ಚೊಚ್ಚಲ ಗರ್ಭಿಣಿ ಹೊಟ್ಟೆಗೆ ಒದ್ದ ಕಿರಾತಕರು!?- ಅವಳಿ ಹೆಣ್ಣು ಶಿಶುಗಳು ಜನಿಸಿದ ಕೆಲವೇ ಕ್ಷಣದಲ್ಲಿ ಸಾ*ವು!

ಚೊಚ್ಚಲ ಗರ್ಭಿಣಿ ಹೊಟ್ಟೆಗೆ ಒದ್ದ ಕಿರಾತಕರು!?- ಅವಳಿ ಹೆಣ್ಣು ಶಿಶುಗಳು ಜನಿಸಿದ ಕೆಲವೇ ಕ್ಷಣದಲ್ಲಿ ಸಾ*ವು!

ಚೊಚ್ಚಲ ಗರ್ಭಿಣಿಯ ಅವಳಿ ಹೆಣ್ಣು ಶಿಶುಗಳು ಜನಿಸಿದ ಕೆಲ ಗಂಟೆಗಳಲ್ಲೇ ಪ್ರಾಣಬಿಟ್ಟಿವೆ. ಗಲಾಟೆ ವೇಳೆ ನಡೆದ ಹಲ್ಲೆಯಿಂದಲೇ ಆರೋಗ್ಯದಲ್ಲಿ ಏರುಪೇರಾಗಿ ಗರ್ಭಿಣಿಗೆ ಅವಧಿಪೂರ್ವವಾಗಿ ಮಕ್ಕಳು ಜನಿಸಿದ್ದು, ಬಳಿಕ ಮೃತಪಟ್ಟಿವೆ ಎಂಬ ಆರೋಪದ ಮೇಲೆ ಪೊಲೀಸರಿಗೆ ದೂರು ನೀಡಲಾಗಿದೆ.

ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಅಲ್ಲಿಪುರ ಗ್ರಾಮದಲ್ಲಿ ಇಂತಹ ಅಮಾನವೀಯ ಘಟನೆ ನಡೆದಿದೆ. ಪವಿತ್ರಾ ಲಮಾಣಿ ಎಂಬವರೇ ಅವಳಿ ಮಕ್ಕಳನ್ನು ಕಳೆದುಕೊಂಡ ನತದೃಷ್ಟ ತಾಯಿ. ಪವಿತ್ರಾ ತಾಯಿ ಹಾಲವ್ವ ನೀಡಿದ ದೂರಿನಡಿ ಸವಣೂರು ಪೊಲೀಸ್​ ಠಾಣೆಯಲ್ಲಿ ಸುರೇಶ ಲಮಾಣಿ, ಪರಶುರಾಮ ಲಮಾಣಿ, ಮಹೇಶ ಲಮಾಣಿ ಹಾಗೂ ಸಕ್ಕುಬಾಯಿ ಎಂಬವರ ವಿರುದ್ಧ 88/2026 ಕಲಂ: 115[2], 118[1], 74, 92, 352, 351(2), 3[5], ಬಿಎನ್​ಎಸ್​ 2023 323, 324, 354, 316, 504, 506, 34 ಐಪಿಸಿ ಅಡಿ ಪ್ರಕರಣ ದಾಖಲಾಗಿದೆ.

ಆಗಿದ್ದೇನು?

 28-03-2026 ರಂದು ರಾತ್ರಿ 10-30 ಗಂಟೆ ಸುಮಾರಿಗೆ ಮಗಳು ಪವಿತ್ರಾಳ ಸೀಮಂತ ಕಾರ್ಯ ಮಾಡುವ ಸಂಬಂಧ ಮಾತನಾಡುತ್ತಾ ಕುಳಿತಾಗ ನಾವು ತೆಗೆದುಕೊಂಡ ಹಣವನ್ನು ವಾಪಸ್​ ಕೊಡುವಂತೆ ಆರೋಪಿತರು ತಂಟೆ ತೆಗೆದಿದ್ದಾರೆ. ನಮ್ಮ ಹತ್ತಿರ ಹಣ ಇಲ್ಲ, ನಿಮ್ಮ ಹಣ ಕೊಟ್ಟು ಮುಟ್ಟಿಸುತ್ತೇವೆ ಅಂತಾ ಅಂದಿದ್ದಕ್ಕೆ ಆರೋಪಿತರು ಅವಾಚ್ಯ ಶಬ್ದಗಳಿಂದ ಬೈದಾಡಿ, ನನಗೆ ಕೈಯಿಂದ ಹೊಡೆದು, ಮೈಮೇಲಿನ ಬಟ್ಟೆ ಹಿಡಿದು ಎಳೆದು ಅವಮಾನಪಡಿಸಿದ್ದಾರೆ. ಈ ವೇಳೆ, ಬಿಡಿಸಲು ಬಂದ ಮಗಳು ಪವಿತ್ರಾ ಗರ್ಭಿಣಿ ಅಂತಾ ಗೊತ್ತಿದ್ದರೂ ಅವಳಿಗೂ ಸಹ ಬೈದಾಡಿ, ಅವಳ ಹೊಟ್ಟೆಗೆ ಕೈಯಿಂದ ಹೊಡೆದು, ಕಾಲಿನಿಂದ ಒದ್ದಿದ್ದಾರೆ ಎಂದು ಮಹಿಳೆಯು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಜೊತೆಗೆ, ಜಗಳ ಬಿಡಿಸಲು ಬಂದ ಅತ್ತೆ, ಮಾವ, ಗಂಡನ ಅಣ್ಣನಿಗೂ ಸಹ ಕೈಯಿಂದ, ತೆಂಗಿನ ಮಟ್ಟೆಯಿಂದ ಹೊಡೆದು ಗಾಯಗೊಳಿಸಿದ್ದಾರೆ. ಗರ್ಭಿಣಿ ಮಗಳಿಗೆ ಹೆಚ್ಚಿನ ಚಿಕಿತ್ಸೆಗಾಗಿ ಹಾವೇರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದಾಗ, ಆರೋಪಿತರು ಅವಳ ಹೊಟ್ಟೆಗೆ ಒದ್ದಿದ್ದರಿಂದ ಹೊಟ್ಟೆಯಲ್ಲಿದ್ದ ಎರಡು ಮಕ್ಕಳಿಗೆ ಪೆಟ್ಟು ಬಿದ್ದು ಅವಧಿಗೂ ಮುನ್ನವೇ 07-04-2026 ರಂದು ಬೆಳಗ್ಗೆ ಎರಡು ಮಕ್ಕಳು ಜನಿಸಿ, ಸಾಯಂಕಾಲ 6-00 ಗಂಟೆಗೆ ಮೃತಪಟ್ಟಿವೆ. ಇದಕ್ಕಾಗಿ ಆಪಾದಿತರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಕೋರಲಾಗಿದೆ. ಈ ಬಗ್ಗೆ ಸವಣೂರು​ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Kishor KV