ರೈಲು ಪ್ರಯಾಣಿಕರಿಗೆ ಗುಡ್‌ನ್ಯೂಸ್!‌ – ಇನ್ಮುಂದೆ ನಿಮ್ಮ ಸೀಟಿಗೆ ಬರಲಿದೆ ನಿಮ್ಮಿಷ್ಟದ ಆಹಾರ!

ರೈಲು ಪ್ರಯಾಣಿಕರಿಗೆ ಗುಡ್‌ನ್ಯೂಸ್!‌ – ಇನ್ಮುಂದೆ ನಿಮ್ಮ ಸೀಟಿಗೆ ಬರಲಿದೆ ನಿಮ್ಮಿಷ್ಟದ ಆಹಾರ!

ರೈಲುಗಳಲ್ಲಿ ದೂರದ ಊರಿಗೆ ಪ್ರಯಾಣಿಸುವಾಗ ಅನೇಕರ ಪ್ರಯಾಣಿಕರಿಗೆ ಊಟದ್ದೇ ಚಿಂತೆ. ಉತ್ತಮ ಗುಣಮಟ್ಟದ ಆಹಾರ ಸಿಗುತ್ತಿಲ್ಲ ಎಂದು ಅನೇಕರ ಪ್ರಯಾಣಿಕರು ರೈಲಿನಲ್ಲಿ ಆಹಾರ ಬುಕ್‌ ಮಾಡುವುದೇ ಇಲ್ಲ. ಖಾಲಿ ಹೊಟ್ಟೆಯಲ್ಲೇ ರೈಲು ಪ್ರಯಾಣ ಮಾಡುತ್ತಾರೆ. ಅಂತವರಿಗೆ ರೈಲ್ವೇ ಇಲಾಖೆ ಗುಡ್‌ನ್ಯೂಸ್ ಕೊಟ್ಟಿದೆ. ಇನ್ಮುಂದೆ ಪ್ರತಿಷ್ಠಿತ ರೆಸ್ಟೋರೆಂಟ್‌ಗಳಿಂದ ತಮಗೆ ಇಷ್ಟವಾದ, ತಾಜಾ ಹಾಗೂ ಸ್ವಚ್ಛವಾದ ಆಹಾರವನ್ನು ನೇರವಾಗಿ ತಮ್ಮ ಸೀಟಿಗೆ ತರಿಸಿಕೊಳ್ಳಬಹುದು.

ಇದನ್ನೂ ಓದಿ: ಬೆಕ್ಕುಗಳ ಲವ್‌ಸ್ಟೋರಿಗೆ ನೆರೆಮನೆಯವರ ಮಧ್ಯೆ ಮಾರಾಮಾರಿ! – ಪೊಲೀಸ್‌ ಎಂಟ್ರಿ.. ಆಮೇಲೆ ಏನಾಯ್ತು?

ರೈಲ್ವೆ ನಿಲ್ದಾಣಗಳಲ್ಲಿ ಇಳಿದು ತರಾತುರಿಯಲ್ಲಿ ಆಹಾರ ಖರೀದಿಸುವ ಆತಂಕವನ್ನು ದೂರ ಮಾಡಲು, ಭಾರತದ ಪ್ರಮುಖ ಎಐ-ಆಧಾರಿತ ರೈಲು ಟಿಕೆಟ್ ಬುಕಿಂಗ್ ಪ್ಲಾಟ್‌ಫಾರ್ಮ್‌ಗಳಾದ ‘ಇಕ್ಸಿಗೋ’ ಮತ್ತು ‘ಕನ್ಫರ್ಮ್ ಟಿಕೆಟ್’, ಜನಪ್ರಿಯ ಫುಡ್ ಡೆಲಿವರಿ ಸಂಸ್ಥೆ ಸ್ವಿಗ್ಗಿ ಜತೆ ಮಹತ್ವದ ಒಪ್ಪಂದ ಮಾಡಿಕೊಂಡಿವೆ. ಈ ಮೂಲಕ ಫುಡ್ ಆನ್ ಟ್ರೈನ್ ಸೇವೆಯನ್ನು ಉನ್ನತೀಕರಿಸಲಾಗಿದ್ದು, ಇನ್ಮುಂದೆ ಪ್ರಯಾಣಿಕರು ದೇಶದ 160ಕ್ಕೂ ಹೆಚ್ಚು ರೈಲು ನಿಲ್ದಾಣಗಳಲ್ಲಿ 40,000ಕ್ಕೂ ಅಧಿಕ ಪ್ರತಿಷ್ಠಿತ ರೆಸ್ಟೋರೆಂಟ್‌ಗಳಿಂದ ತಮಗೆ ಇಷ್ಟವಾದ, ತಾಜಾ ಹಾಗೂ ಸ್ವಚ್ಛವಾದ ಆಹಾರವನ್ನು ನೇರವಾಗಿ ತಮ್ಮ ಸೀಟಿಗೆ ತರಿಸಿಕೊಳ್ಳಬಹುದಾಗಿದೆ.

ಬುಕಿಂಗ್ ಹೇಗೆ? ಡೆಲಿವರಿಗೆ ಗ್ಯಾರಂಟಿ ಏನು?

ಗ್ರಾಹಕರು ತಮ್ಮ ಇಕ್ಸಿಗೋ ಅಥವಾ ಕನ್ಫರ್ಮ್ ಟಿಕೆಟ್ ಆಪ್‌ಗಳನ್ನು ಅಪ್‌ಡೇಟ್ ಮಾಡಿ, ಹೋಂಪೇಜ್‌ನಲ್ಲಿರುವ ‘ಆರ್ಡರ್ ಫುಡ್ ಆನ್ ಟ್ರೇನ್ʼ ಆಯ್ಕೆಯನ್ನು ಕ್ಲಿಕ್ ಮಾಡಬೇಕು. ಅಲ್ಲಿ ತಮ್ಮ ರೈಲ್ವೆ ಟಿಕೆಟ್‌ನ ಪಿಎನ್‌ಆರ್‌ ಸಂಖ್ಯೆಯನ್ನು ನಮೂದಿಸಿದರೆ, ಮುಂದಿನ ಯಾವ ನಿಲ್ದಾಣದಲ್ಲಿ ಆಹಾರ ಪಡೆಯಬಹುದು ಎಂಬ ಆಯ್ಕೆಗಳು ತೆರೆದುಕೊಳ್ಳುತ್ತವೆ. ಸ್ವಿಗ್ಗಿಯ ಸಾವಿರಾರು ಹೋಟೆಲ್‌ಗಳ ಪಟ್ಟಿಯಿಂದ ಬೇಕಾದ ತಿನಿಸುಗಳನ್ನು ಆಯ್ಕೆ ಮಾಡಿ ಆನ್‌ಲೈನ್ ಪಾವತಿ ಮಾಡಬಹುದು.

ವಿಶೇಷವೆಂದರೆ, ಪ್ರಯಾಣಿಕರು ತಾವು ಪ್ರಯಾಣ ಬೆಳೆಸುವ 4 ದಿನಗಳ ಮುಂಚಿತವಾಗಿ ಅಥವಾ ರೈಲು ನಿಲ್ದಾಣ ತಲುಪುವ ಕೇವಲ 30 ನಿಮಿಷಗಳ ಮೊದಲು ಕೂಡ ಆಹಾರವನ್ನು ಆರ್ಡರ್ ಮಾಡಬಹುದು. ಲೈವ್ ಟ್ರ್ಯಾಕಿಂಗ್ ಸೌಲಭ್ಯ ಕೂಡ ಇದ್ದು, ರೈಲಿನಲ್ಲಿ ಆರ್ಡರ್ ಮಾಡುವ ಎಲ್ಲಾ ಆಹಾರಗಳಿಗೆ ಸ್ವಿಗ್ಗಿ ಖಚಿತ ಡೆಲಿವರಿ ಅಥವಾ ಪೂರ್ಣ ಹಣ ಮರುಪಾವತಿ’ ಭರವಸೆಯನ್ನು ನೀಡಿದೆ.

ಈ ಹೊಸ ಸೇವೆಯ ಕುರಿತು ಮಾತನಾಡಿರುವ ಇಕ್ಸಿಗೋ ಮತ್ತು ಕನ್ಫರ್ಮ್ ಟಿಕೆಟ್‌ನ ಸಿಒಒ ಶ್ರೀಪಾದ್ ವೈದ್ಯ, ʼರೈಲು ಪ್ರಯಾಣವನ್ನು ಸುಲಭಗೊಳಿಸುವುದು ನಮ್ಮ ಪ್ರಮುಖ ಗುರಿಯಾಗಿದೆ. ನಮ್ಮ ತಂತ್ರಜ್ಞಾನವನ್ನು ಸ್ವಿಗ್ಗಿಯ ಬಲಿಷ್ಠ ಡೆಲಿವರಿ ಜಾಲದೊಂದಿಗೆ ಸಂಯೋಜಿಸುವ ಮೂಲಕ ಪ್ರಯಾಣಿಕರಿಗೆ ಸಮಯಕ್ಕೆ ಸರಿಯಾಗಿ ಗುಣಮಟ್ಟದ ಆಹಾರ ಒದಗಿಸುತ್ತಿದ್ದೇವೆʼ ಎಂದಿದ್ದಾರೆ.

ಸ್ವಿಗ್ಗಿಯ ಉಪಾಧ್ಯಕ್ಷ ದೀಪಕ್ ಮಾಲೂ ಪ್ರತಿಕ್ರಿಯಿಸಿ, ಭಾರತೀಯ ರೈಲ್ವೆಯಲ್ಲಿ ಪ್ರತಿದಿನ 1.8 ಕೋಟಿಗೂ ಹೆಚ್ಚು ಜನ ಪ್ರಯಾಣಿಸುತ್ತಾರೆ. ಇವರ ಹಸಿವಿನ ಸಮಸ್ಯೆಯನ್ನು ನೀಗಿಸಲು ಈ ಒಪ್ಪಂದ ನೆರವಾಗಲಿದೆ. ಮನೆಯಲ್ಲಿ ಸಿಗುವಂತಹ ಗುಣಮಟ್ಟದ ಆಹಾರವು ಇನ್ಮುಂದೆ ರೈಲು ಪ್ರಯಾಣದಲ್ಲೂ ಸಿಗಲಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

Shwetha M