ರಾಜ್ಯದಲ್ಲಿ ಅಕಾಲಿಕ ಮಳೆ ಎಫೆಕ್ಟ್ – ಗಂಗಾವತಿಯಲ್ಲಿ ಸಿಡಿಲು ಬಡಿದು ರೈತ ಸಾವು

ಶುಕ್ರವಾರ ಮಧ್ಯರಾತ್ರಿ ಸುರಿದ ಅಕಾಲಿಕ ಮಳೆಗೆ ಕೊಪ್ಪಳ ಜಿಲ್ಲೆಯ ಗಂಗಾವತಿಯ ಜಬ್ಬಲಗುಡ್ಡದಲ್ಲಿ ಓರ್ವ ರೈತ ಸಿಡಿಲು ಬಡಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮೃತಪಟ್ಟ ರೈತನನ್ನು ಕರಿಯಪ್ಪ ದ್ಯಾವಣ್ಣ ಮ್ಯಾದನೇರಿ (36) ಎಂದು ಗುರುತಿಸಲಾಗಿದೆ. ರಾತ್ರಿ ಮಳೆ ಆರಂಭವಾಗಿದ್ದು, ಹೊಲದಲ್ಲಿ ರಾಶಿ ಮಾಡಿದ್ದ ಭತ್ತದ ಕಣಜ ಹಾಳಾಗದಿರಲೆಂದು ಅದರ ಮೇಲೆ ಹೊದಿಕೆ ಹಾಕಲು ಹೋದ ಸಂದರ್ಭದಲ್ಲಿ ಸಿಡಿಲು ಬಡಿದಿದೆ. ಕರಿಯಪ್ಪ ಅವರಿಗೆ ಪತ್ನಿ ದುರುಗಮ್ಮ, ಆರು ತಿಂಗಳ ಹಸುಗೂಸು ಸೇರಿದಂತೆ ಮೂವರು ಮಕ್ಕಳಿದ್ದಾರೆ.
ಸಿಡಿಲು ಬಡಿದು ಆರು ಆಕಳು ಸಾವು:
ಹಾಗೇ ಗಂಗಾವತಿ ತಾಲೂಕಿನ ಸಿದ್ದಿಕೇರಿಯಲ್ಲಿ ಕುರಿಹಟ್ಟಿಯ ಮೇಲೆ ಸಿಡಿಲು ಬಡಿದು ಆರು ಆಕಳು ಸಾವನ್ನಪ್ಪಿವೆ. ಅಲೆಮಾರಿ ಜನಾಂಗಕ್ಕೆ ಸೇರಿದ ಕುಟುಂಬಗಳು ಕುರಿ ಮತ್ತು ಆಕಳುಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಮೇಯಲು ಕರೆದುಕೊಂಡು ಹೋಗುತ್ತವೆ. ಕನಕಗಿರಿ ತಾಲೂಕಿನ ಬಂಕಾಪುರಕ್ಕೆ ಸೇರಿದ ಪಾರ್ವತಮ್ಮ ಸಣ್ಣ ಯಂಕಪ್ಪ ಬಂಡೇರ, ನಾಗೇಶ ಸಣ್ಣ ತಿಮಪ್ಪ ಬಂಡೇರ ಅವರಿಗೆ ಸೇರಿದ ತಲಾ ಮೂರು ಆಕಳು ಸಾವನ್ನಪ್ಪಿವೆ. ಅಂದಾಜು 3.50 ಲಕ್ಷ ರೂ ಹಾನಿಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟ
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಕಳೆದ ರಾತ್ರಿ ಸುರಿದ ಭಾರೀ ಮಳೆ ಜನಜೀವನವನ್ನು ಸಂಪೂರ್ಣ ಅಸ್ತವ್ಯಸ್ತಗೊಳಿಸಿದೆ. ಧಾರಾಕಾರ ಮಳೆ ಹಾಗೂ ಬಿರುಸಿನ ಗಾಳಿಗೆ 60ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗುರುಳಿವೆ. ಮೂಡಿಗೆರೆ ಪಟ್ಟಣ ಹೊರತುಪಡಿಸಿ ಬಹುತೇಕ ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಸಂಪೂರ್ಣ ಕಡಿತಗೊಂಡಿತು.
ಗಾಳಿ, ಮಳೆಯ ಅಬ್ಬರಕ್ಕೆ ನೂರಾರು ಮರಗಳು ನೆಲಸಮವಾಗಿದ್ದು, ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಯಿತು. ಬಣಕಲ್-ಮತ್ತಿಕಟ್ಟೆ ಮಾರ್ಗದಲ್ಲಿ ಅನೇಕ ಮರಗಳು ಮತ್ತು ವಿದ್ಯುತ್ ಕಂಬಗಳು ರಸ್ತೆಗೆ ಬಿದ್ದು, ಸಂಪರ್ಕ ಸ್ಥಗಿತಗೊಂಡಿತು. ವಿದ್ಯುತ್ ಕಂಬಗಳು ಹಾಗೂ ಮರಗಳನ್ನು ತೆರವುಗೊಳಿಸಲು ಸ್ಥಳೀಯರು ಹರಸಾಹಸಪಟ್ಟಿದ್ದಾರೆ. ರಸ್ತೆ ಸಂಪರ್ಕ ಇಲ್ಲದ ಕಾರಣ ಯಂತ್ರೋಪಕರಣಗಳು ತಲುಪದೆ ಸ್ಥಳೀಯರೇ ಸ್ವಯಂ ಕಾರ್ಯಾಚರಣೆಗೆ ಮುಂದಾಗಿದ್ದರು.

ನೋಡಿರಿ

