ನನ್ನ ಉಚ್ಚಾಟನೆ ಹಾಸ್ಯಾಸ್ಪದ, ಟ್ರಸ್ಟ್​ನವರಿಗೆ ಲೆಕ್ಕ ಕೇಳಿದ್ದಕ್ಕೆ ಟಾರ್ಗೆಟ್​ – ಉಚ್ಚಾಟನೆ ಬೆನ್ನೆಲ್ಲೇ ಸಿಡಿದ ವಚನಾನಂದ ಸ್ವಾಮೀಜಿ

ನನ್ನ ಉಚ್ಚಾಟನೆ ಹಾಸ್ಯಾಸ್ಪದ,  ಟ್ರಸ್ಟ್​ನವರಿಗೆ ಲೆಕ್ಕ ಕೇಳಿದ್ದಕ್ಕೆ ಟಾರ್ಗೆಟ್​ –   ಉಚ್ಚಾಟನೆ ಬೆನ್ನೆಲ್ಲೇ ಸಿಡಿದ  ವಚನಾನಂದ ಸ್ವಾಮೀಜಿ

ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು, ಖ್ಯಾತ ಯೋಗಗುರು ವಚನಾನಂದ ಸ್ವಾಮೀಜಿಯನ್ನು ಪೀಠದಿಂದ ಉಚ್ಚಾಟನೆ ಮಾಡಲಾಗಿದೆ. ಈ ಬೆಳವಣಿಗೆ ಧಾರ್ಮಿಕ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಇದನ್ನೂ ಓದಿ: ಡಗೌಟ್‌ನಲ್ಲಿ ಮೊಬೈಲ್ ಬಳಸಿದ ರಾಜಸ್ಥಾನ್ ರಾಯಲ್ಸ್‌ಗೆ ಬಿಗ್ ಶಾಕ್ – BCCI ಭ್ರಷ್ಟಾಚಾರ ವಿರೋಧಿ ಘಟಕದಿಂದ  ತನಿಖೆ

ಮೂಲಗಳ ಪ್ರಕಾರ, ಹರಿಹರ ತಾಲೂಕಿನ ಹನಗವಾಡಿ ಸಮೀಪದ ಗುರುಪೀಠದಲ್ಲಿ ನಡೆದ ಧರ್ಮದರ್ಶಿಗಳ ಸಭೆಯಲ್ಲಿ ಸುಮಾರು 12 ಮಂದಿ ಧರ್ಮದರ್ಶಿಗಳು ಭಾಗವಹಿಸಿ, ವಚನಾನಂದ ಸ್ವಾಮೀಜಿಯ ಪದಚ್ಯುತಿ ಕುರಿತು ಅಂತಿಮ ನಿರ್ಧಾರ ತೆಗೆದುಕೊಂಡರು. ಮಠದಲ್ಲಿ ಪ್ರಧಾನ ಧರ್ಮದರ್ಶಿ ಬಿ.ಸಿ. ಉಮಾಪತಿ ಅವರ ನೇತೃತ್ವದಲ್ಲಿ ಟ್ರಸ್ಟ್ ಸಭೆ ನಡೆಯಿತು. ಈ ಸಭೆಯಲ್ಲಿ ಟ್ರಸ್ಟ್ ಕಾರ್ಯದರ್ಶಿ ಕೆ.ಎಂ. ಜ್ಯೋತಿಪ್ರಕಾಶ್, ಬಸವರಾಜ ದಿಂಡೂರ, ಬಾವಿ ಬೆಟ್ಟಪ್ಪ, ಚಂದ್ರಶೇಖರ ಪೂಜಾರ್ ಸೇರಿದಂತೆ ಹತ್ತಕ್ಕೂ ಹೆಚ್ಚು ಟ್ರಸ್ಟಿಗಳು ಮತ್ತು ಸದಸ್ಯರು ಭಾಗವಹಿಸಿದರು. ಸಭೆ ಅರ್ಧ ಗಂಟೆಗೂ ಹೆಚ್ಚು ಕಾಲ ನಡೆದಿದ್ದು, ಬಳಿಕ ಟ್ರಸ್ಟಿಗಳು ಶಾಲಾ ವಾಹನದಲ್ಲಿ ಬಿಗಿ ಭದ್ರತೆಯೊಂದಿಗೆ ಸ್ಥಳ ತೊರೆದರು.

ಮಠದ ಪ್ರವೇಶದ್ವಾರ ಬಳಿ ಜಮಾವಣೆಗೊಂಡಿದ್ದ ಭಕ್ತರು ಟ್ರಸ್ಟಿಗಳ ವಿರುದ್ಧ ಧಿಕ್ಕಾರ ಘೋಷಣೆಗಳನ್ನು ಕೂಗಿದರು. ಪರಿಸ್ಥಿತಿ ಉದ್ವಿಗ್ನವಾಗುವ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು, ಮಠದ ಸುತ್ತಮುತ್ತಲಿನ 2 ಕಿಲೋಮೀಟರ್ ವ್ಯಾಪ್ತಿಯಲ್ಲಿ ಸಂಜೆ 5 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಯಿತು. ಭಕ್ತರನ್ನು ನಿಯಂತ್ರಿಸಲು ಪ್ರವೇಶದ್ವಾರದಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿತ್ತು.

ನನ್ನ ಉಚ್ಚಾಟನೆ ಹಾಸ್ಯಾಸ್ಪದ

ನನ್ನ ಉಚ್ಚಾಟನೆ ಹಾಸ್ಯಾಸ್ಪದ. ಟ್ರಸ್ಟ್​ನವರಿಗೆ ಲೆಕ್ಕ ಕೇಳಿದ್ದಕ್ಕೆ ಟಾರ್ಗೆಟ್​ ಮಾಡುತ್ತಿದ್ದಾರೆ. ವ್ಯವಸ್ಥಿತವಾಗಿ ಷಡ್ಯಂತ್ರ ಮಾಡಿ ನನ್ನನ್ನು ಉಚ್ಚಾಟನೆ ಮಾಡಿದ್ದಾರೆ ಎಂದು ವಚನಾನಂದಶ್ರೀ ಆರೋಪಿಸಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶ್ವಾಸಪೀಠದಿಂದಲೇ ನನ್ನನ್ನು ಸಮಾಜ ಗುರುತಿಸಿದೆ. ಶ್ವಾಸಪೀಠ ಹಾಗೂ ನನ್ನ ಹೆಸರಿನಲ್ಲಿ ಒಂದು ಇಂಚು ಭೂಮಿ ಇಲ್ಲ. ಪೀಠಾಧ್ಯಕ್ಷರಾದ ಬಳಿಕ ಪೂರ್ವಶ್ರಮಕ್ಕೆ ಒಮ್ಮೆಯೂ ಭೇಟಿ ನೀಡಿಲ್ಲ ಎಂದು ಕಿರಿಕಾರಿದರು. ನಾನು ಲಕ್ಷಾಂತರ ಭಕ್ತರಿಗೆ ಉತ್ತರಿಸಬೇಕು, ಈ 12 ಜನರಿಗೆ ಉತ್ತರಿಸಲ್ಲ. ಟ್ರಸ್ಟ್​ನ ಸದಸ್ಯರು ಕೋಟ್ಯಂತರ ರೂಪಾಯಿ ಅವ್ಯವಹಾರ ಮಾಡಿದ್ದಾರೆ. ತಮ್ಮ ಅವ್ಯವಹಾರ ಮುಚ್ಚಿ ಹಾಕಿಕೊಳ್ಳಲು ನನ್ನ ಟಾರ್ಗೆಟ್ ಮಾಡಿದ್ದಾರೆ. 2008ರಿಂದಲೂ ಪಂಚಮಸಾಲಿ ಗುರುಪೀಠದ ಲೆಕ್ಕವನ್ನು ಕೊಟ್ಟಿಲ್ಲ. ಇನ್ನು ಕಾನೂನು ಹೋರಾಟದ ಬಗ್ಗೆ ಭಕ್ತರ ಜೊತೆ ಚರ್ಚೆ ಮಾಡಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.

Kishor KV