ದೆಹಲಿ ವಿಮಾನ ನಿಲ್ದಾಣದಲ್ಲಿ ದುರಂತ – ಆಕಾಸ-ಸ್ಪೈಸ್ಜೆಟ್ ವಿಮಾನಗಳು ಪರಸ್ಪರ ಡಿಕ್ಕಿ

ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದುರಂತವೊಂದು ನಡೆದಿದ್ದು, ಆಕಾಸ-ಸ್ಪೈಸ್ಜೆಟ್ ವಿಮಾನಗಳು ಪರಸ್ಪರ ಡಿಕ್ಕಿ ಹೊಡೆದಿವೆ. ಅದೃಷ್ಟವಶಾತ್ ಯಾವುದೇ ಹಾನಿ ಸಂಭವಿಸಿಲ್ಲ. ಘಟನೆಯಲ್ಲಿ ಎರಡೂ ವಿಮಾನದ ರೆಕ್ಕೆಗಳಿಗೆ ಹಾನಿಯಾಗಿದೆ ಎಂದು ಮೂಲಗಳು ತಿಳಿಸಿವೆ. ಸ್ಪೈಸ್ಜೆಟ್ ಬಿ737-700 ವಿಮಾನದ ಬಲ ರೆಕ್ಕೆ ಭಾಗಕ್ಕೆ ಹಾನಿಯಾದರೆ, ಅಕಾಸ ಏರ್ ವಿಮಾನದ ಎಡ ಭಾಗಕ್ಕೆ ಹಾನಿಗೊಳಗಾಗಿದೆ. ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ತನಿಖೆಗೆ ಆದೇಶಿಸಲಾಗಿದೆ.
ಇದನ್ನೂ ಓದಿ: ಲಕ್ನೋದಲ್ಲಿ 100ಕ್ಕೂ ಹೆಚ್ಚು ಗ್ಯಾಸ್ ಸಿಲಿಂಡರ್ ಸ್ಫೋಟ – 1,000ಕ್ಕೂ ಅಧಿಕ ಗುಡಿಸಲುಗಳು ಭಸ್ಮ
ಇದು ಸಣ್ಣ ಮಟ್ಟದ ಡಿಕ್ಕಿಯಾಗಿದ್ದು, ಯಾರಿಗೂ ಗಾಯವಾಗಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮಧ್ಯಾಹ್ನ ಸುಮಾರು 2 ಗಂಟೆ ವೇಳೆಗೆ ಈ ಅಪಘಾತ ಸಂಭವಿಸಿದೆ. ಘಟನೆ ವೇಳೆ ಲೇಹ್ನಿಂದ ಆಗಮಿಸಿದ ಸ್ಪೈಸ್ಜೆಟ್ ವಿಮಾನ ರನ್ವೇಯಿಂದ ಪಾರ್ಕಿಂಗ್ ಬೇ ಕಡೆಗೆ ಸಾಗುತ್ತಿತ್ತು. ಇದೇ ವೇಳೆ ಹೈದರಾಬಾದ್ಗೆ ಹೊರಡಲು ಸಿದ್ಧವಾಗುತ್ತಿದ್ದ ಆಕಾಸ ಏರ್ ಸಂಸ್ಥೆಯ ವಿಮಾನಕ್ಕೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಡಿಕ್ಕಿಯ ತೀವ್ರತೆ ಕಡಿಮೆ ಇದ್ದುದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ.
“ಘಟನೆಯ ಬಳಿಕ ಎಲ್ಲ ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಸುರಕ್ಷಿತವಾಗಿ ಕೆಳಗೆ ಇಳಿಸಲಾಯಿತು. ನಮ್ಮ ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ ಮಾಡಲಾಗುತ್ತಿದೆ. ಅವರನ್ನು ಆದಷ್ಟು ಬೇಗ ಹೈದರಾಬಾದ್ಗೆ ಕರೆದೊಯ್ಯಲು ಕಾರ್ಯ ಪ್ರವೃತ್ತರಾಗಿದ್ದೇವೆ” ಎಂದು ಆಕಾಸ ಏರ್ ಸಂಸ್ಥೆಯ ವಕ್ತಾರರು ಹೇಳಿದ್ದಾರೆ. ಪ್ರಯಾಣಿಕರ ಸುರಕ್ಷತೆ ತನ್ನ ಪ್ರಮುಖ ಆದ್ಯತೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.

ನೋಡಿರಿ

