ಗ್ಲೆನ್ ಮ್ಯಾಕ್ಸ್‌ವೆಲ್‌ ಭರ್ಜರಿ ದಾಖಲೆ – ಟಿ20 ಕ್ರಿಕೆಟ್​ನಲ್ಲಿ 11 ಸಾವಿರಕ್ಕೂ ಅಧಿಕ ರನ್ ಕಲೆ

ಗ್ಲೆನ್ ಮ್ಯಾಕ್ಸ್‌ವೆಲ್‌ ಭರ್ಜರಿ ದಾಖಲೆ –  ಟಿ20 ಕ್ರಿಕೆಟ್​ನಲ್ಲಿ 11 ಸಾವಿರಕ್ಕೂ ಅಧಿಕ ರನ್ ಕಲೆ

ಪಾಕಿಸ್ತಾನ್ ಸೂಪರ್ ಲೀಗ್​ನ 21ನೇ ಪಂದ್ಯದಲ್ಲಿ 21 ರನ್​ ಸಿಡಿಸುವ ಮೂಲಕ ಗ್ಲೆನ್ ಮ್ಯಾಕ್ಸ್​​ವೆಲ್   ಟಿ20 ಕ್ರಿಕೆಟ್​ನಲ್ಲಿ ಭರ್ಜರಿ ದಾಖಲೆ ಬರೆದಿದ್ದಾರೆ. ಈ ದಾಖಲೆಯೊಂದಿಗೆ ಈ ಸಾಧನೆ ಮಾಡಿದ ಆಸ್ಟ್ರೇಲಿಯಾದ ಮೂರನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ಕರಾಚಿಯಲ್ಲಿ ನಡೆದ ಇಸ್ಲಾಮಾಬಾದ್​ ಯುನೈಟೆಡ್ ವಿರುದ್ಧದ ಪಂದ್ಯದಲ್ಲಿ ಹೈದರಾಬಾದ್​ ಕಿಂಗ್ಸ್​​​ಮೆನ್ ತಂಡದ ಪರ ಕಣಕ್ಕಿಳಿದ ಗ್ಲೆನ್ ಮ್ಯಾಕ್ಸ್​ವೆಲ್ ಕೇವಲ 9 ಎಸೆತಗಳಲ್ಲಿ ಅಜೇಯ 21 ರನ್​ ಬಾರಿಸಿದ್ದರು. ಈ ಇಪ್ಪತ್ತೊಂದು ರನ್​​ಗಳೊಂದಿಗೆ ಮ್ಯಾಕ್ಸ್​ವೆಲ್ ಟಿ20 ಕ್ರಿಕೆಟ್​ನಲ್ಲಿ 11 ಸಾವಿರ ರನ್​ ಪೂರೈಸಿದ್ದಾರೆ.

ಈ ಮೂಲಕ ಟಿ20 ಕ್ರಿಕೆಟ್​ನಲ್ಲಿ 11 ಸಾವಿರಕ್ಕೂ ಅಧಿಕ ರನ್ ಕಲೆಹಾಕಿದ ಆಸ್ಟ್ರೇಲಿಯಾದ ಮೂರನೇ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ಡೇವಿಡ್ ವಾರ್ನರ್ ಹಾಗೂ ಆರೋನ್ ಫಿಂಚ್ ಮಾತ್ರ ಈ ಸಾಧನೆ ಮಾಡಿದ್ದರು. ಇದೀಗ ಈ ಸಾಧಕರ ಪಟ್ಟಿಗೆ ಗ್ಲೆನ್ ಮ್ಯಾಕ್ಸ್​ವೆಲ್ ಕೂಡ ಎಂಟ್ರಿ ಕೊಟ್ಟಿದ್ದಾರೆ.

ಇದನ್ನೂ ಓದಿ: ಜಾನು ಬಲೆಯಲ್ಲಿ ಜಯಂತ್‌ ವಿಲ ವಿಲ.. ಜಾಹ್ನವಿ ಸೇಡು ಸೈಕೋಪತಿ ಸುಸ್ತು! -ಚಿನ್ನುಮರಿ ತಿರುಗೇಟಿಗೆ ಬದಲಾದ ಜಯಂತ್‌!

ಟಿ20 ಕ್ರಿಕೆಟ್​ನಲ್ಲಿ ಈವರೆಗೆ 469 ಇನಿಂಗ್ಸ್ ಆಡಿರುವ ಗ್ಲೆನ್ ಮ್ಯಾಕ್ಸ್​ವೆಲ್ 7142 ಎಸೆತಗಳನ್ನು ಎದುರಿಸಿದ್ದಾರೆ. ಈ ವೇಳೆ 8 ಶತಕ ಹಾಗೂ 58 ಅರ್ಧಶತಕಗಳೊಂದಿಗೆ ಒಟ್ಟು 11009 ರನ್ ಕಲೆಹಾಕಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತೀ ಹೆಚ್ಚು ರನ್​ ಕಲೆಹಾಕಿದ ಬ್ಯಾಟರ್​ಗಳ ಪಟ್ಟಿಯಲ್ಲಿ ಮ್ಯಾಕ್ಸಿ 16ನೇ ಸ್ಥಾನ ಅಲಂಕರಿಸಿದ್ದಾರೆ.

ಇನ್ನು  ಟಿ20 ಕ್ರಿಕೆಟ್​ನಲ್ಲಿ ಅತೀ ಹೆಚ್ಚು ರನ್ ಕಲೆಹಾಕಿದ ವಿಶ್ವ ದಾಖಲೆ ಯುನಿವರ್ಸ್ ಬಾಸ್ ಖ್ಯಾತಿಯ ಕ್ರಿಸ್ ಗೇಲ್ ಹೆಸರಿನಲ್ಲಿದೆ. ತಮ್ಮ ಕೆರಿಯರ್​ನಲ್ಲಿ  455 ಇನಿಂಗ್ಸ್​ ಆಡಿರುವ ಗೇಲ್ 10060 ಎಸೆತಗಳನ್ನು ಎದುರಿಸಿ ಒಟ್ಟು 14562 ರನ್ ಕಲೆಹಾಕಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್​ ಇತಿಹಾಸದ ರನ್ ಸರದಾರ ಎಂಬ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ.

Kishor KV