ಬಾಯ್‌ಫ್ರೆಂಡ್‌ಗೆ ಗಿಫ್ಟ್ ಕೊಡಲು ಕಳ್ಳತನಕ್ಕಿಳಿದ ಯುವತಿ! – 2 ಲಕ್ಷ ರೂ ವಾಚ್ ಕದ್ದು ಪೊಲೀಸರ ಅತಿಥಿಯಾದ್ಲು!

ಪ್ರೀತಿಯಲ್ಲಿ ಕುರುಡು.. ಪ್ರೇಮಕ್ಕೆ ಕಣ್ಣಿಲ್ಲ ಅನ್ನೋ ಮಾತಿದೆ. ಪ್ರೀತಿಗಾಗಿ ಏನು ಮಾಡಲು ಕೂಡ ರೆಡಿಯಿರುತ್ತಾರೆ. ಇದೀಗ ಇಲ್ಲೊಬ್ಬಳು ಬಾಯ್‌ಫ್ರೆಂಡ್‌ಗೆ ಗಿಫ್ಟ್ ಕೊಡಲು ಕಳ್ಳತನಕ್ಕೆ ಇಳಿದಿದ್ದಾಳೆ. ಪ್ರಿಯಕರನಿಗೆ ಉಡುಗೊರೆ ಕೊಡಲು ಹೋದಾಕೆ ಪೊಲೀಸರ ಅತಿಥಿ ಆಗಿದ್ದಾಳೆ.
ಇದನ್ನೂ ಓದಿ: ಕಾಂಗ್ರೆಸ್‌ನಲ್ಲಿ ಸಂಪುಟ ಪುನರ್ ರಚನೆಗೆ ಸರ್ಕಸ್ – ರಣದೀಪ್ ಸುರ್ಜೇವಾಲ ಭೇಟಿ ಮಾಡಿದ 12 ಶಾಸಕರು!
ಈ ವಿಲಕ್ಷಣಕಾರಿ ಘಟನೆ ಹೈದರಾಬಾದ್‌ನ ಜುಬಿಲಿ ಹಿಲ್ಸ್‌ನಲ್ಲಿ ನಡೆದಿದೆ. ಐಷಾರಾಮಿ ಶೋರೂಮ್‌ನಿಂದ ಸುಮಾರು 2 ಲಕ್ಷ ರೂಪಾಯಿ ಮೌಲ್ಯದ ವಾಚ್‌ಗಳನ್ನು ಕಳ್ಳತನ ಮಾಡಿದ ಆರೋಪದ ಮೇಲೆ 26 ವರ್ಷದ ಯುವತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ಆರೋಪಿ ಯುವತಿ ಜುಬಿಲಿ ಹಿಲ್ಸ್‌ನಲ್ಲಿರುವ ಪ್ರತಿಷ್ಠಿತ ವಾಚ್ ಶೋರೂಮ್‌ಗೆ ಗ್ರಾಹಕಿಯಂತೆ ಎಂಟ್ರಿ ಕೊಟ್ಟಿದ್ದಾಳೆ. ತನಗೆ ಒಳ್ಳೆಯ ವಾಚ್‌ಗಳನ್ನು ತೋರಿಸುವಂತೆ ಸಿಬ್ಬಂದಿಯನ್ನು ಕೇಳಿದ್ದಾಳೆ. ಸಿಬ್ಬಂದಿ ವಿವಿಧ ಮಾದರಿಗಳನ್ನು ತೋರಿಸುತ್ತಿದ್ದಾಗ, ಯಾರಿಗೂ ಸಂಶಯ ಬರದಂತೆ ಸುಮಾರು ತಲಾ 1 ಲಕ್ಷ ರೂಪಾಯಿ ಮೌಲ್ಯದ ಎರಡು ‘ಟಿಸ್ಸೋಟ್’ ವಾಚ್‌ಗಳನ್ನು ಸದ್ದಿಲ್ಲದೆ ತನ್ನ ಬ್ಯಾಗ್‌ನಲ್ಲಿ ಅಡಗಿಸಿಟ್ಟುಕೊಂಡಿದ್ದಾಳೆ. ನಂತರ ಏನೂ ತಿಳಿಯದವಳಂತೆ ಅಲ್ಲಿಂದ ಕಾಲ್ಕಿತ್ತಿದ್ದಾಳೆ.
ವಾಚ್‌ಗಳು ನಾಪತ್ತೆಯಾಗಿರುವುದು ಗಮನಕ್ಕೆ ಬರುತ್ತಿದ್ದಂತೆ ಶೋರೂಮ್ ಸಿಬ್ಬಂದಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ಯುವತಿಯ ಕೈಚಳಕ ಬಯಲಾಗಿದೆ. ತಕ್ಷಣವೇ ಜುಬಿಲಿ ಹಿಲ್ಸ್ ಪೊಲೀಸರಿಗೆ ದೂರು ನೀಡಲಾಗಿದ್ದು, ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಸಿಸಿಟಿವಿ ದೃಶ್ಯಗಳ ಮೂಲಕ ಆಕೆ ಬಂದಿದ್ದ ಕಾರಿನ ನಂಬರ್ ಪ್ಲೇಟ್ ಆಧರಿಸಿ ತನಿಖೆ ನಡೆಸಿದ್ದಾರೆ. ಆರೋಪಿ ಯುವತಿ ಖಮ್ಮಂ ಜಿಲ್ಲೆಯಲ್ಲಿದ್ದಾಳೆ ಎಂದು ಪೊಲೀಸರು ಪತ್ತೆ ಹಚ್ಚಿ, ಅಲ್ಲಿಗೆ ತೆರಳಿದ ಪೊಲೀಸ್ ತಂಡ ಯುವತಿ ಮತ್ತು ಆಕೆಯ ಪ್ರಿಯಕರನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ತನ್ನ ಪ್ರಿಯಕರನಿಗೆ ದುಬಾರಿ ಉಡುಗೊರೆ ನೀಡುವ ಸಲುವಾಗಿಯೇ ಆಕೆ ಈ ಕಳ್ಳತನ ಎಸಗಿದ್ದಾಳೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಸದ್ಯ ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದಿದ್ದು, ಕಳ್ಳತನದ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

ನೋಡಿರಿ

