ಮುಂಬೈಗೆ ವಿಜಯದ ತಿಲಕ! – GT ವಿರುದ್ದ 99 ರನ್‌ಗಳ ಭರ್ಜರಿ ಜಯ ಸಾಧಿಸಿದ MI

ಗುಜರಾತ್ ಜೈಂಟ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದಲ್ಲಿ MI ಭರ್ಜರಿ ಜಯ ಸಾಧಿಸಿದೆ. ತವರಿನಲ್ಲೇ ಗುಜರಾತ್ 99 ರನ್‌ಗಳಿಂದ ಸೋತಿದೆ.
ಟಾಸ್ ಸೋತು ಮೊದಲು ಬ್ಯಾಟ್ ಬೀಸಿದ ಮುಂಬೈ 5 ವಿಕೆಟ್ ನಷ್ಟಕ್ಕೆ 199 ರನ್ ಗಳಿಸಿತು. ಸವಾಲಿನ ಮೊತ್ತವನ್ನು ಬೆನ್ನಟ್ಟಿದ ಗುಜರಾತ್ 15.5 ಓವರ್‌ಗಳಲ್ಲಿ 100 ರನ್ ಗಳಿಸಿ ಆಲೌಟ್ ಆಯ್ತು.
ಗುಜರಾತ್ ಬುಮ್ರಾ ಎಸೆದ ಮೊದಲ ಓವರಿನ ಮೊದಲ ಎಸೆತದಲ್ಲೇ ವಿಕೆಟ್ ಕಳೆದುಕೊಂಡಿತು. ಸಾಯಿ ಸುದರ್ಶನ್ ಅವರು ಕ್ಯಾಚ್ ನೀಡಿ ಔಟಾದರು. ಈ ಮೂಲಕ ಈ ಐಪಿಎಲ್‌ನಲ್ಲಿ ಬುಮ್ರಾ ಮೊದಲ ವಿಕೆಟ್ ಪಡೆದರು.
ಬುಮ್ರಾ ಬೆನ್ನಲ್ಲೇ ಜೋಸ್ ಬಟ್ಲರ್ ಅವರನ್ನು ಪಾಂಡ್ಯ ಎಲ್‌ಬಿಗೆ ಕೆಡವಿದರು. ಇನ್ನಿಂಗ್ಸ್ ಕಟ್ಟಲು ಆರಂಭಿಸುತ್ತಿದ್ದಂತೆ ನಾಯಕ ಶುಭಮನ್ ಗಿಲ್ 14 ರನ್ ಗಳಿಸಿ ಅಶ್ವನಿ ಕುಮಾರ್‌ಗೆ ಔಟಾದರು.
ಗುಜರಾತ್ ಪರ ವಾಷಿಂಗ್ಟನ್ ಸುಂದರ್ 26 ರನ್(17 ಎಸೆತ, 5 ಬೌಂಡರಿ) ಮತ್ತು ಶಾರೂಖ್ ಖಾನ್ 17 ರನ್(13 ಎಸೆತ, 1 ಬೌಂಡರಿ, 1 ಸಿಕ್ಸ್) ಹೊಡೆದರು ಸ್ವಲ್ಪ ಪ್ರತಿರೋಧ ತೋರಿದರು. ಮುಂಬೈ ಪರ ಅಶ್ವನಿ ಕುಮಾರ್ 4 ವಿಕೆಟ್ ಪಡೆದರೆ ಮಿಚೆಲ್ ಸ್ಯಾಂಟ್ನರ್, ಗಜನ್‌ಫರ್ ತಲಾ 2 ವಿಕೆಟ್ ಕಿತ್ತರು. ಬುಮ್ರಾ, ಪಾಂಡ್ಯ ತಲಾ ಒಂದೊಂದು ವಿಕೆಟ್ ಪಡೆದರು.
ತಿಲಕ್ ಸ್ಫೋಟಕ ಶತಕ
ಮೊದಲು ಬ್ಯಾಟ್ ಮಾಡಿದ ಮುಂಬೈ 5.5 ಓವರ್‌ಗಳಲ್ಲಿ44 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿತ್ತು. ಈ ಸಂದರ್ಭದಲ್ಲಿ ತಿಲಕ್ ವರ್ಮಾ ಮತ್ತು ಹಾರ್ದಿಕ್ ಪಾಂಡ್ಯ 4ನೇ ವಿಕೆಟಿಗೆ 37 ಎಸೆತಗಳಲ್ಲಿ 81 ರನ್ ಜೊತೆಯಾಟವಾಡಿದರು. ಈ ಆಟದಲ್ಲಿ ತಿಲಕ್ ವರ್ಮಾ 22 ಎಸೆತಗಳಲ್ಲಿ 64 ರನ್ ಹೊಡೆದರೆ ಪಾಂಡ್ಯ 16 ಎಸೆತಗಳಲ್ಲಿ 15 ರನ್ ಹೊಡೆದು ಔಟಾದರು.
ಕೊನೆಯಲ್ಲಿ ತಿಲಕ್ ವರ್ಮಾ 5 ಎಸೆತಗಳಲ್ಲಿ 21 ರನ್ ಹೊಡೆದು ಐಪಿಎಲ್‌ನ ಚೊಚ್ಚಲ ಶತಕ ಹೊಡೆದರು. 33 ಎಸೆತಗಳಲ್ಲಿ ತಿಲಕ್ ಫಿಫ್ಟಿ ಹೊಡೆದರೆ ನಂತರದ 13 ಎಸೆತಗಳಲ್ಲಿ ಶತಕ ಹೊಡೆದಿದ್ದರು. ಅಂತಿಮವಾಗಿ ತಿಲಕ್ ವರ್ಮಾ ಔಟಾಗದೇ 101 ರನ್(45 ಎಸೆತ, 8 ಬೌಂಡರಿ, 7 ಸಿಕ್ಸ್) ಹೊಡೆದು ಮುಂಬೈ ಜಯದಲ್ಲಿ ಪ್ರಧಾನ ಪಾತ್ರವಹಿಸಿದರು.
ಇನ್ನು ಕೋಲ್ಕತ್ತಾ ವಿರುದ್ಧ ಗೆದ್ದ ಬಳಿಕ ಮುಂಬೈ ಸತತ ನಾಲ್ಕು ಸೋಲುಗಳನ್ನು ಕಂಡು ಅಂಕ ಪಟ್ಟಿಯಲ್ಲಿ 10ನೇ ಸ್ಥಾನಕ್ಕೆ ಜಾರಿತ್ತು. ಈಗ ಅತ್ಯುತ್ತಮ 0.067 ನೆಟ್ ರನ್‌ರೇಟ್‌ನೊಂದಿಗೆ ಜಯ ಸಾಧಿಸುವ ಮೂಲಕ 7ನೇ ಸ್ಥಾನಕ್ಕೆ ಜಿಗಿದಿದೆ. ಗುಜರಾತ್ 6ನೇ ಸ್ಥಾನದಲ್ಲೇ ಮುಂದುವರಿದಿದೆ.

ನೋಡಿರಿ

