ಕಾಡಾನೆ ಸೆರೆ ಕಾರ್ಯಾಚರಣೆ ಕಡೆಗೂ ಸಕ್ಸಸ್! – ಹಾಸನ ಜನರ ನಿದ್ದೆಗೆಡಿಸಿದ್ದ ನರಹಂತಕ ಸೆರೆ!

ಕಾಡಾನೆ ಸೆರೆ ಕಾರ್ಯಾಚರಣೆ ಕಡೆಗೂ ಸಕ್ಸಸ್! – ಹಾಸನ ಜನರ ನಿದ್ದೆಗೆಡಿಸಿದ್ದ ನರಹಂತಕ ಸೆರೆ!

ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಾವನ ಹಾಗೂ ಕಾಡು ಪ್ರಾಣಿಗಳ ನಡುವಿನ ಸಂಘರ್ಷ ಹೆಚ್ಚಾಗುತ್ತಿದೆ. ಕಾಡಿನಿಂದ ನಾಡಿಗೆ ಬರುತ್ತಿರುವ ಕಾಡಾನೆಗಳು ಬೆಳೆಗಳಿಗೆ ಸಾಕಷ್ಟು ಹಾನಿ ಮಾಡುತ್ತಿವೆ. ಇದ ಜೊತೆಗೆ  ಕೃಷಿಕರ ಮೇಲೂ ದಾಳಿ ನಡೆಸುತ್ತಿವೆ. ಈಗಾಗಲೇ ಸಾಕಷ್ಟು ಮಂದಿ ಕಾಡಾನೆ ದಾಳಿಗೆ ಬಲಿಯಾಗಿದ್ದಾರೆ. ಇದೀಗ ಹಾಸನದಲ್ಲಿ ಕೃಷಿಕರ ನಿದ್ದೆಗೆಡಿಸಿದ್ದ ದೈತ್ಯಾಕಾರದ ನರಹಂತಕ ಕಾಡಾನೆಯನ್ನು ಸೆರೆ ಹಿಡಿಯಲಾಗಿದೆ.

ಇದನ್ನೂ ಓದಿ: ಆಫ್ರಿಕಾದಿಂದ ಸಿಲಿಕಾನ್‌ ಸಿಟಿಗೆ  ಹೊಸ ಅತಿಥಿಗಳ ಎಂಟ್ರಿ! – ಬನ್ನೇರುಘಟ್ಟ ಮೃಗಾಲಯಕ್ಕೆ ಗಂಡು, ಹೆಣ್ಣು ಚೀತಾ

ಹಾಸನದ ಬೇಲೂರು ತಾಲೂಕಿನ ಕಾನಳ್ಳಿ ಕಣಗುಪ್ಪೆ ಗ್ರಾಮದ  ರೈತ ರಾಜಶೆಟ್ಟಿ ಎಂಬುವವರನ್ನು  ಏಪ್ರಿಲ್​ 12ರಂದು ಕಾಡಾನೆ ಬಲಿ ಪಡೆದಿತ್ತು. ಈ ಬೆನ್ನಲ್ಲೇ ಒಂಟಿ ಸಲಗವನ್ನ ಸೆರೆಹಿಡಿಯುವಂತೆ ಜನರು ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರು. ಹೀಗಾಗಿ ಕೊಡಗಿನ ಸಾಕಾನೆ ಶಿಬಿರಗಳಿಂದ ಆರು ಸಾಕಾನೆಗಳನ್ನ ಕರೆತಂದು ಬೇಲೂರು ತಾಲ್ಲೂಕಿನ ಕಿತ್ತಾವರ ಗ್ರಾಮದ ಕಾಫಿತೋಟದಲ್ಲಿ ಅಡಗಿದ್ದ ಸಲಗವನ್ನ ಸೆರೆಹಿಡಿಯಲು ಅರಣ್ಯ ಇಲಾಖೆ  ಕಳೆದ ಮೂರು ದಿನಗಳಿಂದ ಕಾರ್ಯಾಚರಣೆ ನಡೆಸಿತ್ತು. ಇದೀಗ ಕಡೆಗೂ ನರಹಂತಕ ಕಾಡಾನೆಯನ್ನು  ಅರಣ್ಯ ಇಲಾಖೆ ಸಿಬ್ಬಂದಿ ಸೆರೆಹಿಡಿದಿದ್ದಾರೆ.

ಇಂದು (ಏ.18) ಮೂರನೇ ದಿನದ ಕಾರ್ಯಾಚರಣೆ ಆರಂಭಿಸಿದ್ದ ಇಟಿಎಫ್ ಸಿಬ್ಬಂದಿ ಮುಂಜಾನೆಯೇ ಕಾಡಾನೆ ಇರುವ ಸ್ಥಳವನ್ನು ಪತ್ತೆ ಮಾಡಿದ್ದರು. ದೈತ್ಯಾಕಾರದ ಕಾಡಾನೆ ಜೊತೆ ಕ್ಯಾಪ್ಟನ್ ಕಾಡಾನೆ ಸಹ ಇತ್ತು. ಈ ವೇಳೆ ಕುಮ್ಕಿ ಆನೆಗಳೊಂದಿಗೆ ತೆರಳಿ ನರಹಂತಕ ಕಾಡಾನೆಗೆ ಅರವಳಿಕೆ ಚುಚ್ಚುಮದ್ದು ನೀಡಲಾಯಿತು.

ಚುಚ್ಚುಮದ್ದು ನೀಡುತ್ತಿದ್ದಂತೆ ನರಹಂತಕ ಒಂಟಿಕೋರೆ ಕಾಡಾನೆ ಹಾಗೂ ಕ್ಯಾಪ್ಟನ್ ಕಾಡಾನೆ ಜೊತೆಯಲ್ಲಿಯೇ ಓಡಲಾರಂಭಿಸಿದ್ದವು. ಬೆನ್ನಟ್ಟಿದ ಕಾರ್ಯಾಚರಣೆ ತಂಡ ಎರಡು ಕಾಡಾನೆಗಳನ್ನು ಬೇರ್ಪಡಿಸಿತು. ಸ್ವಲ್ಪ ದೂರುಓಡಿ ಪ್ರಜ್ಞೆತಪ್ಪಿ ಬಿದ್ದ ಕಾಡಾನೆಯನ್ನು, ಕುಮ್ಕಿ ಆನೆಗಳು ಸುತ್ತುವರಿದವು. ಬಳಿಕ ಕಾಡಾನೆಗೆ ನೀರು ಹಾಕಿ ಆರೈಕೆ ಮಾಡಿ ಹಗ್ಗದಲ್ಲಿ ಕಟ್ಟಿದ್ದಾರೆ. ಕಾಡಾನೆಯನ್ನು ಸ್ಥಳಾಂತರ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ನರಹಂತಕ ಕಾಡಾನೆ ಸೆರೆಯಿಂದ ಬೇಲೂರು ಭಾಗದ ಜನರು ನಿಟ್ಟುಸಿರು ಬಿಟ್ಟಿದ್ದಾರೆ.

Shwetha M