ಚೆನ್ನೈ ವಿರುದ್ಧವೂ ಮುಗ್ಗರಿಸಿದ KKR – ಸತತ 4 ಸೋಲು, ಕಳಪೆ ದಾಖಲೆ

ಚೆನ್ನೈ ವಿರುದ್ಧವೂ ಮುಗ್ಗರಿಸಿದ KKR – ಸತತ 4 ಸೋಲು, ಕಳಪೆ ದಾಖಲೆ

ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ  IPL ​ನ 21ನೇ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್   ತಂಡ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಕೆಕೆಆರ್ ತಂಡದ ನಾಯಕ ಅಜಿಂಕ್ಯ ರಹಾನೆ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಸಿಎಸ್​ಕೆ ತಂಡಕ್ಕೆ ಸಂಜು ಸ್ಯಾಮ್ಸನ್ (48) ಸ್ಫೋಟಕ ಆರಂಭ ಒದಗಿಸಿದ್ದರು. ಮತ್ತೊಂದೆಡೆ ಆಯುಷ್ ಮ್ಹಾತ್ರೆ ಕೂಡ 17 ಎಸೆತಗಳಲ್ಲಿ 38 ರನ್ ಚಚ್ಚಿದ್ದರು.ಇವರ ಬಳಿಕ ಬಂದ ಡೆವಾಲ್ಡ್ ಬ್ರೆವಿಸ್ 41 ರನ್​ಗಳ ಕೊಡುಗೆ ನೀಡಿದರೆ, ಸರ್ಫರಾಝ್ ಖಾನ್ 23 ರನ್ ಬಾರಿಸಿದರು. ಈ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡವು 20 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 192 ರನ್​ ಕಲೆಹಾಕಿತು.

193 ರನ್​ಗಳ  ಗುರಿ  ಬೆನ್ನತ್ತಿದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ರನ್‌ಗಳಿಸೋಕೆ ಪರದಾಡ್ತು.  ಆರಂಭಿಕ ದಾಂಡಿಗ ಫಿನ್ ಅಲೆನ್ ಕೇವಲ 1 ರನ್​ಗಳಿಸಿ ವಿಕೆಟ್ ಒಪ್ಪಿಸಿದ್ದರು. ಇನ್ನು ಓಪನರ್ ಆಗಿ ಕಣಕ್ಕಿಳಿದ ಸುನಿಲ್ ನರೈನ್ 24 ರನ್​ ಬಾರಿಸಿ ಇನಿಂಗ್ಸ್ ಅಂತ್ಯಗೊಳಿಸಿದರೆ, ಅಂಗ್​ಕ್ರಿಶ್ ರಘುವಂಶಿ 27 ರನ್​ಗಳೊಂದಿಗೆ ಪೆವಿಲಿಯನ್​ಗೆ ಹಿಂತಿರುಗಿದರು.

ಇದನ್ನೂ ಓದಿ:LSG ಪಂದ್ಯಕ್ಕಿಲ್ವಾ ಕಿಂಗ್ ಕೊಹ್ಲಿ? – ಸುಯಾಶ್ & ರಸಿಕ್ ಫಾರ್ಮುಲಾ ಸಕ್ಸಸ್

ಇದರ ಬೆನ್ನಲ್ಲೇ ನಾಯಕ ಅಜಿಂಕ್ಯ ರಹಾನೆ (28) ಕೂಡ ವಿಕೆಟ್ ಒಪ್ಪಿಸಿದರು. ಈ ಹಂತದಲ್ಲಿ ಕಣಕ್ಕಿಳಿದ ಕ್ಯಾಮರೋನ್ ಗ್ರೀನ್ (0) ರನ್ನು ಶೂನ್ಯಕ್ಕೆ ಕ್ಲೀನ್ ಬೌಲ್ಡ್ ಮಾಡುವಲ್ಲಿ ಸ್ಪಿನ್ನರ್ ನೂರ್ ಅಹ್ಮದ್ ಯಶಸ್ವಿಯಾದರು. ಇದರ ಬೆನ್ನಲ್ಲೇ ರಿಂಕು ಸಿಂಗ್ (6) ಕೂಡ ಔಟಾದರು.ಪರಿಣಾಮ ಕೊನೆಯ 5 ಓವರ್​ಗಳಲ್ಲಿ ಕೆಕೆಆರ್ ತಂಡಕ್ಕೆ ಗೆಲ್ಲಲು ಬರೋಬ್ಬರಿ 86 ರನ್​ಗಳ ಅವಶ್ಯಕತೆಯಿತ್ತು. ಈ ಹಂತದಲ್ಲಿ ಜೊತೆಗೂಡಿದ ರಮಣ್​ದೀಪ್ ಸಿಂಗ್ ಹಾಗೂ ರೋವ್​ಮನ್ ಪೊವೆಲ್ ಒಂದಷ್ಟು ಹೊತ್ತು ಕ್ರೀಸ್ ಕಚ್ಚಿ ನಿಂತರೂ ತಂಡವನ್ನು ಗೆಲುವಿನ ಸಮೀಪಕ್ಕೆ ತಲುಪಿಸಲು ಸಾಧ್ಯವಾಗಿಲ್ಲ.

ಅಂತಿಮವಾಗಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು 20 ಓವರ್​​ಗಳಲ್ಲಿ 7 ವಿಕೆಟ್ ಕಳೆದುಕೊಂಡು 160 ರನ್​ಗಳಿಸಿ ಇನಿಂಗ್ಸ್ ಅಂತ್ಯಗೊಳಿಸಿದೆ. ಈ ಮೂಲಕ ಸಿಎಸ್​ಕೆ ತಂಡ 32 ರನ್​ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಅಂಕ ಪಟ್ಟಿಯಲ್ಲಿ 8ನೇ ಸ್ಥಾನಕ್ಕೇರಿದೆ.

Kishor KV