ಗಂಡನ ಬಿಟ್ಟು ಲವ್ವರ್ ಜೊತೆ ಓಡಿ ಹೋದ್ಲು ತಂಗಿ.. ರಾಜಿ ನೆಪದಲ್ಲಿ ಕರೆತಂದು ಸುಟ್ಟು ಕೊಂದ ಅಣ್ಣ!

ಗಂಡನನ್ನು ಬಿಟ್ಟು ಲವ್ವರ್ ಜೊತೆ ಓಡಿ ಹೋದಾಕೆ ದುರಂತ ಅಂತ್ಯ ಕಂಡಿದ್ದಾಳೆ. ತಂಗಿ ತಮ್ಮ ಮರ್ಯಾದೆ ತೆಗೆದಳು ಎಂದು ಅಣ್ಣನೇ ಆಕೆಯನ್ನು ಕೊಂದಿರುವ ಘಟನೆ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಆದಿಚುಂಚನಗಿರಿಯಲ್ಲಿ ಭೈರವೈಕ್ಯ ಮಂದಿರ ಪ್ರಧಾನಿ ಮೋದಿಯವರಿಂದ ಲೋಕಾರ್ಪಣೆ!
ಈ ಘಟನೆ ಬೆಳಗಾವಿ ಜಿಲ್ಲೆಯ ಸೌದತ್ತಿ ತಾಲೂಕಿನಲ್ಲಿ ನಡೆದಿದೆ. ಸತ್ಯವ್ವ ಕೊಲೆಯಾದ ಮಹಿಳೆ. ಪ್ರಿಯಕರನ ಜೊತೆಗೆ ಓಡಿ ಹೋಗಿದ್ದಕ್ಕೆ ಸಂಬಂಧಿಕರೇ ಯುವತಿಗೆ ವಿಷ ಕುಡಿಸಿ ಕೊಂದು ಹಾಕಿದ್ದಾರೆ.
ಏನಿದು ಘಟನೆ?
ಕಳೆದ ನಾಲ್ಕು ವರ್ಷಗಳ ಹಿಂದೆ ರಾಯಬಾಗ ತಾಲೂಕಿನ ಹನಬರಟ್ಟಿ ಗ್ರಾಮದ ಸಂತೋಷ ಹೆಳವಿ ಜೊತೆ ಸತ್ಯವ್ವ ಮದುವೆ ಮಾಡಿಸಲಾಗಿತ್ತು. ಆದ್ರೂ ಆಕೆ ಕೃಷ್ಣ ಎಂಬಾತನನ್ನು ಪ್ರೀತಿಸುತ್ತಿದ್ದಳು. ಹೀಗಾಗಿ ಗಂಡನನ್ನು ಬಿಟ್ಟು ಕೃಷ್ಣನ ಜೊತೆ ಸತ್ಯವ್ವ ಫೆಬ್ರವರಿ 17ರಂದು ಓಡಿ ಹೋಗಿದ್ದಳು. ಸೌದತ್ತಿ ತಾಲೂಕಿನ ಬೆಳವಡಿಯಲ್ಲಿ ಬಾಡಿಗೆ ಮನೆಯಲ್ಲಿ ಇಬ್ಬರು ವಾಸಿಸುತ್ತಿದ್ದರು. ಆದ್ರೆ 15 ದಿನಗಳ ಬಳಿಕ ಇಬ್ಬರನ್ನೂ ಕುಟುಂಬದ ಸದಸ್ಯರು ಕರೆ ತಂದಿದ್ದಾರೆ. ಎರಡು ಕುಟುಂಬಸ್ಥರ ನಡುವೆ ರಾಜಿ ಸಂಧಾನ ನಡೆದಿತ್ತು. ಬಳಿಕ ಸತ್ಯವ್ವಳ ಅಣ್ಣ ಆಕೆಯನ್ನು ಕರೆದುಕೊಂಡು ಬಂದು ಮಹಾರಾಷ್ಟ್ರದ ಶಿರೋಳದಲ್ಲಿರುವ ಸತ್ಯವ್ವನ ಅಕ್ಕನ ಮನೆಗೆ ಕಳುಹಿಸಿದ್ದಾರೆ. ಈ ವೇಳೆ ಕೃಷ್ಣನನ್ನು ಬಿಡುವಂತೆ ಆಕೆಗೆ ಒತ್ತಾಯಿಸಿದ್ದಾರೆ. ಇದಕ್ಕೆ ಆಕೆ ಒಪ್ಪದಿದ್ದಾಗ ಅರಗ ಗ್ರಾಮಕ್ಕೆ ಕರೆದುಕೊಂಡು ಬಂದು ಕೊಲೆ ಮಾಡಿದ್ದಾರೆ.
ಮಾರ್ಚ್ 21ರಂದು ವಿಷ ಕುಡಿಸಿ ಸತ್ಯವ್ವನ ಕೊಲೆಗೈದು, ದೇಹವನ್ನು ಸುಟ್ಟು ಹಾಕಿದ್ದಾರೆ. ಸತ್ಯವ್ವನ ಅಣ್ಣ ಶಾನೂರ, ಚಿಕ್ಕಪ್ಪ ಪ್ರಕಾಶ, ಭಾವ ಕಲ್ಲಪ್ಪ ಸೇರಿ ಈ ಕೃತ್ಯ ನಡೆಸಿದ್ದು, ಬಳಿಕ ಗ್ರಾಮದ ಸ್ಮಶಾನದಲ್ಲಿ ಶವವನ್ನು ಸುಟ್ಟು ಹಾಕಿದ್ದಾರೆ. ಸಾಕ್ಷಿ ನಾಶಕ್ಕಾಗಿ ಆಕೆಯ ಹಾಸಿಗೆ ಬಟ್ಟೆ ಸಮೇತ ಶವವನ್ನು ಸುಟ್ಟಿದ್ದಾರೆ. ಮಹಾರಾಷ್ಟ್ರದಲ್ಲಿಯೇ ಶವ ಸುಟ್ಟು ಮೂವರೂ ವಾಪಸ್ ಊರಿಗೆ ಬಂದಿದ್ದಾರೆ.
ಸತ್ಯವ್ವ ಸಂಪರ್ಕಕ್ಕೆ ಸಿಗದಿದ್ದಾಗ ಪ್ರಿಯಕರ ಕೃಷ್ಣ ಸಂಶಯಗೊಂಡಿದ್ದು, ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ. ಕೃಷ್ಣನ ದೂರಿನ ಅನ್ವಯ ಸಿಪಿಐ ಜಾವೇದ್ ಮುಶಪೂರಿ ತನಿಖೆ ಕೈಗೊಂಡಿದ್ದರು. ಶಾನೂರನನ್ನು ಕರೆದುಕೊಂಡು ಬಂದು ವಿಚಾರಣೆ ನಡೆಸಿದಾಗ, ತಂಗಿ ಮರ್ಯಾದೆ ತೆಗೆಯುವ ಕೆಲಸ ಮಾಡಿದ್ದಕ್ಕೆ ಕೊಲೆ ಮಾಡಿದ್ದೇವೆ ಎಂದು ಆಕೆಯ ಅಣ್ಣ ತಪ್ಪು ಒಪ್ಪಿಕೊಂಡಿದ್ದಾನೆ. ಘಟನೆ ಸಂಬಂಧ ಶಾನೂರ ಪ್ರಕಾಶ ಮತ್ತು ಕಲ್ಲಪ್ಪನನ್ನು ಪೊಲೀಸರು ಆರೆಸ್ಟ್ ಮಾಡಿದ್ದಾರೆ.

ನೋಡಿರಿ

