RCBಗೆ ಮೊದಲ ಸೋಲು, RRಗೆ 4ನೇ ಗೆಲುವು – ವೈಭವ್ ಬ್ಯಾಟಿಂಗ್ ಅಬ್ಬರ ಶಾಕ್ ಆದ ರಾಯಲ್ ಚಾಲೆಂಜರ್ಸ್

ಹಾಲಿ ಚಾಂಪಿಯನ್ ಆರ್‌ಸಿಬಿ 2026ರ IPL ಸೀಸನ್‌ನಲ್ಲಿ ಮೊದಲ ಸೋಲು ಅನುಭವಿಸಿದೆ. ಗುವಾಹಟಿಯ ಬರ್ಸಪರ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ್ ರಾಯಲ್ಸ್ ನಡುವೆ ನಡೆದ ಪಂದ್ಯದಲ್ಲಿ ಆರ್‌ಸಿಬಿ ಸೋತಿದೆ.. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 201 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ ತಂಡ 18 ಓವರ್‌ಗಳಲ್ಲಿ ಕೇವಲ 4 ವಿಕೆಟ್ ಕಳೆದುಕೊಂಡು ಜಯದ ನಗೆಬೀರಿತು. ರಾಜಸ್ಥಾನದ ಈ ಗೆಲುವಿನಲ್ಲಿ ವೈಭವ್ ಸೂರ್ಯವಂಶಿ ಹಾಗೂ ಧೃವ್ ಜುರೇಲ್ ಅವರ ಅರ್ಧಶತಕ ಪ್ರಮುಖ ಪಾತ್ರವಹಿಸಿತು. ಈ ಗೆಲುವಿನೊಂದಿಗೆ ರಾಜಸ್ಥಾನ್ ಸತತ 4ನೇ ಗೆಲುವು ದಾಖಲಿಸಿದರೆ, ಇತ್ತ ಆರ್‌ಸಿಬಿ ಈ ಆವೃತ್ತಿಯ ಮೊದಲ ಸೋಲು ಎದುರಿಸಿದೆ.
ಇದನ್ನೂ ಓದಿ: ನಮ್ಮ ಮೆಟ್ರೋ ಹಳದಿ ಮಾರ್ಗದ ಪ್ರಯಾಣಿಕರಿಗೆ ಗುಡ್‌ನ್ಯೂಸ್! – ಇನ್ಮುಂದೆ ಪ್ರತಿ 5 ನಿಮಿಷಕ್ಕೊಂದು ರೈಲು ಸಂಚಾರ!
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿಗೆ ಉತ್ತಮ ಆರಂಭ ಸಿಗಲಿಲ್ಲ. ವೇಗಿ ಜೋಫ್ರಾ ಆರ್ಚರ್ ಮೊದಲ ಎಸೆತದಲ್ಲೇ ಫಿಲ್ ಸಾಲ್ಟ್ ಅವರನ್ನು ಔಟ್ ಮಾಡಿ ಆರ್‌ಸಿಬಿಗೆ ಆರಂಭದಲ್ಲೇ ಆಘಾತ ನೀಡಿದರು. ಅಲ್ಲದೆ ಈ ಪಂದ್ಯದಲ್ಲಿ ಆರ್‌ಸಿಬಿಯ ಅಗ್ರ ಕ್ರಮಾಂಕ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ. ಆದರೆ ನಾಯಕ ರಜತ್ ಪಾಟಿದಾರ್ 40 ಎಸೆತಗಳಲ್ಲಿ 63 ರನ್‌ಗಳ ಉಪಯುಕ್ತ ಇನ್ನಿಂಗ್ಸ್ ಆಡಿದರು. ವಿರಾಟ್ ಕೊಹ್ಲಿ ಕೂಡ 16 ಎಸೆತಗಳಲ್ಲಿ 32 ರನ್ ಬಾರಿಸಿದರು. ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಂದಿದ್ದ ವೆಂಕಟೇಶ್ ಅಯ್ಯರ್ 15 ಎಸೆತಗಳಲ್ಲಿ ಅಜೇಯ 29 ರನ್ ಗಳಿಸಿದರು. ಹೀಗಾಗಿ ಆರ್‌ಸಿಬಿ 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 201 ರನ್ ಗಳಿಸಿತು.
ಮತ್ತೊಂದೆಡೆ, ರಾಜಸ್ಥಾನ್ ರಾಯಲ್ಸ್ ಪರ ಬೌಲಿಂಗ್ನಲ್ಲಿ ಮಿಂಚಿದ ವೇಗಿ ಜೋಫ್ರಾ ಆರ್ಚರ್ ಎರಡು ವಿಕೆಟ್ ಪಡೆದರೆ, ರವಿ ಬಿಷ್ಣೋಯ್ ಮತ್ತು ಬ್ರಿಜೇಶ್ ಶರ್ಮಾ ತಲಾ ಎರಡು ವಿಕೆಟ್ ಪಡೆದರು. ರವೀಂದ್ರ ಜಡೇಜಾ ಮತ್ತು ಸಂದೀಪ್ ಶರ್ಮಾ ಕೂಡ ತಲಾ ಒಂದು ವಿಕೆಟ್ ಪಡೆದರು. ಈ ಗುರಿಯನ್ನು ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ ತಂಡ ಯಶಸ್ವಿ ಜೈಸ್ವಾಲ್ ಅವರ ವಿಕೆಟ್ ಅನ್ನು ಬೇಗನೇ ಕಳೆದುಕೊಂಡಿತು. ಆದರೆ ವೈಭವ್ ಸೂರ್ಯವಂಶಿ ಕೇವಲ 26 ಎಸೆತಗಳಲ್ಲಿ 8 ಬೌಂಡರಿ ಮತ್ತು 7 ಸಿಕ್ಸರ್‌ಗಳ ಸಹಿತ 78 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಆಡಿ ಈ ಪಂದ್ಯವನ್ನು ಆರಂಭದಲ್ಲೇ ಆರ್‌ಸಿಬಿ ಕೈನಿಂದ ಕಿತ್ತುಕೊಂಡರು. ಹಾಗೆಯೇ ಧ್ರುವ್ ಜುರೆಲ್ ಜೊತೆಗೂಡಿ ಎರಡನೇ ವಿಕೆಟ್‌ಗೆ 108 ರನ್‌ಗಳ ಜೊತೆಯಾಟ ನಡೆಸಿದರು. ನಂತರ ಧ್ರುವ್ ಜುರೆಲ್, 43 ಎಸೆತಗಳಲ್ಲಿ 8 ಬೌಂಡರಿ ಮತ್ತು 3 ಸಿಕ್ಸರ್‌ಗಳ ಸಹಿತ ಅಜೇಯ 81 ರನ್ ಬಾರಿಸಿ ತಂಡದ ಗೆಲುವನ್ನು ಖಚಿತಪಡಿಸಿದರು. ಅನುಭವಿ ಜಡೇಜಾ ಕೂಡ 25 ಎಸೆತಗಳಲ್ಲಿ ಅಜೇಯ 24 ರನ್ ಗಳಿಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.

ನೋಡಿರಿ

