒಂದು ವರ್ಷ. ಕಳೆದ ವರ್ಷ ಇದೇ ದಿನ ಲಷ್ಕರ್-ಎ-ತೈಬಾದ  ಭಯೋತ್ಪಾದಕರು ಓರ್ವ ಸ್ಥಳೀಯ ವ್ಯಕ್ತಿ ಸೇರಿದಂತೆ 26 ಮಂದಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಈ ಬಳಿಕ ಜಿಲ್ಲೆಯಾದ್ಯಂತ ಪ್ರವಾಸಿ ತಾಣಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.

ರಾಜ್ಯದ ಆರ್ಥಿಕತೆಯ ಜೀವನಾಡಿಯಾಗಿದ್ದ ಪ್ರವಾಸೋದ್ಯಮದ ಮೇಲೆ ಈ ದಾಳಿ ಭಾರಿ ಪರಿಣಾಮವನ್ನು ಬೀರಿತ್ತು. ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ 2025ರ ಏಪ್ರಿಲ್ 22ರಂದು ಪ್ರವಾಸಿಗರ ಮೇಲೆ ಭಯೋತ್ಪಾದಕ ದಾಳಿ ನಡೆದ ಬಳಿಕ ಪ್ರವಾಸಿಗರ ಆಗಮನ ಅಪಾರ ಪ್ರಮಾಣದಲ್ಲಿ ಕುಸಿದಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರಾಡಳಿತ ಪ್ರದೇಶದಾದ್ಯಂತ ಧಾರ್ಮಿಕ ಕೇಂದ್ರಗಳು, ಪ್ರವಾಸಿ ತಾಣಗಳು, ಪ್ರಮುಖ ಸ್ಥಾಪನಾ ಸ್ಥಳಗಳಲ್ಲಿ ಸಮಗ್ರ ಭದ್ರತೆಗೆ ಕ್ರಮ ಕೈಗೊಳ್ಳಲಾಗಿದೆ.

ಇದನ್ನೂ ಓದಿ: ಕೈಕಾಲು ಮಂಚಕ್ಕೆ ಕಟ್ಟಿ, ಸೀಮೆಎಣ್ಣೆ ಸುರಿದು ಸುಟ್ಟೆ – ಪೊಲೀಸರ ಮುಂದೆ ತಪ್ಪೊಪ್ಪಿಕೊಂಡ ಪ್ರೇಯಸಿ

  ಭಯೋತ್ಪಾದಕ ದಾಳಿಯ ಬಲಿಯಾದ ಮುಗ್ಧ ಜೀವಗಳನ್ನು ಪ್ರಧಾನಿ ನರೇಂದ್ರ ಮೋದಿ ಸ್ಮರಿಸಿದ್ದಾರೆ. ಸಂತ್ರಸ್ತ ಕುಟುಂಬಗಳ ನೋವಿನಲ್ಲಿ ಇಡೀ ದೇಶವೇ ಭಾಗಿಯಾಗಿದೆ ಎಂದು ಅವರು ಹೇಳಿದ್ದಾರೆ.

ತಮ್ಮ ಅಧಿಕೃತ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಈ ಬಗ್ಗೆ ಹಂಚಿಕೊಂಡಿರುವ ಪ್ರಧಾನಿ, ಕಳೆದ ವರ್ಷ ಈ ದಿನದಂದು ನಡೆದ ಭೀಕರ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಬಲಿಯಾದ ಮುಗ್ಧ ಜೀವಗಳನ್ನು ನೆನಪಿಸಿಕೊಳ್ಳುತ್ತಿದ್ದೇನೆ. ಅವರನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಈ ಅಪಾರ ನಷ್ಟವನ್ನು ನಿಭಾಯಿಸುತ್ತಿರುವ ದುಃಖಿತ ಕುಟುಂಬಗಳೊಂದಿಗೆ ನಾನು ಸದಾ ಇರುತ್ತೇನೆ ಎಂದು ಬರೆದಿದ್ದಾರೆ.

ದಾಳಿಯ ನೆನಪಿನೊಂದಿಗೆ, ಭಯೋತ್ಪಾದನೆಯನ್ನು ಪೋಷಿಸುವ ಶಕ್ತಿಗಳಿಗೆ ಪ್ರಧಾನಿ ಕಠಿಣ ಎಚ್ಚರಿಕೆಯನ್ನು ನೀಡಿದ್ದಾರೆ, ಒಂದು ರಾಷ್ಟ್ರವಾಗಿ, ನಾವು ದುಃಖ ಮತ್ತು ದೃಢಸಂಕಲ್ಪದಲ್ಲಿ ಒಗ್ಗಟ್ಟಿನಿಂದ ನಿಲ್ಲುತ್ತೇವೆ. ಭಾರತವು ಯಾವುದೇ ರೀತಿಯ ಭಯೋತ್ಪಾದನೆಗೆ ಎಂದಿಗೂ ತಲೆಬಾಗುವುದಿಲ್ಲ, ಎಂದು ಅವರು ಘೋಷಿಸಿದ್ದಾರೆ.

Kishor KV