ಕಾವೇರಿ, ಕಾಳಿ, ಕುಮಾರಧಾರ ಸೇರಿ 17 ನದಿಗಳ ನೀರು ಕುಡಿಯಲು ಯೋಗ್ಯವಲ್ಲ..!

ಕಾವೇರಿ, ಕಾಳಿ, ಕುಮಾರಧಾರ ಸೇರಿ 17 ನದಿಗಳ ನೀರು ಕುಡಿಯಲು ಯೋಗ್ಯವಲ್ಲ..!

ಬೆಂಗಳೂರು: ಕಾವೇರಿ, ಕಬಿನಿ, ಕಾಳಿ, ನೇತ್ರಾವತಿ, ಕುಮಾರಧಾರಾ ಹೀಗೆ ಕರ್ನಾಟಕದ ಈ ನದಿಗಳು ಜನರ ಪಾಲಿನ ಜೀವನದಿಗಳು. ಜೊತೆಗೆ ಪವಿತ್ರ ನದಿಗಳು ಕೂಡಾ. ಆದರೆ, ಈ ಪವಿತ್ರ ನದಿಗಳ ನೀರು ನೇರವಾಗಿ ಕುಡಿಯಲು ಯೋಗ್ಯ ಅಲ್ಲವೇ ಅಲ್ಲ ಅನ್ನೋ ಬೆಚ್ಚಿಬೀಳುವ ಮಾಹಿತಿಯೊಂದು ಹೊರಬಿದ್ದಿದೆ. ಮಾಲಿನ್ಯ ನಿಯಂತ್ರಣ ಮಂಡಳಿ ಬಿಡುಗಡೆ ಮಾಡಿರುವ ವರದಿ ನಿಜಕ್ಕೂ ಆತಂಕಕಾರಿಯಾಗಿದೆ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಬಿಡುಗಡೆ ಮಾಡಿರುವ ವರದಿಯಲ್ಲಿ ರಾಜ್ಯದ ಪ್ರಮುಖ 17 ನದಿಗಳು ಕಲುಷಿತ ಆಗಿರೋದು ಬಯಲಾಗಿದೆ. ಈ ವರ್ಷ ಮಾಲಿನ್ಯ ನಿಯಂತ್ರಣ ಮಂಡಳಿ ನದಿಗಳ ಹರಿವಿನಲ್ಲಿ ನೀರನ್ನ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಿದೆ. ಅದರಲ್ಲಿ 17 ನದಿಗಳ ನೀರು ನೇರವಾಗಿ ಕುಡಿಯೋಕೆ ಯೋಗ್ಯವಲ್ಲ ಅಂತಾ ವರದಿಯಾಗಿದೆ.

ಇದನ್ನೂ ಓದಿ:  ಮತ್ತೆ ಜಗತ್ತಿನ ಸರ್ವನಾಶದ ಎಚ್ಚರಿಕೆ ನೀಡಿದ ‘ಡೂಮ್ಸ್ ಡೇ ಕ್ಲಾಕ್’..!

ಕನ್ನಡನಾಡಿನ ಜೀವನದಿ ಅಂತಾನೇ ಕರೆಯುವ ಕಾವೇರಿ ನದಿ, ಕೃಷ್ಣಾ ನದಿ, ಅರ್ಕಾವತಿ ನದಿ, ಲಕ್ಷ್ಮಣ ತೀರ್ಥ ನದಿ, ಮಲಪ್ರಭಾ ನದಿ, ತುಂಗಭದ್ರಾ ನದಿ, ಭದ್ರಾ ನದಿ, ಕಬಿನಿ ನದಿ, ಕಗಿನಿ ನದಿ, ಕಾಳಿ ನದಿ, ಅಸಂಗಿ ಕೃಷ್ಣ ನದಿ, ಶಿಂಷಾ ನದಿ, ಭೀಮಾ ನದಿ, ನೇತ್ರಾವತಿ ನದಿ, ಕುಮಾರಧಾರ ನದಿ, ತುಂಗಾ ನದಿ, ಯಗಚಿ ನದಿಗಳ ನೀರು ನೇರವಾಗಿ ಕುಡಿಯಲು ಯೋಗ್ಯವಲ್ಲ ಎಂದು ವರದಿಯಲ್ಲಿ ಬಹಿರಂಗವಾಗಿದೆ.

ರಾಜ್ಯದ 17 ನದಿಗಳ ಹರಿವಿನಲ್ಲಿ ವಿವಿಧ ಜಿಲ್ಲೆಗಳಲ್ಲಿ 103 ತಪಾಸಣೆ ಕೇಂದ್ರಗಳನ್ನು ಮಾಲಿನ್ಯ ನಿಯಂತ್ರಣ ಮಂಡಳಿ ಸ್ಥಾಪಿಸಿದೆ. ಅಲ್ಲಿಂದ ನೀರಿನ ಮಾದರಿ ಸಂಗ್ರಹಿಸಿ, ಅಧ್ಯಯನ ನಡೆಸಿ, ಗುಣಮಟ್ಟವನ್ನು ದಾಖಲಿಸಿದ್ದು, ಐದು ವರ್ಗಗಳಲ್ಲಿ ನೀರಿನ ಮಟ್ಟವನ್ನು ಗುರುತಿಸಲಾಗಿದೆ.

ಮಹಾನಗರಗಳು ಹಾಗೂ ನಗರಗಳಲ್ಲಿನ ಕಂಪನಿಗಳು, ಕಾರ್ಖಾನೆಗಳು ಹೊರಸೂಸುವ ಕೆಮಿಕಲ್ ಹಾಗೂ ತ್ಯಾಜ್ಯದಿಂದಲೇ ನೀರು ಕಲುಷಿತ ಆಗ್ತಿದೆ ಎಂದು ಹೇಳಲಾಗ್ತಿದೆ. ಸರ್ಕಾರ ಈ ನದಿಗಳ ಮಾಲಿನ್ಯ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿಬರುತ್ತಿದ್ದು, ಈ ಬಗ್ಗೆ ಸರ್ಕಾರ ಯಾವ ನಿಲುವು ತಾಳಲಿದೆ ಅನ್ನೋದನ್ನ ನೋಡಬೇಕಿದೆ.

suddiyaana