ಡಗೌಟ್‌ನಲ್ಲಿ ಮೊಬೈಲ್ ಬಳಸಿದ ರಾಜಸ್ಥಾನ್ ರಾಯಲ್ಸ್‌ಗೆ ಬಿಗ್ ಶಾಕ್ – BCCI ಭ್ರಷ್ಟಾಚಾರ ವಿರೋಧಿ ಘಟಕದಿಂದ  ತನಿಖೆ

ಡಗೌಟ್‌ನಲ್ಲಿ ಮೊಬೈಲ್ ಬಳಸಿದ ರಾಜಸ್ಥಾನ್ ರಾಯಲ್ಸ್‌ಗೆ ಬಿಗ್ ಶಾಕ್ –  BCCI  ಭ್ರಷ್ಟಾಚಾರ ವಿರೋಧಿ ಘಟಕದಿಂದ  ತನಿಖೆ

ಐಪಿಎಲ್  ನಿಯಮಗಳ ಉಲ್ಲಂಘನೆಯ ಆರೋಪದ ಮೇಲೆ ರಾಜಸ್ಥಾನ್ ರಾಯಲ್ಸ್   ತಂಡದ ಮ್ಯಾನೇಜರ್ ರೋಮಿ ಭಿಂದರ್ ಅವರು ಬಿಸಿಸಿಐನ ಭ್ರಷ್ಟಾಚಾರ ವಿರೋಧಿ ಘಟಕದ  ತನಿಖೆಗೆ ಗುರಿಯಾಗಿದ್ದಾರೆ. ಪಂದ್ಯದ ವೇಳೆ ಡಗೌಟ್‌ನಲ್ಲಿ ಮೊಬೈಲ್ ಫೋನ್ ಬಳಸುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿರುವುದು ಈ ವಿವಾದಕ್ಕೆ ಕಾರಣವಾಗಿದೆ.

ಏಪ್ರಿಲ್ 10 ರಂದು ಗುವಾಹಟಿಯಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧದ ಪಂದ್ಯದ ವೇಳೆ ಈ ಘಟನೆ ನಡೆದಿದೆ. ರಾಜಸ್ಥಾನ್ ರಾಯಲ್ಸ್ ತಂಡದ ಡಗೌಟ್‌ನಲ್ಲಿ ಯುವ ಆಟಗಾರ ವೈಭವ್ ಸೂರ್ಯವಂಶಿ ಪಕ್ಕದಲ್ಲಿ ಕುಳಿತಿದ್ದ ರೋಮಿ ಭಿಂದರ್ ಅವರು ಮೊಬೈಲ್ ಫೋನ್ ಬಳಸುತ್ತಿರುವುದು ಟೆಲಿವಿಷನ್ ಪರದೆಯ ಮೇಲೆ ಸ್ಪಷ್ಟವಾಗಿ ಗೋಚರಿಸಿತ್ತು.ಐಪಿಎಲ್ ನಿಯಮಗಳ ಪ್ರಕಾರ, ‘ಪ್ಲೇಯರ್ಸ್ ಅಂಡ್ ಮ್ಯಾಚ್ ಆಫೀಶಿಯಲ್ಸ್ ಏರಿಯಾ’ (PMOA) ಅಡಿಯಲ್ಲಿ ಡಗೌಟ್‌ನಲ್ಲಿ ಯಾವುದೇ ಎಲೆಕ್ಟ್ರಾನಿಕ್ ಸಾಧನಗಳನ್ನು ಬಳಸುವುದು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

ಇದನ್ನೂ ಓದಿ: ವೈಟ್‌ಬಾಲ್‌ ಕ್ರಿಕೆಟ್‌ನಲ್ಲಿ ರಿಷಭ್‌ ಪಂತ್‌ ಅತ್ಯಂತ ಕೆಟ್ಟ ಬ್ಯಾಟ್ಸ್‌ಮನ್‌ – ಲಕ್ನೋ ನಾಯಕ ಪಂತ್ ಹಿಗ್ಗಾಮುಗ್ಗಾ ಟ್ರೋಲ್

ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ, ವೀಡಿಯೊ ಪುರಾವೆಗಳನ್ನು ಪರಿಶೀಲಿಸಲಾಗುತ್ತಿದೆ. ಅಲ್ಲದೆ ಭ್ರಷ್ಟಾಚಾರ ವಿರೋಧಿ ಘಟಕದ (ACU) ತನಿಖಾ ವರದಿಯ ಆಧಾರದ ಮೇಲೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ತನಿಖೆ ನಂತ್ರ ಮುಂದಿನ ಕೆಲವು ಪಂದ್ಯಗಳಿಗೆ ಡಗೌಟ್‌ಗೆ ಪ್ರವೇಶ ನಿಷೇಧಿಸಬಹುದು. ದೊಡ್ಡ ಮೊತ್ತದ ದಂಡ ವಿಧಿಸುವ ಸಾಧ್ಯತೆಯಿದೆ.  ಮೊದಲ ಬಾರಿಯ ತಪ್ಪೆಂದು ಪರಿಗಣಿಸಿ ಕಠಿಣ ಎಚ್ಚರಿಕೆ ನೀಡಬಹುದು.

ಆರೋಗ್ಯ ಸಮಸ್ಯೆಯಿಂದ ಮೊಬೈಲ್ ಬಳಕೆ 

ಇನ್ನೊಂದೆಡೆ, ರಾಜಸ್ಥಾನ್ ರಾಯಲ್ಸ್ ತಂಡದ ಮ್ಯಾನೇಜರ್ ರೋಮಿ ಭಿಂದರ್ ಅವರು ಮೊಬೈಲ್ ಬಳಸಿದ್ದು ವೈದ್ಯಕೀಯ ತುರ್ತು ಪರಿಸ್ಥಿತಿಯ ಕಾರಣಕ್ಕೆ ಎನ್ನಲಾಗುತ್ತಿದೆ. ಇತ್ತೀಚೆಗಷ್ಟೇ ಅವರು ಶ್ವಾಸಕೋಶದ ಸಮಸ್ಯೆಯಿಂದ  ಚೇತರಿಸಿಕೊಂಡಿದ್ದು, ಅವರಿಗೆ ಮೆಟ್ಟಿಲು ಹತ್ತುವುದು ಅಥವಾ ಹೆಚ್ಚು ಓಡಾಟ ಮಾಡುವುದು ಕಷ್ಟಕರವಾಗಿದೆ.ಡ್ರೆಸ್ಸಿಂಗ್ ರೂಮ್ ಮತ್ತು ಡಗೌಟ್ ನಡುವೆ ಪದೇ ಪದೇ ಓಡಾಡಲು ಸಾಧ್ಯವಾಗದ ಕಾರಣ ಅವರು ತಮ್ಮ ಬಳಿಯೇ ಫೋನ್ ಇಟ್ಟುಕೊಂಡಿದ್ದರು ಎಂಬ ವಾದ ಕೇಳಿಬರುತ್ತಿದೆ.

Kishor KV