ಟ್ರೆಕ್ಕಿಂಗ್ ಹೋಗುವವರ ಸುರಕ್ಷತೆಗೆ ಸರ್ಕಾರದಿಂದ ಹೊಸ ಪ್ಲ್ಯಾನ್! – ಚಾರಣಿಗರ ಸುರಕ್ಷತೆಗೆ ಬರಲಿದೆ ಟ್ರ್ಯಾಕಿಂಗ್ ಆ್ಯಪ್, ವಿಮೆ!

ಇತ್ತೀಚೆಗೆ ಕೊಡಗು ಜಿಲ್ಲೆಯ ತಡಿಯಾಂಡಮೋಲ್ ಪರ್ವತದಲ್ಲಿ ಚಾರಣಕ್ಕೆ ತೆರಳಿದ್ದ ಕೇರಳ ಮೂಲದ ಶರಣ್ಯ ಎಂಬ ಮಹಿಳೆ ಮೂರು ದಿನಗಳ ಕಾಲ ಕಾಡಿನಲ್ಲಿ ನಾಪತ್ತೆಯಾಗಿದ್ದ ಘಟನೆ ಸಾಕಷ್ಟು ಆತಂಕ ಹುಟ್ಟಿಸಿತ್ತು. ಇದೇ ರೀತಿ ಚಿಕ್ಕಮಗಳೂರು ಜಿಲ್ಲೆಯ ಚಂದ್ರದ್ರೋಣ ಪರ್ವತ ಪ್ರದೇಶದಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿ ನಾಪತ್ತೆಯಾಗಿದ್ದಾಳೆ. ಆಕೆಯ ಪತ್ತೆಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ. ಇದೀಗ ಚಾರಣಿಗರ ಸುರಕ್ಷತೆಗಾಗಿ ಕರ್ನಾಟಕ ಸರ್ಕಾರ ಮಾಸ್ಟರ್ ಪ್ಲ್ಯಾನ್ ಮಾಡಿದೆ.
ಇದನ್ನೂ ಓದಿ: ಕಾಡಿನಲ್ಲಿ ಎಷ್ಟೇ ಹುಡುಕಿದರೂ ಸಿಗುತ್ತಿಲ್ಲ ಶ್ರೀನಂದಾ – ಥರ್ಮಲ್ ಡ್ರೋನ್ ಮೂಲಕ ಕಾರ್ಯಾಚರಣೆ
ರಾಜ್ಯದಲ್ಲಿ ಇತ್ತೀಚೆಗೆ ನಡೆದ ಚಾರಣಿಗರ ನಾಪತ್ತೆ ಘಟನೆಗಳ ಹಿನ್ನೆಲೆಯಲ್ಲಿ ಟ್ರೆಕ್ಕಿಂಗ್ ಹೋಗಲು ಬಯಸುವವರ ಸುರಕ್ಷತೆ ಕುರಿತಾಗಿ ಸರ್ಕಾರ ಗಂಭೀರ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ. ಈ ಸಂಬಂಧ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಚಾರಣಿಗರ ಭದ್ರತೆಯನ್ನು ಮತ್ತಷ್ಟು ಬಲಪಡಿಸಲು ಸಮಗ್ರ ಮಾರ್ಗಸೂಚಿ (SOP) ರೂಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು ಮತ್ತು ಚಾರಣಿಗರ ಸುರಕ್ಷತೆಯನ್ನು ಖಚಿತಪಡಿಸಲು ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿದೆ ಎಂದು ಸಚಿವರು ಅಭಿಪ್ರಾಯಪಟ್ಟಿದ್ದಾರೆ.
ಚಾರಣಿಗರ ಸುರಕ್ಷತೆ ಬಗ್ಗೆ ಕ್ರಮಕೈಗೊಳ್ಳಲು ರಾಜ್ಯದ ಮುಖ್ಯ ವನ್ಯಜೀವಿ ಪರಿಪಾಲಕರಿಗೆ ಸಚಿವ ಈಶ್ವರ ಖಂಡ್ರೆ ಅವರು ಲಿಖಿತ ಸೂಚನೆ ನೀಡಿದ್ದಾರೆ. ಚಾರಣ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಸ್ಪಷ್ಟ ಹಾಗೂ ಕಟ್ಟುನಿಟ್ಟಿನ SOP ರೂಪಿಸುವಂತೆ ತಿಳಿಸಿದ್ದಾರೆ. ಇದರ ಮೂಲಕ ಚಾರಣಕ್ಕೆ ಪ್ರಮಾಣಿತ ಮಾನದಂಡಗಳನ್ನು ಜಾರಿಗೊಳಿಸುವ ಉದ್ದೇಶ ಹೊಂದಲಾಗಿದೆ.
ಚಾರಣಿಗರ ಮೇಲ್ವಿಚಾರಣೆಗೆ ತಂತ್ರಜ್ಞಾನವನ್ನು ಬಳಸುವ ನಿಟ್ಟಿನಲ್ಲಿ ವಿಶೇಷ ಗಮನ ಹರಿಸಲು ಸೂಚಿಸಿದ್ದು, ಅರಣ್ಯ ಇಲಾಖೆ ಈಗಾಗಲೇ ಅಭಿವೃದ್ಧಿಪಡಿಸಿರುವ ಇ-ಗಸ್ತು ವ್ಯವಸ್ಥೆಯನ್ನು ಮತ್ತಷ್ಟು ವಿಸ್ತರಿಸುವಂತೆ ತಿಳಿಸಿದ್ದಾರೆ. ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಬಳಕೆಯಲ್ಲಿರುವ ಎಂ-ಸ್ಟ್ರೈಪ್ಸ್ ಆಪ್ ಮಾದರಿಯಲ್ಲೇ ಚಾರಣಿಗರಿಗಾಗಿ ಪ್ರತ್ಯೇಕ ಟ್ರ್ಯಾಕಿಂಗ್ ಆಪ್ ಅಭಿವೃದ್ಧಿಪಡಿಸಲು ತಿಳಿಸಿದ್ದಾರೆ. ಈ ಆಪ್ ಅನ್ನು ಚಾರಣ ಅವಧಿಯಲ್ಲಿ ತಾತ್ಕಾಲಿಕವಾಗಿ ಚಾರಣಿಗರ ಮೊಬೈಲ್ಗಳಲ್ಲಿ ಅಳವಡಿಸುವ ವ್ಯವಸ್ಥೆ ಮಾಡಲಾಗುತ್ತದೆ. ಇದರಿಂದ ಯಾರಾದರೂ ದಾರಿ ತಪ್ಪಿದ ಸಂದರ್ಭದಲ್ಲಿ ಅವರ ಸ್ಥಳವನ್ನು ಸುಲಭವಾಗಿ ಪತ್ತೆಹಚ್ಚಿ ಶೋಧ ಕಾರ್ಯಾಚರಣೆಗಳನ್ನು ವೇಗವಾಗಿ ನಡೆಸಲು ಸಾಧ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ಆಪ್ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವಂತೆ ಸಚಿವರು ಸೂಚಿಸಿದ್ದಾರೆ.
ಇದರ ಜೊತೆಗೆ, ಚಾರಣಿಗರ ಭದ್ರತೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಗುಂಪು ವಿಮೆ ಮಾಡಿಸುವುದನ್ನೂ ಕಡ್ಡಾಯಗೊಳಿಸಲು ನಿರ್ದೇಶನ ನೀಡಲಾಗಿದೆ. ಅಪಘಾತಗಳು ಅಥವಾ ಅನಾಹುತಗಳು ಸಂಭವಿಸಿದಲ್ಲಿ ಚಾರಣಿಗರಿಗೆ ಆರ್ಥಿಕ ಭದ್ರತೆ ಒದಗಿಸುವುದು ಇದರ ಮುಖ್ಯ ಉದ್ದೇಶವಾಗಿದೆ.
ಚಾರಣದ ವೇಳೆ ಮಾರ್ಗದರ್ಶನ ನೀಡುವ ನೇಚರ್ ಗೈಡ್ಗಳಿಗೆ ಸಹ ಹೆಚ್ಚಿನ ಹೊಣೆಗಾರಿಕೆ ನೀಡಲು ಸರ್ಕಾರ ಮುಂದಾಗಿದೆ. ಗೈಡ್ಗಳಿಗೆ ಕಡ್ಡಾಯವಾಗಿ ವೈರ್ಲೆಸ್ ಸೆಟ್ಗಳನ್ನು ಒದಗಿಸುವುದರಿಂದ ಅರಣ್ಯ ಇಲಾಖೆ ಹಾಗೂ ರಕ್ಷಣಾ ತಂಡಗಳೊಂದಿಗೆ ನಿರಂತರ ಸಂಪರ್ಕ ಸಾಧಿಸಲು ಸಾಧ್ಯವಾಗುತ್ತದೆ. ಇದರಿಂದ ತುರ್ತು ಸಂದರ್ಭಗಳಲ್ಲಿ ತಕ್ಷಣ ನೆರವು ಒದಗಿಸುವುದು ಸುಲಭವಾಗಲಿದೆ. ಅದೇ ವೇಳೆ, ಚಾರಣಿಗರನ್ನು ತಮ್ಮೊಂದಿಗೆ ಕರೆದುಕೊಂಡು ಹೋಗುವ ಗೈಡ್ಗಳ ಹೊಣೆಗಾರಿಕೆಯನ್ನು ಸ್ಪಷ್ಟವಾಗಿ ನಿಗದಿಪಡಿಸಲು ಸಚಿವರು ಸೂಚನೆ ನೀಡಿದ್ದಾರೆ. ಇದರಿಂದ ಚಾರಣದ ವೇಳೆ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಸಾಧ್ಯವಾಗುತ್ತದೆ ಮತ್ತು ಯಾವುದೇ ನಿರ್ಲಕ್ಷ್ಯದಿಂದ ಉಂಟಾಗುವ ಅಪಾಯಗಳನ್ನು ತಪ್ಪಿಸಬಹುದು.

ನೋಡಿರಿ

