ಬೆಕ್ಕುಗಳ ಲವ್‌ಸ್ಟೋರಿಗೆ ನೆರೆಮನೆಯವರ ಮಧ್ಯೆ ಮಾರಾಮಾರಿ! – ಪೊಲೀಸ್‌ ಎಂಟ್ರಿ.. ಆಮೇಲೆ ಏನಾಯ್ತು?

ಬೆಕ್ಕುಗಳ ಲವ್‌ಸ್ಟೋರಿಗೆ ನೆರೆಮನೆಯವರ ಮಧ್ಯೆ ಮಾರಾಮಾರಿ! – ಪೊಲೀಸ್‌ ಎಂಟ್ರಿ.. ಆಮೇಲೆ ಏನಾಯ್ತು?

ಮನೆಯಲ್ಲಿ ಸಾಕು ಪ್ರಾಣಿಗಳಿದ್ರೆ ಅಕ್ಕ-ಪಕ್ಕದ ಮನೆಗೆ ಹೋಗುವುದು ಕಾಮನ್.‌ ಸಾಕು ಪ್ರಾಣಿಗಳು ಆಟವಾಡಿಕೊಂಡು ಇರುತ್ತವೆ. ಇದೀಗ ಇಲ್ಲೊಂದು ಕಡೆ ಮನೆಯಲ್ಲಿ ಬೆಕ್ಕು ಮರಿ ಹಾಕಿದ್ದಕ್ಕೆ ಆ ಮನೆಯವರು ನೆರೆಮನೆಯವರೊಂದಿಗೆ ಜಗಳವಾಡಿದ್ದಾರೆ. ನಮ್ಮ ಬೆಕ್ಕು ಮರಿ ಹಾಕಲು ನಿಮ್ಮ ಗಂಡು ಬೆಕ್ಕೇ ಕಾರಣ ಎಂದು ಗಂಭೀರ ಆರೋಪ ಮಾಡಿರುವ ವಿಲಕ್ಷಣಕಾರಿ ಘಟನೆ ನಡೆದಿದೆ. ಎರಡು ಮನೆಯ ಬೆಕ್ಕುಗಳ ಲವ್ ಸ್ಟೋರಿಯಿಂದಾಗಿ ಶುರುವಾದ ಜಗಳ ಕೊನೆಗೆ ಪೊಲೀಸ್‌ ಠಾಣೆ ಮೆಟ್ಟಿಲೇರುವಂತೆ ಆಗಿದೆ.

ಇದನ್ನೂ ಓದಿ: ಪ್ರಚಾರದ ವೇಳೆ ಅಭಿಮಾನಿ ಹೂವು ಎಸೆಯುತ್ತಿದ್ದಂತೆ ಬಾಂಬ್‌ ಎಂದು ಭಾವಿಸಿ ಓಡಿದ ದಳಪತಿ ವಿಜಯ್!

ಈ ಘಟನೆ ಬೆಂಗಳೂರಿನ ಶೇಷಾದ್ರಿಪುರದಲ್ಲಿ ನಡೆದಿದೆ. ನೆರೆಹೊರೆಯವರ ಎರಡು ಬೆಕ್ಕುಗಳು ಪ್ರಕೃತಿ ನಿಯಮದಂತೆ ಸೇರಿವೆ. ಇದರಿಂದ ಹೆಣ್ಣು ಬೆಕ್ಕು ನಾಲ್ಕು ಮುದ್ದಾದ ಮರಿಗಳಿಗೆ ಜನ್ಮ ನೀಡಿದೆ. ಮರಿಗಳು ಹುಟ್ಟಿದ ಕೂಡಲೇ ಸಿಟ್ಟಿಗೆದ್ದ ಹೆಣ್ಣು ಬೆಕ್ಕಿನ ಮಾಲೀಕರು, ಗಂಡು ಬೆಕ್ಕಿನ ಮಾಲೀಕರೊಂದಿಗೆ ಜಗಳಕ್ಕೆ ಇಳಿದಿದ್ದಾರೆ. ನಮ್ಮ ಬೆಕ್ಕು ಮರಿ ಹಾಕಿರೊದಕ್ಕೆ ನಿಮ್ಮ ಬೆಕ್ಕು ಕಾರಣ. ಮರಿಗಳನ್ನ ನೀವೇ ಸಾಕಿ ಎಂದು ಮರಿಗಳನ್ನು ಗಂಡು ಬೆಕ್ಕಿನವರ ಮನೆಗೆ ಬಿಟ್ಟಿದ್ದಾರೆ.  ಇದೇ ವಿಚಾರವಾಗಿ ಶುರುವಾದ ಜಗಳ ತಾರಕಕ್ಕೇರಿದೆ. ಬಳಿಕ ಹೆಣ್ಣು ಬೆಕ್ಕಿನ ಮನೆಯವರು ನಿಮ್ಮ ಮಕ್ಕಳಿಗೆ ಆಸಿಡ್ ಹಾಕುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತಿದ್ದಂತೆ ಗಂಡು ಬೆಕ್ಕಿನ ಮನೆಯವರು ತಕ್ಷಣವೇ 112ಕ್ಕೆ ಕರೆ ಮಾಡಿ ಪೊಲೀಸರನ್ನು ಸ್ಥಳಕ್ಕೆ ಕರೆಸಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಪೊಲೀಸರು ಎರಡೂ ಕಡೆಯವರ ಜಗಳವನ್ನು ಬಿಡಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಬಳಿಕ ನಾಲ್ಕು ಬೆಕ್ಕಿನ ಮರಿಗಳಲ್ಲಿ ಎರಡೆರಡು ಬೆಕ್ಕುಗಳನ್ನು ಎರಡೂ ಮನೆಯವರಿಗೆ ಹಂಚಿ ಪ್ರಕರಣವನ್ನು ಇತ್ಯರ್ಥಪಡಿಸಿದ್ದಾರೆ.

Shwetha M