ಉಪಚುನಾವಣೆ ಮುಗಿಯುತ್ತಿದ್ದಂತೆ ಕಾಂಗ್ರೆಸ್‌ನಲ್ಲಿ ಸಚಿವ ಸ್ಥಾನಕ್ಕೆ ಫೈಟ್! – ದೆಹಲಿಗೆ ಹೊರಟ 20ಕ್ಕೂ ಹೆಚ್ಚು ಕೈ ಶಾಸಕರು!

ರಾಜ್ಯದಲ್ಲಿ ಉಪಚುನಾವಣೆ ಮುಗಿದಿದೆ. ಈ ಬೆನ್ನಲ್ಲೇ ಕೈನಾಯಕರು ಮತ್ತೆ ಆಕ್ಟಿವ್ ಆಗಿದ್ದಾರೆ. ಇದೀಗ ಮತ್ತೆ ಸಚಿವ ಸಂಪುಟ ಪುನರ್ ರಚನೆಯಾಗುವ ನಿರೀಕ್ಷೆಯಲ್ಲಿರುವಕ ಕೈ ನಾಯಕರು ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.
ಇದನ್ನೂ ಓದಿ: ವಜ್ರದ ನೆಕ್ಲೆಸ್.. ಕೆಜಿಗಟ್ಟಲೆ ಚಿನ್ನ.. ಬೆಳಗಾವಿ ನಗರಾಭಿವೃದ್ಧಿ ಕೋಶದ ಇಂಜಿನಿಯರ್ ಮನೆ ಸಂಪತ್ತು ನೋಡಿ ಅಧಿಕಾರಿಗಳು ಶಾಕ್!
ಕಾಂಗ್ರೆಸ್‌ನ 20ಕ್ಕೂ ಹೆಚ್ಚು ಹಿರಿಯ ಶಾಸಕರು ಭಾನುವಾರ ದೆಹಲಿಗೆ ಪ್ರಯಾಣ ಬೆಳೆಸಲು ಮುಂದಾಗಿದ್ದು, ಹೈಕಮಾಂಡ್ ಮಟ್ಟದಲ್ಲಿ ಲಾಬಿ ನಡೆಸಲು ಸಜ್ಜಾಗಿದ್ದಾರೆ. ಸರ್ಕಾರದ ಮುಖ್ಯ ಸಚೇತಕ ಅಶೋಕ್ ಪಟ್ಟಣ್ ಮತ್ತು ಹಿರಿಯ ಶಾಸಕ ಟಿ.ಬಿ. ಜಯಚಂದ್ರ ಅವರ ನೇತೃತ್ವದಲ್ಲಿ ಶಾಸಕರ ತಂಡ ನಾಳೆ ದೆಹಲಿಗೆ ತೆರಳಲಿದೆ. ಈ ತಂಡದಲ್ಲಿ ಮೂರರಿಂದ ಆರು ಬಾರಿ ಗೆದ್ದಿರುವ ಅನುಭವಿ ಶಾಸಕರು ಸೇರಿದ್ದಾರೆ.
ಸರ್ಕಾರ ರಚನೆಯಾಗಿ ಮೂರು ವರ್ಷಗಳು ಕಳೆಯುತ್ತಾ ಬಂದಿವೆ. ಆರಂಭದಲ್ಲಿ ಎರಡೂವರೆ ವರ್ಷದ ನಂತರ ಸಂಪುಟ ಪುನರ್ ರಚನೆ ಮಾಡಿ ಹೊಸಬರಿಗೆ ಅವಕಾಶ ನೀಡಲಾಗುವುದು ಎಂಬ ಭರವಸೆ ನೀಡಲಾಗಿತ್ತು. ಪಕ್ಷಕ್ಕಾಗಿ ನಾವು ನಿರಂತರವಾಗಿ ದುಡಿದಿದ್ದೇವೆ. ಉಳಿದಿರುವ ಎರಡು ವರ್ಷದ ಅವಧಿಗಾದರೂ ನಮಗೆ ಸಚಿವ ಸ್ಥಾನ ನೀಡಬೇಕು ಎಂಬುದು ಶಾಸಕರ ವಾದವಾಗಿದೆ. ಇದಕ್ಕಾಗಿ ಸಂಪುಟ ಪುನರ್ ರಚನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸೂಚನೆ ನೀಡುವಂತೆ ಹೈಕಮಾಂಡ್‌ಗೆ ಅವರು ಒತ್ತಾಯಿಸಲಿದ್ದಾರೆ.
ಕಾಂಗ್ರೆಸ್ ಹೈಕಮಾಂಡ್ ನಾಯಕರಾದ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಸಿ ವೇಣುಗೋಪಾಲ್ ಮತ್ತು ರಣದೀಪ್ ಸಿಂಗ್ ಸುರ್ಜೇವಾಲ ಅವರನ್ನು ಭೇಟಿ ಮಾಡಿ ಸಚಿವ ಸ್ಥಾನಕ್ಕಾಗಿ ಮನವಿ ಸಲ್ಲಿಸುವುದು ಶಾಸಕರ ಈ ಯಾತ್ರೆಯ ಮುಖ್ಯ ಉದ್ದೇಶ ಎಂದು ಉನ್ನತ ಮೂಲಗಳು ತಿಳಿಸಿವೆ.
ಇನ್ನು ನಾಯಕತ್ವ ಬದಲಾವಣೆಯ ಕುರಿತಾದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿರುವ ಶಾಸಕರು, ‘ನಾಯಕತ್ವದ ವಿಚಾರ ಹೈಕಮಾಂಡ್‌ಗೆ ಬಿಟ್ಟಿದ್ದು, ವರಿಷ್ಠರು ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ. ಆದರೆ ಸಚಿವ ಸಂಪುಟದಲ್ಲಿ ಹಿರಿಯ ಮತ್ತು ಅನುಭವಿ ಶಾಸಕರಿಗೆ ಅವಕಾಶ ನೀಡಬೇಕು’ ಎಂದು ಆಗ್ರಹಿಸಿದ್ದಾರೆ. ಏಪ್ರಿಲ್ 17ರ ನಂತರ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳು ಕೂಡ ದೆಹಲಿಗೆ ಭೇಟಿ ನೀಡಲಿದ್ದು, ಅದಕ್ಕೂ ಮುನ್ನವೇ ಈ ಶಾಸಕರ ತಂಡ ವರಿಷ್ಠರ ಮನವೊಲಿಸಲು ಮುಂದಾಗಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.

ನೋಡಿರಿ

