ಸುಡು ಬಿಸಿಲಿನಲ್ಲಿ ಮನೆ ಗೇಟ್‌ಗೆ ಮೊಮ್ಮಗಳನ್ನ ಕಟ್ಟಿ ಹಾಕಿ ಚಿತ್ರ ಹಿಂಸೆ ನೀಡಿದ ಅಜ್ಜಿ!

ಸುಡು ಬಿಸಿಲಿನಲ್ಲಿ ಮನೆ ಗೇಟ್‌ಗೆ ಮೊಮ್ಮಗಳನ್ನ ಕಟ್ಟಿ ಹಾಕಿ ಚಿತ್ರ ಹಿಂಸೆ ನೀಡಿದ ಅಜ್ಜಿ!

ಮೊಮ್ಮಕ್ಕಳು ಅಂದ್ರೆ ಅಜ್ಜಿಯಂದಿರಿಗೆ ತುಂಬಾ ಇಷ್ಟ. ಅವರೊಂದಿಗೆ ಹೆಚ್ಚು ಸಮಯ ಕಳೆಯುತ್ತಾರೆ. ಆದ್ರೆ ಇಲ್ಲೊಂದು ಕಡೆ ಅಜ್ಜಿಯೊಬ್ಬಳು ಮಾಡಿದ ಕೃತ್ಯದ ಬಗ್ಗೆ ಕೇಳಿದ್ರೆ ನೀವು ಶಾಕ್‌ ಆಗ್ತೀರಾ. ಸುಡು ಬಿಸಿಲಿನಲ್ಲಿ ಮೊಮ್ಮಗಳನ್ನ ಮನೆಯ ಗೇಟ್‌ಗೆ ಕಟ್ಟಿ ಹಾಕಿದ್ದಾಳೆ. ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗಿದ್ದು ಅಜ್ಜಿ ನಡೆಗೆ ಆಕ್ರೋಶ ವ್ಯಕ್ತವಾಗಿದೆ.

ಇದನ್ನೂ ಓದಿ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಶಾಕ್‌!‌ – SSLC ಪರೀಕ್ಷೆಯಲ್ಲಿ ತೃತೀಯ ಭಾಷೆಗೆ ಗ್ರೇಡ್ ಬದಲು ಅಂಕ ಕೊಡುವಂತೆ ಕೋರ್ಟ್ ನಿರ್ದೇಶನ

ಫರೀದ್‌ಕೋಟ್‌ನ ದೋಗರ್ ಬಸ್ತಿ ನಿವಾಸಿ ಎಎಸ್‌ಐ (ASI) ಸರಬ್ಜಿತ್ ಕೌರ್ ಎಂಬ ಮಹಿಳೆ ಮಕ್ಕಳ ರಕ್ಷಣೆಗಾಗಿ ಪೊಲೀಸ್ ಇಲಾಖೆಯಲ್ಲಿ ಮಹಿಳಾ ಮಿತ್ರ  (ಮಹಿಳಾ ಹೆಲ್ಪ್‌ಡೆಸ್ಕ್) ಆಗಿ ಕೆಲಸ ಮಾಡುತ್ತಿದ್ದಾರೆ. ಇದೀಗ ಈ ಅಧಿಕಾರಿ ತನ್ನ ಐದು ವರ್ಷದ ಮೊಮ್ಮಗಳ ಮೇಲೆ ಅಮಾನವೀಯವಾಗಿ ವರ್ತಿಸಿದ್ದಾರೆ.  ಸುಡುವ ಬಿಸಿಲು, ಕೈಕಾಲು ಕಟ್ಟಿ ಮನೆಯ ಹೊರಗೆ ಮಲಗಿಸಿದ ಅಜ್ಜಿ, ಬುಧವಾರ ತನ್ನ 5 ವರ್ಷದ ಮೊಮ್ಮಗಳ ಕೈ ಮತ್ತು ಕಾಲುಗಳನ್ನು ಬಟ್ಟೆಯಿಂದ ಮನೆಯ ಗೇಟ್‌ಗೆ ಕಟ್ಟಿಹಾಕಿದ್ದರು. ಸುಡುವ ಬಿಸಿಲಿನಲ್ಲಿ ಮಗು ಅಳುತ್ತಾ ಮಲಗಿದ್ದರೂ ಕರುಣೆ ತೋರದ ಅಜ್ಜಿ, ಹಾಗೆಯೇ ಬಿಟ್ಟು ಹೋಗಿದ್ದಾರೆ.

ಮಗು ಅಳುತ್ತಿರುವ ಶಬ್ದ ಕೇಳಿ ಅಕ್ಕಪಕ್ಕದ ಮನೆಯವರು ಓಡಿ ಬಂದಿದ್ದಾರೆ. ಮಗು ಬಿಸಿಲಿನಲ್ಲಿ ನರಳುತ್ತಿರುವುದನ್ನು ಕಂಡ ಸಾರ್ವಜನಿಕರು ತಕ್ಷಣ ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಿಸಿದ್ದಾರೆ ಮತ್ತು ಮಗುವಿನ ಕಟ್ಟುಗಳನ್ನು ಬಿಚ್ಚಿ ರಕ್ಷಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಪಂಜಾಬ್ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ.

ಪೊಲೀಸ್ ಇಲಾಖೆಯಿಂದ ಕಠಿಣ ಕ್ರಮ ಘಟನೆ ಬೆಳಕಿಗೆ ಬಂದ ತಕ್ಷಣ ಫರೀದ್‌ಕೋಟ್ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (SSP) ಪ್ರಜ್ಞಾ ಜೈನ್ ಅವರು ಕೌರ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿದ್ದಾರೆ. ಪೊಲೀಸ್ ಪಡೆಯಲ್ಲಿ ಶಿಸ್ತು ಮತ್ತು ಮಾನವೀಯತೆ ಮುಖ್ಯ. ಅಧಿಕಾರಿಯೊಬ್ಬರು ಮಗುವಿನ ಮೇಲೆ ಇಂತಹ ಕ್ರೌರ್ಯ ತೋರುವುದು ಸ್ವೀಕಾರಾರ್ಹವಲ್ಲ ಎಂದು ಡಿಎಸ್ಪಿ ತರ್ಲೋಚನ್ ಸಿಂಗ್ ತಿಳಿಸಿದ್ದಾರೆ.

ಮಗುವನ್ನು ಮಕ್ಕಳ ಕಲ್ಯಾಣ ಸಮಿತಿಯ ಸುಪರ್ದಿಗೆ ಒಪ್ಪಿಸಲಾಗಿದೆ. ಪ್ರಕರಣದ ತನಿಖೆ ಮುಂದುವರೆದಿದ್ದು, ಆ ಅಜ್ಜಿಯ ವಿಕೃತ ವರ್ತನೆಯ ಹಿಂದೆ ಬೇರೆ ಏನಾದರೂ ಕಾರಣಗಳಿವೆಯೇ ಎಂಬ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಇನ್ನು ಮಗುವಿನ ಪೋಷಕರು ವಿದೇಶದಲ್ಲಿದ್ದಾರೆ ಬಾಲಕಿಯ ತಂದೆ-ತಾಯಿ ಕೆಲಸದ ನಿಮಿತ್ತ ಪೋರ್ಚುಗಲ್‌ನಲ್ಲಿ ವಾಸಿಸುತ್ತಿದ್ದಾರೆ. ಮಗುವನ್ನು ಉತ್ತಮವಾಗಿ ನೋಡಿಕೊಳ್ಳುತ್ತಾರೆಂಬ ಭರವಸೆಯ ಮೇಲೆ ಅಜ್ಜಿಯ ಬಳಿ ಬಿಟ್ಟು ಹೋಗಿದ್ದರು. ಆದರೆ ಅಜ್ಜಿಯೇ ಮಗುವಿನ ಮೇಲೆ ಈ ರೀತಿ ದರ್ಪ ತೋರಿರುವುದು ಪೋಷಕರಿಗೂ ಆಘಾತ ತಂದಿದೆ.

Shwetha M