ಪ್ರಿಯಾಂಕಾ ಗಾಂಧಿಯನ್ನ ನೋಡಿ ಕಲಿಯಿರಿ – ರಾಹುಲ್‌ ಗಾಂಧಿ ವಿರುದ್ಧ ಅಮಿಶ್ ಶಾ ವಾಗ್ದಾಳಿ

ಪ್ರಿಯಾಂಕಾ ಗಾಂಧಿಯನ್ನ ನೋಡಿ ಕಲಿಯಿರಿ –  ರಾಹುಲ್‌ ಗಾಂಧಿ ವಿರುದ್ಧ ಅಮಿಶ್  ಶಾ  ವಾಗ್ದಾಳಿ

ಲೋಕಸಭೆಯಲ್ಲಿ ಶುಕ್ರವಾರ ನಡೆದ ಚರ್ಚೆಯ ವೇಳೆ ಗೃಹ ಸಚಿವ ಅಮಿತ್ ಶಾ  ಅವರು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ  ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸಂಸತ್ತಿನಲ್ಲಿ ಮಾತನಾಡುವ ಕಲೆಯನ್ನು ತಮ್ಮ ಹಿರಿಯರಿಂದ, ಕನಿಷ್ಠ ಪಕ್ಷ ಸಹೋದರಿ ಪ್ರಿಯಾಂಕಾ ಗಾಂಧಿಯವರಿಂದಲಾದರೂ ಕಲಿತುಕೊಳ್ಳಿ ಎಂದು ಶಾ ಅವರು ವ್ಯಂಗ್ಯವಾಡಿದ್ದಾರೆ.

ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಮರುವಿಂಗಡಣೆ ಮಸೂದೆಯ ಮೇಲಿನ ಚರ್ಚೆಗೆ ಉತ್ತರಿಸುತ್ತಾ ಮಾತನಾಡಿದ ಅಮಿತ್ ಶಾ, ರಾಹುಲ್ ಗಾಂಧಿ ಅವರ ಇತ್ತೀಚಿನ ಭಾಷಣದ ಧಾಟಿಯನ್ನು ಟೀಕಿಸಿದರು. “ಸಂಸತ್ತಿನ ಘನತೆಯನ್ನು ದೇಶ ಮತ್ತು ಪ್ರಪಂಚದಾದ್ಯಂತ ಎತ್ತಿಹಿಡಿಯುವುದು ನಿಮ್ಮ ಜವಾಬ್ದಾರಿ. ‘ನೀವು ಹೇಡಿಗಳು, ನೀವು ಶರಣಾಗುತ್ತಿದ್ದೀರಿ, ನಿಮಗೆ ನನ್ನ ಕಂಡರೆ ಭಯ’ ಎಂಬಂತಹ ಭಾಷೆ ಬಳಸುವುದು ವಿರೋಧ ಪಕ್ಷದ ನಾಯಕನಿಗೆ ಶೋಭಿಸುವುದಿಲ್ಲ. ಇಡೀ ದೇಶ ನಿಮ್ಮನ್ನು ಮತ್ತು ನಿಮ್ಮ ಪಕ್ಷವನ್ನು ಗಮನಿಸುತ್ತಿದೆ” ಎಂದು ಶಾ ಹೇಳಿದರು.

ಇದನ್ನೂ ಓದಿ: ಆಫ್ರಿಕಾದಿಂದ ಸಿಲಿಕಾನ್‌ ಸಿಟಿಗೆ  ಹೊಸ ಅತಿಥಿಗಳ ಎಂಟ್ರಿ! – ಬನ್ನೇರುಘಟ್ಟ ಮೃಗಾಲಯಕ್ಕೆ ಗಂಡು, ಹೆಣ್ಣು ಚೀತಾ

ಇದೇ ವೇಳೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಭಾಷಣವನ್ನು ಅಮಿತ್ ಶಾ ಉಲ್ಲೇಖಿಸಿದರು. ಚರ್ಚೆಯಲ್ಲಿ ಭಾಗವಹಿಸಿದ್ದ ಪ್ರಿಯಾಂಕಾ, ಬಿಜೆಪಿಯ ರಾಜಕೀಯ ತಂತ್ರಗಾರಿಕೆಯನ್ನು ಚಾಣಕ್ಯನಿಗೆ ಹೋಲಿಸಿ ಚುಚ್ಚಿದ್ದರು. ಪ್ರಿಯಾಂಕಾ ಅವರ ವಾಕ್ಚತುರ್ಯವನ್ನು ಗಮನಿಸಿದ ಶಾ, “ನಿಮಗೆ ಯಾರೂ ಹಿರಿಯರು ಇಲ್ಲದಿದ್ದರೆ ಪ್ರಿಯಾಂಕಾ ಅವರನ್ನೇ ಹಿರಿಯರೆಂದು ಪರಿಗಣಿಸಿ ಅವರಿಂದ ಸಂಸದೀಯ ಭಾಷೆಯನ್ನು ಕಲಿಯಿರಿ” ಎಂದರು. ರಾಹುಲ್ ಗಾಂಧಿ ಕೂಡ ಹಾಸ್ಯಮಯವಾಗಿ ಪ್ರತಿಕ್ರಿಯಿಸಿ, “ನಾನು ಕಳೆದ 20 ವರ್ಷಗಳಲ್ಲಿ ಮಾಡಲಾಗದ ಕೆಲಸವನ್ನು ನನ್ನ ಸಹೋದರಿ ಐದು ನಿಮಿಷಗಳಲ್ಲಿ ಮಾಡಿದ್ದಾರೆ, ಅಮಿತ್ ಶಾ ಅವರ ಮುಖದಲ್ಲಿ ನಗು ತರಿಸಿದ್ದಾರೆ” ಎಂದು ಲಘು ದಾಟಿಯಲ್ಲಿ ಹೇಳಿದರು.

ಮತ್ತೊಂದೆಡೆ, 2029ರ ವೇಳೆಗೆ ಶೇ. 33ರಷ್ಟು ಮಹಿಳಾ ಮೀಸಲಾತಿ ಜಾರಿಗೆ ತರುವ ಸಂವಿಧಾನ ತಿದ್ದುಪಡಿ ಮಸೂದೆಯು ಲೋಕಸಭೆಯಲ್ಲಿ ಸೋಲನ್ನಪ್ಪಿದೆ. ಮಸೂದೆಯ ಪರವಾಗಿ 298 ಮತ್ತು ವಿರುದ್ಧವಾಗಿ 230 ಮತಗಳು ಬಿದ್ದವು. ಸಂವಿಧಾನ ತಿದ್ದುಪಡಿಗೆ ಅಗತ್ಯವಿರುವ ಮೂರನೇ ಎರಡರಷ್ಟು ಬಹುಮತ (ಕನಿಷ್ಠ 352 ಮತಗಳು) ಸಿಗದ ಕಾರಣ ಈ ಪ್ರಮುಖ ಮಸೂದೆ ಅಂಗೀಕಾರಗೊಳ್ಳಲಿಲ್ಲ. ಲೋಕಸಭೆಯ ಸ್ಥಾನಗಳನ್ನು 543 ರಿಂದ 850 ಕ್ಕೆ ಹೆಚ್ಚಿಸುವ ಪ್ರಸ್ತಾವನೆಯೂ ಈ ಮಸೂದೆಯ ಭಾಗವಾಗಿತ್ತು. ಸದ್ಯ ಈ ವಿಚಾರ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ನಾಂದಿ ಹಾಡಿದೆ.

Kishor KV