ಸತತ ಸೋಲಿನಿಂದ ಕಂಗೆಟ್ಟ ಕೆಕೆಆರ್ ನಾಯಕನಿಗೆ ದಂಡ –ಅಜಿಂಕ್ಯ ರಹಾನೆ ತಲೆದಂಡ ಆಗುತ್ತಾ?

ಸತತ ಸೋಲಿನಿಂದ ಕಂಗೆಟ್ಟ ಕೆಕೆಆರ್ ನಾಯಕನಿಗೆ ದಂಡ –ಅಜಿಂಕ್ಯ ರಹಾನೆ ತಲೆದಂಡ ಆಗುತ್ತಾ?

ಒಂದೇ ಒಂದು ಪಂದ್ಯ ಗೆಲ್ಲಲಿಲ್ಲ. ಈ ಬಾರಿ ಸೀಸನ್‌ನಲ್ಲಿ ಕೆಕೆಆರ್‌ ತಂಡ ಸೋಲಿನಲ್ಲೇ ಸಾಗುತ್ತಿದೆ. ನಾಲ್ಕು ಪಂದ್ಯಗಳಲ್ಲೂ ಸೋಲು. ಒಂದು ಪಂದ್ಯದಲ್ಲಿ ಮಳೆ ಬಂದಿದ್ದರಿಂದ ಒಂದು ಅಂಕ. ಪಾಯಿಂಟ್ಸ್ ಟೇಬಲ್‌ನಲ್ಲಿ ಲಾಸ್ಟ್ ಪ್ಲೇಸ್. ಇದರ ಮಧ್ಯೆ ಕೆಕೆಆರ್‌ ತಂಡದ ನಾಯಕನ ಮೇಲೆ ದಂಡದ ಬರೆ ಬಿದ್ದಿದೆ. ಜೊತೆಗೆ ಕ್ಯಾಪ್ಟನ್ ರಹಾನೆಗೆ ನಾಯಕನ ಪಟ್ಟದಿಂದ ಗೇಟ್‌ಪಾಸ್ ಸಿಗಲಿದ್ಯಾ ಎಂಬ ಪ್ರಶ್ನೆಯೂ ಎದುರಾಗಿದೆ.

ಇದನ್ನೂ ಓದಿ:ಚೆನ್ನೈ ವಿರುದ್ಧವೂ ಮುಗ್ಗರಿಸಿದ KKR – ಸತತ 4 ಸೋಲು, ಕಳಪೆ ದಾಖಲೆ

ಮಂಗಳವಾರ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು 20 ಓವರ್​ಗಳಲ್ಲಿ 192 ರನ್ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 160 ರನ್​ ಗಳಿಸಿ ಸೋತಿದೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡಿದ್ದಕ್ಕಾಗಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ಅಜಿಂಕ್ಯ ರಹಾನೆ ಅವರಿಗೆ 12 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಐಪಿಎಲ್ ನೀತಿ ಸಂಹಿತೆಯ ಅಡಿಯಲ್ಲಿ ಇದು ಕನಿಷ್ಠ ಓವರ್ ರೇಟ್ ಅಪರಾಧವಾಗಿದ್ದು, ಪ್ರಸಕ್ತ ಸೀಸನ್‌ನಲ್ಲಿ ಕೆಕೆಆರ್ ತಂಡದ ಮೊದಲ ತಪ್ಪಾದ ಕಾರಣ ನಾಯಕನಿಗೆ 12 ಲಕ್ಷ ರೂ.ಗಳ ದಂಡ ವಿಧಿಸಿ ಐಪಿಎಲ್ ಆಡಳಿತ ಮಂಡಳಿ ಆದೇಶಿಸಿದೆ. ಐಪಿಎಲ್​ ನಿಯಮದ ಪ್ರಕಾರ, ಪ್ರತಿ ತಂಡಗಳು 20 ಓವರ್​ಗಳನ್ನು 1 ಗಂಟೆ 30 ನಿಮಿಷಗಳಲ್ಲಿ ಪೂರ್ಣಗೊಳಿಸಬೇಕು. ಒಂದು ವೇಳೆ ಇದಕ್ಕಿಂತ ಹೆಚ್ಚಿನ ಸಮಯ ತೆಗೆದುಕೊಂಡರೆ ಬೌಂಡರಿ ಲೈನ್​ನಿಂದ ಒಬ್ಬ ಫೀಲ್ಡರ್​ನನ್ನು ಕಡಿತ ಮಾಡಲಾಗುತ್ತದೆ. ಇದೇ ತಪ್ಪನ್ನು 2ನೇ ಬಾರಿ ಪುನರಾವರ್ತಿಸಿದರೆ ನಾಯಕನಿಗೆ 24 ಲಕ್ಷ ರೂ. ದಂಡ ವಿಧಿಸಲಾಗುತ್ತದೆ. ಇದರ ಜೊತೆಗೆ ಪ್ಲೇಯಿಂಗ್ ಇಲೆವೆನ್​ನ ಎಲ್ಲಾ ಆಟಗಾರರಿಗೆ 6 ಲಕ್ಷ ಅಥವಾ ಪಂದ್ಯದ ಶುಲ್ಕದ 25% ದಂಡವನ್ನು ವಿಧಿಸಲಾಗುತ್ತದೆ. ಈ ತಪ್ಪನ್ನು ಮೂರನೇ ಬಾರಿ ಆವರ್ತಿಸಿದರೆ, ತಂಡದ ನಾಯಕನಿಗೆ 30 ಲಕ್ಷ ದಂಡ ವಿಧಿಸಲಾಗುತ್ತದೆ. ಅಲ್ಲದೆ ನಾಯಕನಿಗೆ ಡಿಮೆರಿಟ್ ಪಾಯಿಂಟ್ ನೀಡಲಾಗುತ್ತದೆ. ಹಾಗೆಯೇ ಪ್ಲೇಯಿಂಗ್ ಇಲೆವೆನ್​ನ 10 ಆಟಗಾರರಿಗೆ 12 ಲಕ್ಷ ಅಥವಾ ಅವರ ಪಂದ್ಯದ ಶುಲ್ಕದ 50% ದಂಡವನ್ನು ವಿಧಿಸಲಾಗುತ್ತದೆ.

ಅಂದಹಾಗೆ ಈ ಮೊದಲು ಮೂರು ಬಾರಿ ತಂಡವೊಂದು ಮಂಧಗತಿಯಲ್ಲಿ ಬೌಲಿಂಗ್ ನಡೆಸುವ ಮೂಲಕ ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದರೆ ಮುಂದಿನ ಒಂದು ಪಂದ್ಯದ ಮಟ್ಟಿಗೆ ನಾಯಕ ಆ ಪಂದ್ಯದಿಂದ ಹೊರಗುಳಿಯಬೇಕಾಗುತ್ತಿತ್ತು. ಆದರೆ ಹೊಸದಾಗಿ ಐಪಿಎಲ್ ನಿಯಮಾವಳಿಗಳನ್ನು ಪರಿಷ್ಕರಿಸಲಾಗಿದ್ದು, ನಾಯಕ ಬ್ಯಾನ್ ಆಗುವ ನಿಯಮವನ್ನು ತೆಗೆದು ಹಾಕಲಾಗಿದೆ.

ಐಪಿಎಲ್​ 2026 ರಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ಈವರೆಗೆ 5 ಪಂದ್ಯಗಳನ್ನಾಡಿದೆ. ಈ ಐದು ಪಂದ್ಯಗಳಲ್ಲಿ 4 ಮ್ಯಾಚ್​ಗಳಲ್ಲಿ ಸೋಲನುಭವಿಸಿದೆ. ಇನ್ನು ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯವು ಮಳೆಯಿಂದಾಗಿ ರದ್ದಾದ ಕಾರಣ ಸೋಲಿನಿಂದ ಪಾರಾಗಿದೆ. ಇದರ ಮಧ್ಯೆ ನಾಯಕ ಅಜಿಂಕ್ಯಾ ರಹಾನೆ ನಾಯಕತ್ವದ ವಿಚಾರದ ಬಗ್ಗೆ ಚರ್ಚೆ ಶುರುವಾಗಿದೆ. ಕ್ಯಾಪ್ಟನ್ ತಲೆದಂಡವಾಗುತ್ತಾ ಅನ್ನೋ ಪ್ರಶ್ನೆ ಎದುರಾಗಿದೆ.

Sulekha