ಹಿಂಸಾಚಾರಕ್ಕೆ ತಿರುಗಿದ ನೋಯ್ಡಾ ಕಾರ್ಮಿಕರ ಪ್ರತಿಭಟನೆ – ಖಡಕ್ ಎಚ್ಚರಿಕೆ ನೀಡಿದ ಸಿಎಂ ಯೋಗಿ

ಹಿಂಸಾಚಾರಕ್ಕೆ ತಿರುಗಿದ ನೋಯ್ಡಾ ಕಾರ್ಮಿಕರ ಪ್ರತಿಭಟನೆ – ಖಡಕ್ ಎಚ್ಚರಿಕೆ ನೀಡಿದ ಸಿಎಂ ಯೋಗಿ

ನೋಯ್ಡಾದ  ಕಾರ್ಖಾನೆ ಕಾರ್ಮಿಕರ ಬೃಹತ್ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿದ್ದು, ಪ್ರತಿಭಟನಾಕಾರರು ವಾಹನಗಳನ್ನು ಧ್ವಂಸಗೊಳಿಸಿ ಕಲ್ಲು ತೂರಾಟ ನಡೆಸಿದ್ದಾರೆ. ನೋಯ್ಡಾದ ಫೇಸ್-2 ಪ್ರದೇಶದಲ್ಲಿರುವ ಕೈಗಾರಿಕಾ ಘಟಕಗಳ ಕಾರ್ಮಿಕರು ವೇತನ ಹೆಚ್ಚಳ ಮತ್ತು ಇತರ ಸವಲತ್ತುಗಳಿಗೆ ಆಗ್ರಹಿಸಿ ನಡೆಸುತ್ತಿರುವ ಈ ಪ್ರತಿಭಟನೆಯಿಂದಾಗಿ ಸೋಮವಾರ (ಏಪ್ರಿಲ್‌ 13) ಬೆಳಗ್ಗೆ ಸಂಚಾರಕ್ಕೆ ತಿರುಗಿ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದು, ಸ್ಥಳಕ್ಕೆ ಹೆಚ್ಚಿನ ಭದ್ರತಾ ಪಡೆಗಳನ್ನು ರವಾನಿಸಲಾಗಿದೆ.

ಇದನ್ನೂ ಓದಿ: ನನ್ನ ಉಚ್ಚಾಟನೆ ಹಾಸ್ಯಾಸ್ಪದ, ಟ್ರಸ್ಟ್​ನವರಿಗೆ ಲೆಕ್ಕ ಕೇಳಿದ್ದಕ್ಕೆ ಟಾರ್ಗೆಟ್​ – ಉಚ್ಚಾಟನೆ ಬೆನ್ನೆಲ್ಲೇ ಸಿಡಿದ ವಚನಾನಂದ ಸ್ವಾಮೀಜಿ

ಹರಿಯಾಣ ಸರ್ಕಾರವು ಇತ್ತೀಚೆಗೆ ಕಾರ್ಮಿಕರ ಕನಿಷ್ಠ ವೇತನವನ್ನು ಶೇ. 35ರಷ್ಟು ಹೆಚ್ಚಳ ಮಾಡಿ ಆದೇಶ ಹೊರಡಿಸಿರುವುದು ಈ ಕಿಚ್ಚಿಗೆ ಕಾರಣವಾಗಿದೆ. ಹರಿಯಾಣದಲ್ಲಿ ಕರಕುಶಲ ಕಾರ್ಮಿಕರ ವೇತನ 11,274 ರುಪಾಯಿಯಂದ 15,220 ರುಪಾಯಿಗೆ ಏರಿಕೆಯಾಗಿದೆ. ಇದನ್ನೇ ಆಧಾರವಾಗಿಟ್ಟುಕೊಂಡ ನೋಯ್ಡಾ ಕಾರ್ಮಿಕರು, ಪಕ್ಕದ ರಾಜ್ಯದಲ್ಲಿ ಸಮಾನ ಕೆಲಸಕ್ಕೆ ಹೆಚ್ಚಿನ ವೇತನ ಸಿಗುತ್ತಿರುವಾಗ ತಮಗೂ ವೇತನ ಹೆಚ್ಚಳ ಮಾಡಬೇಕೆಂದು ಉತ್ತರ ಪ್ರದೇಶ ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ.

ಕಾರ್ಮಿಕರ ಈ ಬೃಹತ್ ಪ್ರತಿಭಟನೆಯಿಂದಾಗಿ ನೋಯ್ಡಾದ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಕೆಲಸಕ್ಕೆ ತೆರಳುವವರು ಮತ್ತು ಶಾಲಾ ವಾಹನಗಳು ಗಂಟೆಗಟ್ಟಲೆ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿಕೊಂಡಿದ್ದವು. ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಹರಸಾಹಸ ಪಡುತ್ತಿದ್ದು, ವಾಹನ ಸವಾರರಿಗೆ ಪರ್ಯಾಯ ಮಾರ್ಗ ಬಳಸುವಂತೆ ಸೂಚನೆ ನೀಡಲಾಗಿದೆ.

ಈ ಬೆಳವಣಿಗೆಯ ಕುರಿತು ಪ್ರತಿಕ್ರಿಯಿಸಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, “ಪ್ರತಿ ಕಾರ್ಮಿಕರಿಗೂ ಗೌರವಯುತ ವೇತನ ಮತ್ತು ಸುರಕ್ಷಿತ ಕೆಲಸದ ವಾತಾವರಣ ಸಿಗಬೇಕು. ಕೈಗಾರಿಕೆಗಳು ಕಾರ್ಮಿಕ ಕಾನೂನುಗಳನ್ನು ಕಡ್ಡಾಯವಾಗಿ ಪಾಲಿಸಬೇಕು” ಎಂದು ಸೂಚಿಸಿದ್ದಾರೆ. ಆದರೆ ಪ್ರತಿಭಟನೆಯ ಹೆಸರಿನಲ್ಲಿ ಅಶಾಂತಿ ಸೃಷ್ಟಿಸುವ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ. ಅಲ್ಲದೆ, ಇದು “ಸತ್ತು ಹೋಗಿರುವ ನಕ್ಸಲಿಸಂ ಅನ್ನು ಪುನಶ್ಚೇತನಗೊಳಿಸುವ ಪಿತೂರಿ” ಇರಬಹುದು ಎಂದು ಎಚ್ಚರಿಸಿದ್ದಾರೆ.

Kishor KV