ರಿಲೀಸ್‌ ಆಗುವುದಕ್ಕೂ ಮುನ್ನವೇ ದಳಪತಿ ಸಿನಿಮಾ ಟಿವಿಯಲ್ಲಿ ಪ್ರಸಾರ! – ವಿಜಯ್‌ ಚಿತ್ರ ಲೀಕ್‌ ಮಾಡಿದವರು ಅರೆಸ್ಟ್!  

ರಿಲೀಸ್‌ ಆಗುವುದಕ್ಕೂ ಮುನ್ನವೇ ದಳಪತಿ ಸಿನಿಮಾ ಟಿವಿಯಲ್ಲಿ ಪ್ರಸಾರ! – ವಿಜಯ್‌ ಚಿತ್ರ ಲೀಕ್‌ ಮಾಡಿದವರು ಅರೆಸ್ಟ್!  

ನಟ, ತಮಿಳಗ ವೆಟ್ರಿ ಕಳಗಂ ಅಧ್ಯಕ್ಷ ದಳಪತಿ ವಿಜಯ್ ಟೈಂ ಯಾಕೋ ಸರಿಯಿಲ್ಲ. ಒಂದಾದ ಮೇಲೊಂದು ಸಂಕಷ್ಟ ಎದುರಾಗುತ್ತಲೇ ಇದೆ. ಇದೀಗ ಅವರ ಕೊನೆಯ ಸಿನಿಮಾ ರಿಲೀಸ್‌ ಆಗುವುದಕ್ಕೂ ಮುನ್ನವೇ ಲೀಕ್‌ ಆಗಿದ್ದು, ಇದೀಗ ಟಿವಿಯಲ್ಲೂ  ಪ್ರಸಾರ ಕಂಡಿದೆ.

ಇದನ್ನೂ ಓದಿ: ನಮ್ಮ ಮೆಟ್ರೋ ಸಂಚಾರ ಅವಧಿ ಹೆಚ್ಚಳ! – ಈ ದಿನಗಳಂದು ರಾತ್ರಿ 1.30ರ ವರೆಗೂ ರೈಲು ಸಂಚಾರ!

ದಳಪತಿ ವಿಜಯ್‌ ಅವರ ಜನ ನಾಯಗನ್ ಸಿನಿಮಾದ ಮೇಲೆ ಭಾರಿ ನಿರೀಕ್ಷೆಗಳಿತ್ತು. ಕಳೆದ ಕೆಲವು ಸಮಯದಿಂದ ಈ ಸಿನಿಮಾಗೆ ಒಂದಾದ ಮೇಲೊಂದರಂತೆ ಅಡ್ಡಿಗಳು ಎದುರಾಗುತ್ತಿವೆ. ಸೆನ್ಸಾರ್ ಸಮಸ್ಯೆ ಹಾಗೂ ಇತರ ತಾಂತ್ರಿಕ ಕಾರಣಗಳಿಂದಾಗಿ ಈ ಚಿತ್ರದ ಬಿಡುಗಡೆ ಮುಂದೂಡಲ್ಪಡುತ್ತಾ ಬಂದಿದೆ. ಇದೀಗ ಆನ್‌ಲೈನ್‌ ಲೀಕ್‌ ಆಗಿರುವುದು ದೊಡ್ಡ ಸಮಸ್ಯೆ ಆಗಿದೆ. ಇದೀಗ ಈ ಚಿತ್ರದ 21 ನಿಮಿಷಗಳ ಫೂಟೇಜ್‌ ಅನ್ನು ನೇರವಾಗಿ ಕೇಬಲ್ ಟಿವಿಯಲ್ಲೇ ಪ್ರಸಾರ ಮಾಡಿರುವುದು ಮತ್ತೊಂದು ಸಂಚಲನಕ್ಕೆ ಕಾರಣವಾಗಿದೆ.

ಕೊಯಮತ್ತೂರು ಸಮೀಪದ ಕರುಮತ್ತಂಪಟ್ಟಿಯಲ್ಲಿ ರಾಶಿ ಕೇಬಲ್ ಟಿವಿ ನೆಟ್‌ವರ್ಕ್ ನಡೆಸುತ್ತಿರುವ ಪಳನಿಸ್ವಾಮಿ ಎಂಬ ವ್ಯಕ್ತಿ, ತನ್ನ ಲೋಕಲ್ ಚಾನೆಲ್‌ನಲ್ಲಿ ಏಪ್ರಿಲ್ 11ರ ರಾತ್ರಿ ಜನ ನಾಯಗನ್ ಚಿತ್ರಕ್ಕೆ ಸಂಬಂಧಿಸಿದ 21 ನಿಮಿಷಗಳ ಫುಟೇಜ್ ಅನ್ನು ಪ್ರಸಾರ ಮಾಡಿದ್ದಾನೆ. ಚಿತ್ರದ ಪ್ರಮುಖ ದೃಶ್ಯಗಳು ಪ್ರಸಾರವಾಗುತ್ತಿರುವುದನ್ನು ಗಮನಿಸಿದ ವಿಜಯ್ ಅಭಿಮಾನಿಗಳು ಮತ್ತು ಟಿಬಿಕೆ ಪಕ್ಷದ ಕಾರ್ಯಕರ್ತರು ಪೊಲೀಸರಿಗೆ ದೂರು ನೀಡಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಪಳನಿಸ್ವಾಮಿಯನ್ನು ಬಂಧಿಸಿ, ಪ್ರಸಾರಕ್ಕೆ ಬಳಸಿದ್ದ ಕಂಪ್ಯೂಟರ್ ಮತ್ತು ಹಾರ್ಡ್ ಡಿಸ್ಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಯ ವಿರುದ್ಧ ಕಾಪಿರೈಟ್ ಕಾಯ್ದೆ ಮತ್ತು ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಸಾಮಾಜಿಕ ಜಾಲತಾಣದ ಗ್ರೂಪ್‌ಗಳ ಮೂಲಕ ಈ ಫುಟೇಜ್ ತನಗೆ ಸಿಕ್ಕಿತ್ತು ಎಂದು ವಿಚಾರಣೆ ವೇಳೆ ಆರೋಪಿಯು ಬಹಿರಂಗಪಡಿಸಿದ್ದಾನೆ ಎಂದು ಪೊಲೀಸರು ಮೂಲಗಳು ಹೇಳಿವೆ.

ಇನ್ನು ಜನ ನಾಯಗನ್‌ ಸಿನಿಮಾವು ಸೋರಿಕೆ ಆಗಿರುವುದಕ್ಕೆ ರಜನಿಕಾಂತ್‌, ಕಮಲ್‌ ಹಾಸನ್‌, ಚಿರಂಜೀವಿ ಸೇರಿದಂತೆ ಭಾರತೀಯ ಚಿತ್ರರಂಗದ ಗಣ್ಯರು ಖಂಡಿಸಿದ್ದಾರೆ. ಸಾವಿರಾರು ಕಲಾವಿದರ ಶ್ರಮ ಮತ್ತು ನಿರ್ಮಾಪಕರ ಕೋಟಿಗಟ್ಟಲೆ ರೂಪಾಯಿ ಹೂಡಿಕೆಯನ್ನು ಪೈರಸಿ ಮೂಲಕ ಮಾಡುತ್ತಿರುವುದು ಅಮಾನವೀಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಜಯ್ ಅವರ ಕೊನೆಯ ಚಿತ್ರವನ್ನು ಚಿತ್ರಮಂದಿರದಲ್ಲಿಯೇ ನೋಡಿ ವಿನಂತಿಸಿದ್ದಾರೆ.

ಇನ್ನು, ಈ ಸಿನಮಾವನ್ನು ಸೋರಿಕೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ಸೈಬರ್‌ ಕ್ರೈಮ್ ಪೊಲೀಸರು ಆರು ಮಂದಿಯನ್ನು ಅರೆಸ್ಟ್‌ ಮಾಡಿದ್ದಾರೆ. ಅಲ್ಲದೆ, ಸಾಮಾಜಿಕ ಜಾಲತಾಣ ಮತ್ತು ಕ್ಲೌಡ್ ಸ್ಟೋರೇಜ್ ಪ್ಲಾಟ್‌ಫಾರ್ಮ್‌ಗಳಲ್ಲಿದ್ದ 300ಕ್ಕೂ ಹೆಚ್ಚು ಅಕ್ರಮ ಲಿಂಕ್‌ಗಳನ್ನು ಡಿಲೀಟ್‌ ಮಾಡಲಾಗಿದೆ.

Shwetha M