ಬೆಂಗಳೂರಿನ ಜಲಮಂಡಳಿಯಿಂದ ಕಸದಿಂದ ರಸ – ತ್ಯಾಜ್ಯ ನೀರಿನಿಂದ ಕಂಪ್ರೆಸ್ಡ್ ಬಯೋಗ್ಯಾಸ್ ತಯಾರಿ

ಬೆಂಗಳೂರಿನ ಜಲಮಂಡಳಿಯಿಂದ ಕಸದಿಂದ ರಸ –  ತ್ಯಾಜ್ಯ ನೀರಿನಿಂದ ಕಂಪ್ರೆಸ್ಡ್ ಬಯೋಗ್ಯಾಸ್ ತಯಾರಿ

ಸಿಲಿಕಾನ್ ಸಿಟಿ ಬೆಂಗಳೂರಿನ  ತ್ಯಾಜ್ಯ ನೀರು ಇನ್ನು ಮುಂದೆ ಕೇವಲ ಕೊಳಚೆಯಾಗಿ ಉಳಿಯುವುದಿಲ್ಲ, ಬದಲಿಗೆ ಜಲಮಂಡಳಿಯ ಪಾಲಿಗೆ ಆದಾಯದ ಮೂಲವಾಗಲಿದೆ. ಬೆಂಗಳೂರು ಜಲಮಂಡಳಿಯು  ತನ್ನ ಐದು ಬೃಹತ್ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳಿಂದ  ಹೊರಬರುವ ಜೈವಿಕ ಅನಿಲವನ್ನು   ಕಂಪ್ರೆಸ್ಡ್ ಬಯೋಗ್ಯಾಸ್   ಆಗಿ ಪರಿವರ್ತಿಸಿ ಮಾರಾಟ ಮಾಡಲು ಮುಂದಾಗಿದೆ. ಈ ಮೂಲಕ ಮುಂದಿನ 20 ವರ್ಷಗಳಲ್ಲಿ ಬರೋಬ್ಬರಿ 120 ಕೋಟಿ ರೂಪಾಯಿ ಹೆಚ್ಚುವರಿ ಆದಾಯ ಗಳಿಸುವ ಗುರಿ ಹೊಂದಿದೆ.

ಮಹತ್ವಾಕಾಂಕ್ಷೆಯ ಯೋಜನೆಗೆ ರಾಜ್ಯ ಸಚಿವ ಸಂಪುಟ ಈಗಾಗಲೇ ಅನುಮೋದನೆ ನೀಡಿದೆ. ಸಾರ್ವಜನಿಕ-ಖಾಸಗಿ ಸಹಭಾಗಿತ್ವದ (PPP) ಮಾದರಿಯಲ್ಲಿ ಈ ಯೋಜನೆ ಜಾರಿಯಾಗಲಿದ್ದು, ಖಾಸಗಿ ಸಂಸ್ಥೆಯು 85 ಕೋಟಿ ರೂ. ವೆಚ್ಚ ಮಾಡಲಿದೆ. ಸೂರತ್‌ನಂತಹ ನಗರಗಳಲ್ಲಿ ಇಂತಹ ಪ್ರಯತ್ನಗಳು ನಡೆದಿದ್ದರೂ, ಬೆಂಗಳೂರಿನ ಯೋಜನೆ ಅತ್ಯಂತ ದೊಡ್ಡದಾಗಿದೆ. ಇಲ್ಲಿ ಭವಿಷ್ಯದಲ್ಲಿ ಪ್ರತಿದಿನ 550 ಎಂಎಲ್‌ಡಿ (MLD) ತ್ಯಾಜ್ಯ ನೀರನ್ನು ಬಳಸಿಕೊಂಡು ಇಂಧನ ತಯಾರಿಸಲಾಗುತ್ತದೆ.

ಇದನ್ನೂ ಓದಿ: ಸೋಲಿಲ್ಲದ ಸರದಾರ PBKS – ಪಂಜಾಬ್ ಲಕ್ಕಿ ಚಾರ್ಮ್ ಶ್ರೇಯಸ್

ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಮಾರ್ಗದರ್ಶನದಲ್ಲಿ ‘ತ್ಯಾಜ್ಯದಿಂದ ಸಂಪತ್ತು’ ಎಂಬ ಆಶಯದಡಿ ಈ ಯೋಜನೆ ರೂಪಿಸಲಾಗಿದೆ ಎಂದು ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ. ಇಲ್ಲಿ ತಯಾರಾಗುವ ಗ್ಯಾಸ್ ಅನ್ನು ಸಾರಿಗೆ ಇಂಧನವಾಗಿ ಅಥವಾ ಗ್ಯಾಸ್ ವಿತರಣಾ ಜಾಲಕ್ಕೆ ನೀಡಲಾಗುವುದು ಎಂದು ಅವರು ಹೇಳೀದ್ದಾರೆ.

ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನಲ್ಲಿ ವಾಣಿಜ್ಯ ಬಳಕೆಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಕೊರತೆ ಮತ್ತು ಬೆಲೆ ಏರಿಕೆ ಹೋಟೆಲ್ ಉದ್ಯಮಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಗ್ಯಾಸ್ ದರ ಏರಿಕೆಯಿಂದಾಗಿ ಹೋಟೆಲ್ ಮಾಲೀಕರು ಗ್ರಾಹಕರ ಮೇಲೆ ಆರ್ಥಿಕ ಹೊರೆ ಹೇರಲು ಸಾಧ್ಯವಾಗದೆ ಸಂಕಷ್ಟಕ್ಕೆ ಸಿಲುಕಿದ್ದರು. ಈ ಸಮಸ್ಯೆಗೆ ಸೆಡ್ಡು ಹೊಡೆಯಲು ಬೆಂಗಳೂರಿನ ಹೋಟೆಲ್ ಮಾಲೀಕರು ವಿಭಿನ್ನ ಹಾದಿ ಹಿಡಿದಿರುವ ಬಗ್ಗೆ ಕೆಲವು ದಿನಗಳ ಹಿಂದೆ ವರದಿಯಾಗಿತ್ತು. ಹೋಟೆಲ್‌ಗಳಲ್ಲಿ ಉತ್ಪತ್ತಿಯಾಗುವ ಆಹಾರದ ತ್ಯಾಜ್ಯ ಮತ್ತು ಕಸವನ್ನು ನೀಡಿ, ಬದಲಿಗೆ ಅಡುಗೆಗೆ ಬಳಸಬಹುದಾದ ಬಯೋಗ್ಯಾಸ್ ಪಡೆಯುವ ನವೀನ ಮಾದರಿಯನ್ನು ಹೋಟೆಲ್‌ಗಳು ಅಳವಡಿಸಿಕೊಳ್ಳುತ್ತಿ ಎಂದು ಮೂಲಗಳು ತಿಳಿಸಿದ್ದವು.

Kishor KV