ಮಂತ್ರಾಲಯದಲ್ಲಿ ರಣ ಭೀಕರ ಅಪಘಾತ- ರಾಯರ ದರ್ಶನಕ್ಕೆ ಹೋದ ಚಿಕ್ಕಮಗಳೂರಿನ 8 ಭಕ್ತರು ಸಾ*ವು!

ಮಂತ್ರಾಲಯಕ್ಕೆ ರಾಯರ ದರ್ಶನಕ್ಕೆ ಹೊರಟಿದ್ದ ಚಿಕ್ಕಮಗಳೂರಿನ ಭಕ್ತರ ಗೂಡ್ಸ್ ವಾಹನಕ್ಕೆ ಟ್ಯಾಂಕರ್ ಡಿಕ್ಕಿಯಾಗಿ ಎಂಟು ಮಂದಿ ಸಾವನ್ನಪ್ಪಿದ್ದಾರೆ. ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಮಂತ್ರಾಲಯ ತಾಲೂಕಿನಲ್ಲಿ ಈ ಭೀಕರ ದುರಂತ ಸಂಭವಿಸಿದೆ. ಅಪಘಾತದಲ್ಲಿ 13 ಜನರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಮಂತ್ರಾಲಯ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಅಕ್ಷಯ ತೃತೀಯದಂದು ಚಿನ್ನವಲ್ಲ ಕಮ್ಮಿಗೆ ಸಿಗುವ ಈ ವಸ್ತುವನ್ನ ಮನೆಗೆ ತನ್ನಿ – ಬದಲಾಗುತ್ತೆ ನಿಮ್ಮ ಅದೃಷ್ಟ
ಚಿಕ್ಕಮಗಳೂರು ಜಿಲ್ಲೆಯಿಂದ ಒಟ್ಟು 21 ಮಂದಿ ಭಕ್ತರು ಬೊಲೆರೊ ವಾಹನದಲ್ಲಿ ಮಂತ್ರಾಲಯಕ್ಕೆ ಪ್ರಯಾಣಿಸುತ್ತಿದ್ದರು. ಈ ವೇಳೆ ಕಲ್ಲುದೇವಕುಂಟ ಬಳಿ ಎದುರುಗಡೆಯಿಂದ ಬಂದ ಸಿಮೆಂಟ್ ಮತ್ತು ಜಲ್ಲಿಕಲ್ಲು ತುಂಬಿದ್ದ ಟ್ಯಾಂಕರ್, ಬೊಲೆರೊ ವಾಹನಕ್ಕೆ ಜೋರಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಆರು ಮಂದಿ ಭಕ್ತರು ಸ್ಥಳದಲ್ಲೇ ಮೃತಪಟ್ಟರೆ, ಮತ್ತಿಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಅಪಘಾತದಲ್ಲಿ ಗಾಯಗೊಂಡ ಉಳಿದ 13 ಭಕ್ತರನ್ನು ತಕ್ಷಣವೇ ಎಮಿಗನೂರು ಮತ್ತು ಕರ್ನೂಲ್ ಸರ್ಕಾರಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯಿಂದಾಗಿ ಮಂತ್ರಾಲಯಕ್ಕೆ ಹೋಗುವ ಮಾರ್ಗದಲ್ಲಿ ಕೆಲಕಾಲ ಸಂಚಾರ ವ್ಯತ್ಯಯವಾಗಿತ್ತು. ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಚಿಕ್ಕಮಗಳೂರು ಮೂಲದ ಕುಮಾರ್(50), ದೀಪಿಕಾ, ವೀಣಾ(42), ಸುನೀಲ್ (40), ಪುಟ್ಟಮ್ಮ(55), ಲೋಲಾಕ್ಷಿ, ಯಶೋಧಾ(60) ಹಾಗೂ ಬಾಲಕಿ ಬೆಳ್ಳಿ(5) ಮೃತ ದುರ್ದೈವಿಗಳು . ಸದ್ಯ ಘಟನೆ ಸಂಬಂಧ ಟ್ಯಾಂಕರ್ ಚಾಲಕನನ್ನು ಮಂತ್ರಾಲಯ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ನೋಡಿರಿ

