ಲಕ್ನೋ ವಿರುದ್ಧ RCBಗೆ ರೋಚಕ ಗೆಲುವು – ಪಾಂಯಿಟ್ಸ್ ಟೇಬಲ್ನಲ್ಲಿ ರಾಯಲ್ ಚಾಲೆಂಜರ್ಸ್ ನಂ.1

ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡೂ ವಿಭಾಗಗಳಲ್ಲಿ ಅಧಿಕಾರಯುತ ಪ್ರದರ್ಶನವನ್ನು ತೋರಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ, ಎದುರಾಳಿ ಲಖನೌ ಸೂಪರ್ ಜಯಂಟ್ಸ್ (LSG) ಎದುರು 5 ವಿಕೆಟ್ ಭರ್ಜರಿ ಗೆಲುವು ಪಡೆಯತು. ಆ ಮೂಲಕ 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ನಾಲ್ಕನೇ ಗೆಲುವು ಸಾಧಿಸಿ, ಪಾಯಿಂಟ್ಸ್ ಟೇಬಲ್ನಲ್ಲಿ ಅಗ್ರ ಸ್ಥಾನಕ್ಕೆ ಪುನಃ ಮರಳಿತು. ಆದರೆ, ರಿಷಭ್ ಪಂತ್ ನಾಯಕತ್ವದ ಎಲ್ಎಸ್ಜಿ ತಂಡ ಈ ಋತುವಿನಲ್ಲಿ ಮೂರನೇ ಸೋಲು ಅನುಭವಿಸಿತು. ಆರ್ಸಿಬಿ ಪರ ಬೌಲಿಂಗ್ನಲ್ಲಿ ಗಮನ ಸೆಳೆದ ಜಾಶ್ ಹೇಝಲ್ವುಡ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಬುಧವಾರ ಇಲ್ಲಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಎಲ್ಎಸ್ಜಿ ನೀಡಿದ್ದ 147 ರನ್ಗಳ ಗುರಿಯನ್ನು ಹಿಂಬಾಲಿಸಿದ ಆರ್ಸಿಬಿ, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್ ಹಾಗೂ ಜಿತೇಶ ಶರ್ಮಾ ಅವರ ಸ್ಪೋಟಕ ಬ್ಯಾಟಿಂಗ್ ಸಹಾಯದಿಂದ 15.1 ಓವರ್ಗಳಿಗೆ 5 ವಿಕೆಟ್ ನಷ್ಟಕ್ಕೆ 149 ರನ್ ಗಳಿಸಿ ಗೆದ್ದು ಬೀಗಿತು. ಆರ್ಸಿಬಿ ಪರ ಇನಿಂಗ್ಸ್ ಆರಂಭಿಸಿದ ಫಿಲ್ ಸಾಲ್ಟ್ (7) ಅವರು ಬೇಗ ವಿಕೆಟ್ ಒಪ್ಪಿಸಿದರು. ಆದರೆ, ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಡಿದ ವಿರಾಟ್ ಕೊಹ್ಲಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನವನ್ನು ತೋರಿ 34 ಎಸೆತಗಳಲ್ಲಿ ಒಂದು ಸಿಕ್ಸರ್ ಹಾಗೂ 6 ಬೌಂಡರಿಗಳೊಂದಿಗೆ 49 ರನ್ ಗಳಿಸಿದರು. ಆ ಮೂಲಕ ಆರ್ಸಿಬಿಗೆ ಉತ್ತಮ ಆರಂಭ ನೀಡಿ ಆವೇಶ ಖಾನ್ಗೆ ವಿಕೆಟ್ ಒಪ್ಪಿಸಿದರು ಹಾಗೂ ಕೇವಲ ಒಂದು ರನ್ನಿಂದ ಅರ್ಧಶತಕ ವಂಚಿತರಾದರು.
ಇದನ್ನೂ ಓದಿ: ಆಹಾರವನ್ನು ಎಷ್ಟು ದಿನಗಳವರೆಗೆ ಫ್ರಿಡ್ಜ್ನಲ್ಲಿಟ್ಟು ತಿನ್ನಬಹುದು? – ಅಪ್ಪಿತಪ್ಪಿಯೂ ಈ ತಪ್ಪು ಮಾಡಲೇಬೇಡಿ!
ಆರ್ಸಿಬಿ ನಾಯಕ ರಜತ್ ಪಾಟಿದಾರ್ ಸ್ಪೋಟಕ ಬ್ಯಾಟಿಂಗ್ ನಡೆಸಿ 13 ಎಸೆತಗಳಲ್ಲಿ 27 ರನ್ ಹಾಗೂ ಜಿತೇಶ್ ಶರ್ಮಾ ಕೇವಲ 9 ಎಸೆತಗಳಲ್ಲಿ 23 ರನ್ ಚಚ್ಚಿದರು. ಈ ಇಬ್ಬರನ್ನು ಪ್ರಿನ್ಸ್ ಯಾದವ್ ಅವರು ಔಟ್ ಮಾಡಿದರು. ಕೊನೆಯಲ್ಲಿ ತಲಾ 14 ರನ್ ಗಳಿಸುವ ಮೂಲಕ ಟಿಮ್ ಡೇವಿಡ್ ಮತ್ತು ರೊಮ್ಯಾರಿಯೊ ಶೆಫರ್ಡ್ ಆರ್ಸಿಬಿಯನ್ನು ಬೇಗ ಗೆಲುವಿನ ದಡ ಮುಟ್ಟಿಸಿದರು. ಎಲ್ಎಸ್ಜಿ ಪರ ಪ್ರಿನ್ಸ್ ಯಾದವ್ 3 ವಿಕೆಟ್ ಹಾಗೂ ಆವೇಶ್ ಖಾನ್ 2 ವಿಕೆಟ್ ಕಿತ್ತರು.
ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿದ್ದ ಲಖನೌ ಸೂಪರ್ ಜಯಂಟ್ಸ್ ತಂಡ, ಜಾಶ್ ಹೇಝಲ್ವುಡ್, ಭುವನೇಶ್ವರ್ ಕುಮಾರ್ ಹಾಗೂ ರಸಿಖ್ ದಾರ್ ಸಲಾಮ್ ಸೇರಿ ಆರ್ಸಿಬಿ ಬೌಲಿಂಗ್ ಎದುರು ತತ್ತರಿಸಿತು. ಆ ಮೂಲಕ ತನ್ನ ಪಾಲಿನ 20 ಓವರ್ಗಳಿಗೆ 146 ರನ್ ಗಳಿಸಿ ತನ್ನೆಲ್ಲಾ 10 ವಿಕೆಟ್ಗಳನ್ನು ಕಳೆದುಕೊಂಡಿತು. ಆ ಮೂಲಕ ಆರ್ಸಿಬಿಗೆ ಕೇವಲ 147 ರನ್ ಗುರಿ ನೀಡಿತ್ತು.

ನೋಡಿರಿ

