ಪಾಠ ಕೇಳಲು ಶಾಲೆಗೆ ಬಂದ ಬಾಲಕನಿಗೆ ಇದೆಂಥಾ ಶಿಕ್ಷೆ! – ಟೀಚರ್‌ಗೆ ಗಾಳಿ ಬೀಸಿ ಸುಸ್ತಾದ ವಿದ್ಯಾರ್ಥಿ!

ಪಾಠ ಕೇಳಲು ಶಾಲೆಗೆ ಬಂದ ಬಾಲಕನಿಗೆ ಇದೆಂಥಾ ಶಿಕ್ಷೆ! – ಟೀಚರ್‌ಗೆ ಗಾಳಿ ಬೀಸಿ ಸುಸ್ತಾದ ವಿದ್ಯಾರ್ಥಿ!

ದೇಶದ ಹಲವು ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸ್ಥಿತಿ ಶೋಚನಿಯವಾಗಿದೆ. ಶಿಕ್ಷಕರು ಮಕ್ಕಳಿಗೆ ಪಾಠ ಮಾಡೋದು ಬಿಟ್ಟು ಅವರ ಪುಟ್ಟ ಕೈಗಳಲ್ಲಿ ತಮ್ಮೆಲ್ಲಾ ವೈಯಕ್ತಿಕ ಕೆಲಸಗಳನ್ನು ಮಾಡಿಸಿಕೊಳ್ಳುವಂತಹ ಹಲವು ಘಟನೆಗಳು ಈಗಾಗಲೇ ನಡೆದಿವೆ. ಕೆಲ ತಿಂಗಳ ಹಿಂದೆ ಶಿಕ್ಷಕಿಯೊಬ್ಬರು ಪುಟ್ಟ ಮಕ್ಕಳ ಕೈನಿಂದ ಮೈಗೆ ಮಸಾಜ್ ಮಾಡಿಸಿಕೊಳ್ಳುತ್ತಿರುವ ವೀಡಿಯೋವೊಂದು ಸಾಕಷ್ಟು ವೈರಲ್ ಆಗಿ ವಿವಾದಕ್ಕೆ ಕಾರಣವಾಗಿತ್ತು. ಬಳಿಕ ಆ ಶಿಕ್ಷಕಿಯನ್ನು ಸೇವೆಯಿಂದ ಅಮಾನತು ಮಾಡಲಾಗಿತ್ತು. ಇದೀಗ ಇಂತಹದ್ದೇ ಮತ್ತೊಂದು ಘಟನೆ ನಡೆದಿದೆ. ಸೆಕೆ ಇದೆ ಎಂದು ಶಿಕ್ಷಕಿ ವಿದ್ಯಾರ್ಥಿ ಕೈಯಲ್ಲಿ ಗಾಳಿ ಹಾಕಿಸಿಕೊಂಡಿದ್ದಾರೆ. ಇದೀಗ ಆ ಶಿಕ್ಷಕಿ ವಿರುದ್ದ ಆಕ್ರೋಶ ವ್ಯಕ್ತವಾಗಿದೆ.

ಇದನ್ನೂ ಓದಿ: ಯೋಗೇಶ್ ಗೌಡ ಕೊಲೆ ಪ್ರಕರಣ – 19 ಅಪರಾಧಿಗಳಿಗೆ ಶಿಕ್ಷೆ ನಾಳೆ ಪ್ರಕಟ!

ಮಧ್ಯಪ್ರದೇಶದ ರೇವಾ ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ ಈ ಘಟನೆ ನಡೆದಿದೆ. ಶಿಕ್ಷಕಿಯೊಬ್ಬರು ವಿದ್ಯಾರ್ಥಿ ಕೈಯಲ್ಲಿ ಗಾಳಿ ಹಾಕಿಸಿಕೊಳ್ಳುತ್ತಿರುವ ವೀಡಿಯೋವೊಂದು ವೈರಲ್ ಆಗಿದ್ದು, ವೀಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವೈರಲ್ ಆಗಿರುವ ವೀಡಿಯೋದಲ್ಲಿ ಬಾಲಕ ಸಣ್ಣ ಪೇಪರ್ ಬೀಸಣಿಕೆಯಿಂದ ಟೀಚರ್‌ಗೆ ಗಾಳಿಯಾಡಿಸುತ್ತಿದ್ದರೆ ಶಿಕ್ಷಕಿ ಕಿವಿಗೆ ಇಯರ್ ಫೋನ್ ಹಾಕಿಕೊಂಡು ಫೋನ್‌ನಲ್ಲಿ ಮಾತನಾಡುತ್ತಾ ಪುಸ್ತಕದಲ್ಲಿ ಏನೋ ಬರೆಯುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಇತ್ತ ಬಾಲಕ ಟೀಚರ್‌ಗೆ ಗಾಳಿ ಬೀಸಿ ಬೀಸಿ ಸುಸ್ತಾದ ಬಾಲಕ ಒಮ್ಮೆ ಎಡಗೈನಿಂದ ಮತ್ತೊಮ್ಮೆ ಬಲಗೈನಿಂದ ಗಾಳಿ ಬೀಸುತ್ತಾ ಸುಸ್ತಾದಂತೆ ಕಾಣುತ್ತಿದ್ದಾನೆ. ಈ ವೀಡಿಯೋ ಈಗ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಶಿಕ್ಷಕಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಇಂತಹ ಶಿಕ್ಷಕಿಯನ್ನು ಅಮಾನತು ಮಾಡಿ ಜನರಿಗೆ ಗಾಳಿ ಹಾಕುವ ಶಿಕ್ಷೆ ನೀಡಬೇಕು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.

Shwetha M