ಸೂರ್ಯಕುಮಾರ್ ಯಾದವ್‌ಗೆ ಒಲಿದ ಐಸಿಸಿ 2022ರ ‘ಟಿ20 ಆಟಗಾರ’ ಪ್ರಶಸ್ತಿ
ಟೀಂ ಇಂಡಿಯಾದ ಸೆನ್ಸೇಷನಲ್ ಬ್ಯಾಟ್ಸ್ ಮನ್ ಸೂರ್ಯಕುಮಾರ್ ಯಾದವ್‌ಗೆ ಐಸಿಸಿ 2022ರ ಟಿ20 ಆಟಗಾರ ಪ್ರಶಸ್ತಿ ಒಲಿದಿದೆ. ಕಡಿಮೆ ಅವಧಿಯಲ್ಲಿ ಟಿ20 ಮಾದರಿಯಲ್ಲಿ ಹೆಚ್ಚಿನ ರನ್ ಗಳಿಸಿದ ಸೂರ್ಯಕುಮಾರ್ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಟಿ-20 ವಿಶ್ವಕಪ್ ವಿಜೇತ ಇಂಗ್ಲೆಂಡ್ ತಂಡದ ಸ್ಯಾಮ್ ಕರನ್, ಪಾಕಿಸ್ತಾನದ ವಿಕೆಟ್ ಕೀಪರ್ ಮೊಹಮ್ಮದ್ ರಿಜ್ವಾನ್ ಮತ್ತು ಜಿಂಬಾಬ್ವೆಯ ಆಲ್ ರೌಂಡರ್ ಸಿಕಂದರ್ ರಾಜಾ ಪ್ರಶಸ್ತಿ ರೇಸ್ ನಲ್ಲಿದ್ದರೂ ಕೂಡಾ ಅವರನ್ನು ಹಿಂದಿಕ್ಕಿ ಸೂರ್ಯ ಕುಮಾರ್ ಯಾದವ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.
ಇದನ್ನೂ ಓದಿ: ಸೂರ್ಯ ಇನ್ ರಿಲ್ಯಾಕ್ಸ್ ಮೂಡ್ – ‘ಎಮು’ವಿನಂತೆಯೇ ಹೆಜ್ಜೆ ಹಾಕಿದ ಕ್ರಿಕೆಟರ್!
2022ರಲ್ಲಿ ಸೂರ್ಯಕುಮಾರ್ ಯಾದವ್ ಟಿ-20 ಕ್ರಿಕೆಟ್ ನಲ್ಲಿ ಸಾವಿರಕ್ಕಿಂತಲೂ ಹೆಚ್ಚು ರನ್ ಗಳಿಸಿದ ಎರಡನೇ ಬ್ಯಾಟ್ಸ್ ಮನ್ ಆಗಿದ್ದಾರೆ. ಕಳೆದ ವರ್ಷ 31 ಟಿ20 ಇನಿಂಗ್ಸ್ ಆಡಿದ್ದ ಸೂರ್ಯಕುಮಾರ್ ಯಾದವ್ 187.43 ಸ್ಟ್ರೈಕ್ ರೇಟ್‌ನಲ್ಲಿ 1164 ರನ್ ಗಳಿಸಿದ್ದರು. ಈ ವೇಳೆ 2 ಶತಕ ಹಾಗೂ 9 ಅರ್ಧಶತಕಗಳನ್ನು ಬಾರಿಸಿದ್ದರು. ಅಷ್ಟೇ ಅಲ್ಲದೆ 68 ಸಿಕ್ಸ್ ಸಿಡಿಸುವ ಮೂಲಕ ಹೊಸ ದಾಖಲೆ ಬರೆದಿದ್ದರು. ಒಂದು ವರ್ಷದಲ್ಲಿ ಟೀಮ್ ಇಂಡಿಯಾ ಪರ ಟಿ20 ಕ್ರಿಕೆಟ್ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ದಾಖಲೆ ನಿರ್ಮಿಸಿದ್ದರು. ಇದರ ಜೊತೆಗೆ ಟಿ20 ಕ್ರಿಕೆಟ್ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸುವ ಮೂಲಕ ಹೊಸ ಇತಿಹಾಸವನ್ನು ಬರೆದಿದ್ದರು. ಇದೀಗ ಈ ಎಲ್ಲಾ ಸಾಧನೆಗಳ ಸರದಾರನಿಗೆ ಐಸಿಸಿ ಟಿ20 ಆಟಗಾರ ಪ್ರಶಸ್ತಿ ಒಲಿದಿದೆ.